Read - < 1 minute
ಬೆಂಗಳೂರು, ಸೆ.6: ಮಹದಾಯಿ ಜಲ ವಿವಾದವನ್ನು ಮಾತುಕತೆಯ ಮೂಲಕ ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಸಹಕರಿಸುವಂತೆ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
ಮಹದಾಯಿ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾಯಮೂರ್ತಿ ಜೆ. ಎಂ. ಪಂಚಾಲ್ ಹಾಗೂ ಸದಸ್ಯರಾದ ನ್ಯಾಯಮೂರ್ತಿ ವಿನಯ್ ಮಿತ್ತಲ್ ಹಾಗೂ ನ್ಯಾಯಮೂರ್ತಿ ಪಿ. ಎಸ್. ನಾರಾಯಣ ಅವರನ್ನು ಒಳಗೊಂಡ ಪೀಠವು ಸೆಪ್ಟೆಂಬರ್ 1 ರಂದು ನಡೆದ ಪ್ರಕರಣದ ಪಾಟೀ ಸವಾಲು ಸಂದರ್ಭದಲ್ಲಿ ಮೂರನೆಯ ಪಕ್ಷದ ಮಧ್ಯಸ್ಥಿಕೆಯೊಂದಿಗೆ ಅಥವಾ ಮಧ್ಯಸ್ಥಿಕೆ ಇಲ್ಲದೆ ಮಾತುಕತೆ ಹಾಗೂ ಸಂಧಾನದ ಮೂಲಕ ಈ ಜಲ ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಿ ಎಂದು ನೀಡಿರುವ ಸಲಹೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಲಕ್ಷೀಕಾಂತ್ ಪರ್ಸೆಕರ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆದು ಈ ಸಂಬಂಧ ಮೂರೂ ರಾಜ್ಯಗಳ ಮುಖ್ಯಮಂತ್ರಿಗಳ ಮೊದಲ ಸುತ್ತಿನ ಮಾತುಕತೆಗೆ ಕನರ್ಾಟಕವು ಆತಿಥೇಯ ರಾಜ್ಯವಾಗಿ ವೇದಿಕೆ ಕಲ್ಪಿಸಲು ಸಿದ್ಧವಿದೆ ಎಂದು ಮುಖ್ಯಮಂತ್ರಿ ಆಮಂತ್ರಣ ನೀಡಿದ್ದಾರೆ.
ಅಂತಾರಾಜ್ಯ ಜಲ ವಿವಾದ ಕಾಯಿದೆ-1956 ರ ಅಡಿಯಲ್ಲಿ ನ್ಯಾಯಾಧಿಕರಣದಲ್ಲಿ ದಾಖಲಾಗಿರುವ ನೀರು ಹಂಚಿಕೆಯ ಈ ಪ್ರಕರಣವನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳುವಂತೆ ನ್ಯಾಯಪೀಠವು ನೀಡಿದ ಸಲಹೆಯನ್ನು ರಾಜ್ಯದ ಪರ ವಕೀಲರು ಮಾತ್ರವಲ್ಲದೆ, ಗೋವಾ ಮತ್ತು ಮಹಾರಾಷ್ಟ್ರದ ವಕೀಲರೂ ಸ್ವಾಗತಿಸಿ ನ್ಯಾಯಪೀಠಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ನ್ಯಾಯಾಧಿಕರಣದ ಮುಂದಿರುವ ಬಾಕಿ ಇರುವ ತಮ್ಮ ಪ್ರಕರಣದ ಅರ್ಹತೆಯ ಕುರಿತು ಯಾವುದೇ ಪೂರ್ವಾಗ್ರಹವಿಲ್ಲದೆ ಮಾತುಕತೆ ಹಾಗೂ ಸಂಧಾನದ ಮೂಲಕ ಸೌಹಾರ್ಥಯುತ ಪರಿಹಾರ ಕಂಡುಕೊಳ್ಳಲು ಮೂರೂ ರಾಜ್ಯಗಳು ಬದ್ಧವಾಗಿವೆ. ತಮ್ಮ ರಾಜ್ಯವು ಸಹಕಾರ ಮತ್ತು ಸಹಯೋಗದ ನೈಜ ಮನೋಭಾವದಲ್ಲಿ ಈ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದೆ ಎಂಬ ವಿಶ್ವಾಸ ನನ್ನಲ್ಲಿದೆ. ಆದಕಾರಣ, ಸೆಪ್ಟೆಂಬರ್ ತಿಂಗಳೊಳಗೆ ಸಭೆಯನ್ನು ಆಯೋಜಿಸಲು ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯೊಂದಿಗೆ ಸಂವಾದ ನಡೆಸಲು ತಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿ ಎಂದು ಸಿದ್ದರಾಮಯ್ಯ ಅವರು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೆಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
Discussion about this post