Read - < 1 minute
ಮುಂಬೈ, ಸೆ.೧೦: ತನ್ನ ವಿವಾಹವು ಲೈಂಗಿಕ ಸಂಬಂಧದೊಂದಿಗೆ ಸಂಪ್ನನ್ನವಾಗಿಲ್ಲ ಎಂಬ ಪತಿಯ ಆರೋಪವನ್ನು ಸಾಬೀತು ಪಡಿಸುವುದಕ್ಕಾಗಿ ಆತನು ವಿವಾಹವಾಗಿರುವ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಪತಿಯು ಕೇಳಬಹುದೇ ಮತ್ತು ಆ ಪ್ರಕಾರ ಕುಟುಂಬ ನ್ಯಾಯಾಲಯ ಆದೇಶಿಸಬಹುದೇ ? ಕಾನೂನಿನ ಸೂಕ್ಷ್ಮವಿರುವ ಈ ಪ್ರಶ್ನೆಗೆ ಹೌದು ಎಂಬ ಉತ್ತರವನ್ನು ಬಾಂಬೆ ಹೈಕೋರ್ಟ್ ನೀಡಿದೆ.
ವಿವಾಹವನ್ನು ಅನುಸರಿಸಿ ನಡೆಯಬೇಕಿರುವ ಲೈಂಗಿಕ ಸಂಬಂಧದೊಂದಿಗೆ ತನ್ನ ಮದುವೆಯು ಸಂಪನ್ನವಾಗಿಲ್ಲ ಎಂಬ ಕಾರಣಕ್ಕೆ ಅರ್ಜಿದಾರನು ತನ್ನ ಪತ್ನಿಯ ವಿರುದ್ಧ ಲೈಂಗಿಕ ದೂರನ್ನು ಮುಂದಿಟ್ಟುಕೊಂಡು ೨೦೧೧ರಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ.
ಅರ್ಜಿದಾರನ ದೂರನ್ನು ಖಚಿತ ಪಡಿಸಿಕೊಳ್ಳುವ ಸಲುವಾಗಿ ಮುಂಬೈ ಕುಟುಂಬ ನ್ಯಾಯಾಲಯವು ಈ ಪ್ರಕರಣದಲ್ಲಿ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿ ಪಡಿಸುವ ಆದೇಶ ಹೊರಡಿಸಿತ್ತು. ಉತ್ತರದಾಯಿ ಮಹಿಳೆಯು ಈ ಆದೇಶವನ್ನು ಬಾಂಬೆ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದಳು.
ಬಾಂಬೆ ಹೈಕೋರ್ಟಿನ ಜಸ್ಟಿಸ್ ಕೆ.ಕೆ. ತಾಟೆಡ್ ಅವರು ಮಹಿಳೆಯ ವಾದವನ್ನು ತಿರಸ್ಕರಿಸಿ, ಪತ್ನಿಯ ಲೈಂಗಿಕ ಸಾಮರ್ಥ್ಯವನ್ನು ಪ್ರಶ್ನಿಸಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಕೇಳುವ ಹಕ್ಕು ಪತಿಗೆ ಇದೆ ಮತ್ತು ಆ ನಿಟ್ಟಿನಲ್ಲಿ ಆದೇಶ ಹೊರಡಿಸುವ ಅಧಿಕಾರ ಮುಂಬಯಿ ಕುಟುಂಬ ನ್ಯಾಯಾಲಯಕ್ಕೆ ಇದೆ ಎಂದು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
ಮುಂಬೈ ಸರ್ ಜೆಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿಯಿಂದ ನಡೆಸಲ್ಪಡುವ ದೈಹಿಕ ಹಾಗೂ ಮಾನಸಿಕ ಪರೀಕ್ಷೆಗೆ ಒಳಪಡುವಂತೆ ಮಹಿಳೆಗೆ ಬಾಂಬೆ ಹೈಕೋರ್ಟ್ ಆದೇಶಿಸಿತು.
