Read - < 1 minute
ಬೆಳಗಾವಿ, ಅ.5: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ಮುಕ್ತಾಯವಾಗಿದ್ದು, ಪ್ರಮುಖವಾಗಿ ನಾಲ್ಕು ನಿರ್ಣಯಗಳನ್ನು ಕೈಗೊಂಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಪ್ರದಾನ ಭಾಷಣ ಮಾಡಿದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶ ರಾಮ್ ಲಾಲ್ ಮುಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಂದು ಘೋಷಿಸಿದರು.
ಮುಂದಿನ ಮುಖ್ಯಮಂತ್ರಿ ಯಾರು ಎಂಬ ರಾಮ್ ಲಾಲ್ ಪ್ರಶ್ನೆಗೆ ಯಡಿಯೂರಪ್ಪ ಅವರ ಹೆಸರು ಸಭೆಯಲ್ಲಿ ಗಟ್ಟಿಯಾಗಿ ಕೇಳಿಬಂತು. ಈ ವೇಳೆ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ತಿರಂಗಯಾತ್ರಾದಲ್ಲೂ ಪಕ್ಷಾಧ್ಯಕ್ಷ ಅಮಿತ್ ಶಾ ಕೂಡ ಮುಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಎಂದೇ ಘೋಷಿಸಿದ್ದಾರೆ ಎಂದು ರಾಮ್ ಲಾಲ್ ಹೇಳಿದರು.
ಕಾರ್ಯಕಾರಿಣಿಯಲ್ಲಿ ಪ್ರಮುಖವಾಗಿ ನಾಲ್ಕು ನಿರ್ಣಯಗಳಿಗೆ ಪದಾಧಿಕಾರಿಗಳು ಒಮ್ಮತದ ಒಪ್ಪಿಗೆ ಸೂಚಿಸಿದ್ದಾರೆ.
ಮುಖ್ಯವಾಗಿ ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಮಾತುಕತೆ ಮೂಲಕವೇ ಇತ್ಯರ್ಥಪಡಿಸುವುದು, ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಹೋರಾಟ, ಕೇಂದ್ರ ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸುವುದು ಹಾಗೂ ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ನಿರ್ಣಯಗಳನ್ನು ಪಕ್ಷ ಕೈಗೊಂಡಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಇಲ್ಲವೆ ಸಿ.ಟಿ. ರವಿ ನಿರ್ಣಯಗಳನ್ನು ಮಂಡಿಸಲಿದ್ದು, ಕೇಂದ್ರ ಸಚಿವರಾದ ಡಿ.ವಿ. ಸದಾನಂದಗೌಡ, ಅನಂತ್ ಕುಮಾರ್, ರಮೇಶ್ ಜಿಗಜಿಣಗಿ, ನಿರ್ಮಲ ಸೀತಾರಾಮನ್, ರಾಜ್ಯ ಉಸ್ತುವಾರಿ ಮುರಳೀಧರರಾವ್, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್ ಸೇರಿದಂತೆ ಪದಾಧಿಕಾರಿಗಳೆಲ್ಲರೂ ಒಪ್ಪಿಗೆ ಸೂಚಿಸಿದರು.
ಇನ್ನು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಮುಖಂಡರೂ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಗಮನ ಹರಿಸಬೇಕೆಂಬ ಮಾತುಗಳು ಸಭೆಯಲ್ಲಿ ವ್ಯಕ್ತವಾಗಿವೆ.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಂಘಟನೆ ಕುರಿತಂತೆ ಕೇಂದ್ರ ವರಿಷ್ಠರು ತೀರ್ಮಾನಿಸಲಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರು ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಕೇವಲ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಅಧಿಕಾರಕ್ಕೆ ತರುವತ್ತ ಗಮನ ಹರಿಸಲು ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳ ವಿರುದ್ಧವೂ ಹೋಬಳಿ ಮಟ್ಟದಿಂದ ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸುವುದು ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಮನೆ ಮನೆಗೆ ತಲುಪಿಸಬೇಕೆಂದು ಪದಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಕರಾವಳಿ ತೀರ ಪ್ರದೇಶ, ಮಧ್ಯ ಕರ್ನಾಟಕ, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಬೇಕು. ಇದೇ ರೀತಿ ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕು. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಯಾರ ಹಂಗೂ ಇಲ್ಲದೆ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವ ಹೆಗ್ಗುರಿಯೊಂದಿಗೆ ಬೆಳಗಾವಿ ಕಾರ್ಯಕಾರಿಣಿ ಮುಕ್ತಾಯ ಕಂಡಿದೆ.
Discussion about this post