Read - < 1 minute
ಬೆಂಗಳೂರು, ಸೆ.15: ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜಾಗಲು ಕಾಂಗ್ರೆಸ್ ನಿರ್ಧರಿಸಿದ್ದು ಇದೇ ಕಾರಣಕ್ಕಾಗಿ ಸೆಪ್ಟೆಂಬರ್ 27 ರಂದು ಮಹತ್ವದ ಕೆಪಿಸಿಸಿ ಕಾರ್ಯಕಾರಿಣಿ ಸಭೆಯನ್ನು ನಡೆಸಲು ತೀರ್ಮಾನಿಸಿದೆ.
ಪಕ್ಷದ ಹೈಕಮಾಂಡ್ ವತಿಯಿಂದ ಬಂದ ಸೂಚನೆಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27 ರಂದು ಕೆಪಿಸಿಸಿ ಕಾರ್ಯಕಾರಿಣಿಯನ್ನು ಕರೆಯಲಾಗಿದ್ದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ದಿಗ್ವಿಜಯಸಿಂಗ್ ಅವರು ಅಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳು,ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಪಲ್ಲಟಗಳ ನಡುವೆ ಮುಂದಿನ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಅಣಿಗೊಳಿಸಲು ಖುದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಸೂಚನೆ ನೀಡಿದ್ದು,ಈ ಸೂಚನೆಯ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಮೂಲಗಳು ಹೇಳಿವೆ.
ಪರಿಸ್ಥಿತಿಯನ್ನು ನೋಡಿದರೆ ವಿಧಾನಸಭಾ ಚುನಾವಣೆ ಅವಧಿಗಿಂತ ಮುಂಚಿತವಾಗಿ ನಡೆಯುವ ಸಾಧ್ಯತೆಗಳಿದ್ದು ಇದಕ್ಕೆ ಪಕ್ಷ ಈಗಿನಿಂದಲೇ ಸಜ್ಜಾಗಬೇಕು ಎಂದು ಮೇಡಂ ಸೋನಿಯಾಗಾಂಧಿ ಸೂಚನೆ ನೀಡಿದ್ದಾರೆ ಎಂದು ಅವು ಹೇಳಿವೆ.
ಹೀಗಾಗಿ ರಾಜ್ಯದ ಉಸ್ತುವಾರಿ ವಹಿಸಿಕೊಂಡಿರುವ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯಸಿಂಗ್ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಮ್ಮುಖದಲ್ಲಿ ಸೆಪ್ಟೆಂಬರ್ 27 ರಂದು ಮಹತ್ವದ ಕಾರ್ಯಕಾರಿಣಿ ಸಭೆ ನಡೆಯಲಿದೆ ಎಂದು ಅವು
ಸ್ಪಷ್ಟ ಪಡಿಸಿವೆ.
ಪಂಚಾಯತ್ ಸಮಾವೇಶ:
ಈ ಮಧ್ಯೆ ಚುನಾವಣೆಗೆ ತಳಮಟ್ಟದಿಂದ ಸಜ್ಜಾಗುವ ಸಲುವಾಗಿ ಸೆಪ್ಟೆಂಬರ್ 28 ರಂದು ಪಂಚಾಯ್ತ್ ಸಮಾವೇಶ ನಡೆಸಲು ಮೇಡಂ ಸೋನಿಯಾಗಾಂಧಿ ಸೂಚನೆ ನೀಡಿದ್ದು ಅದರನುಸಾರ ರಾಜ್ಯಾದ್ಯಂತ ಇರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ,ಉಪಾಧ್ಯಕ್ಷರು ಮತ್ತು ಸದಸ್ಯರು, ತಾಲ್ಲೂಕು ಪಂಚಾಯ್ತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಗ್ರಾಮಪಂಚಾಯ್ತಿಗಳ ಅಧ್ಯಕ್ಷರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಯ ಕುರಿತು ವಿವರ ನೀಡುವ ನೆಪದಲ್ಲಿ ಈ ಸಮಾವೇಶವನ್ನು ಕರೆಯಲಾಗಿದ್ದು ಅಂದಿನ ಸಮಾವೇಶದಲ್ಲಿ,ಮುಂದಿನ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜಾಗುವಂತೆ ಕಾಂಗ್ರೆಸ್ ನ ಪಂಚಾಯ್ತ್ ಪಡೆಗೆ ಸೂಚಿಸಲು ಸೋನಿಯಾ ಸ್ಪಷ್ಟ ಆದೇಶ ನೀಡಿದ್ದಾರೆ.
ಹೀಗಾಗಿ ಪಂಚಾಯತ್ ಸಮಾವೇಶಕ್ಕೂ ತರಾತುರಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು ಆರಂಭದಲ್ಲಿ ಹುಬ್ಬಳ್ಳಿಯಲ್ಲೇ ಈ ಪಂಚಾಯತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿತ್ತಾದರೂ ಮಹದಾಯಿ ವಿವಾದದ ಹಿನ್ನೆಲೆಯಲ್ಲಿ ಯಾವುದೇ ಗೊಂದಲವಾಗಕೂಡದು ಎಂಬ ಕಾರಣಕ್ಕಾಗಿ ಬೆಂಗಳೂರಿನಲ್ಲೇ ಈ ಸಮಾವೇಶವನ್ನು ನಡೆಸಲು ಪಕ್ಷ ಮುಂದಾಗಿದೆ ಎಂದು ಮೂಲಗಳು ವಿವರಿಸಿವೆ.
Discussion about this post