೨೦೧೦ ರಲ್ಲಿ ಮದುವೆಯಾದೊಡನೆಯೇ ತಾನು ಅನೇಕ ಬಾರಿ ತನ್ನ ಪತಿಯೊಂದಿಗೆ ಸಂಭೋಗ ಕ್ರಿಯೆಯಲ್ಲಿ ಪಾಲ್ಗೊಂಡಿದ್ದೇನೆ. ಆ ಪ್ರಕಾರ ನಮ್ಮ ಮದುವೆಯು ಲೈಂಗಿಕವಾಗಿ ಸಂಪನ್ನಗೊಂಡಿದೆ. ಆದುದರಿಂದ ನಾನು ವೈದ್ಯಕೀಯ ಪರೀಕ್ಷೆಗೆ ಒಳಪಡಲು ಬಯಸುವುದಿಲ್ಲ ಎಂದು ಮಹಿಳೆಯು ಕುಟುಂಬ ನ್ಯಾಯಾಲಯದಲ್ಲಿ ವಾದಿಸಿದ್ದಳು. ಆದರೆ ಆಕೆಯನ್ನು ವರಿಸಿದ ಪತಿಯು ನಮ್ಮ ಮದುವೆ ಲೈಂಗಿಕವಾಗಿ (ಸಂಭೋಗದೊಂದಿಗೆ) ಸಂಪನ್ನವಾಗಿಲ್ಲ. ಆಕೆಯಲ್ಲಿ ಸಂಭೋಗ ಸಾಮರ್ಥ್ಯವೇ ಇಲ್ಲ ಎಂಬ ಕಾರಣ ಒಡ್ಡಿ ಐದು ವರ್ಷಗಳ ಹಿಂದೆಯೇ ವಿವಾಹ ವಿಚ್ಛೇದನ ಕೋರಿದ್ದ.
ಈ ದಂಪತಿಗೆ ೨೦೧೦ರ ಡಿಸೆಂಬರ್ ತಿಂಗಳಲ್ಲಿ ಮದುವೆಯಾಗಿತ್ತು. ಆಗ ಪತಿಗೆ ೩೮ ಮತ್ತು ಪತ್ನಿಗೆ ೩೩ ವರ್ಷ ಪ್ರಾಯವಾಗಿತ್ತು. ಇಬ್ಬರಿಗೂ ಅದು ಎರಡನೇ ವಿವಾಹವಾಗಿತ್ತು.
ಈ ಪ್ರಕರಣದಲ್ಲಿ ಉತ್ತರದಾಯಿಯಾಗಿರುವ ಮಹಿಳೆಯು ಆಕೆಯನ್ನು ವಿವಾಹವಾಗಿರುವ ಪತಿಯು ಆರೋಪಿಸುವಂತೆ ಲೈಂಗಿಕ ಷಂಡತ್ವ ಹೊಂದಿರುವಳೇ ಎಂಬುದನ್ನು ವೈದ್ಯಕೀಯವಾಗಿ ಪರೀಕ್ಷಿಸಿ ವರದಿ ನೀಡುವಂತೆ ಬಾಂಬೆ ಹೈಕೋರ್ಟ್ ಜೆಜೆ ಆಸ್ಪತ್ರೆಯ ವೈದ್ಯಕೀಯ ಮಂಡಳಿಗೆ ಆದೇಶಿಸಿದೆ.
ಪತ್ನಿಯ ಲೈಂಗಿಕ ಸಾಮರ್ಥ್ಯವನ್ನು ಪ್ರಶ್ನಿಸಿ ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡುವಂತೆ ಕೇಳುವ ಹಕ್ಕು ಪತಿಗೆ ಇದೆ ಮತ್ತು ಆ ನಿಟ್ಟಿನಲ್ಲಿ ಆದೇಶ ಹೊರಡಿಸುವ ಅಧಿಕಾರ ಮುಂಬಯಿ ಕುಟುಂಬ ನ್ಯಾಯಾಲಯಕ್ಕೆ ಇದೆ. ಇಲ್ಲಿ ಪತ್ನಿಯ ವಾದವನ್ನು ನ್ಯಾಯಾಲಯ ತಿರಸ್ಕರಿಸುತ್ತದೆ.
-ಕೆ.ಕೆ. ತಾಟೆಡ್, ನ್ಯಾಯಾಧೀಶ
Discussion about this post