Read - < 1 minute
ಬೆಂಗಳೂರು, ಸೆ.15: ಮೇಯರ್ ಚುನಾವಣೆಗೆ ಹೊಸದಾಗಿ ಮತದಾರರನ್ನು ಸೇರ್ಪಡೆ ಮಾಡಲು ಅವಕಾಶ ಮಾಡಿಕೊಡುವ ಮೂಲಕ ಬಿಬಿಎಂಪಿ ಮೇಯರ್ ಚುನಾವಣೆಯನ್ನು ಕಾನೂನು ಬಾಹೀರವಾಗಿ ಮುಂದೂಡಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತೆ ಜಯಂತಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.
ಬಿಬಿಎಂಪಿ ಮೇಯರ್ ಹುದ್ದೆಯನ್ನು ಹಿಡಿಯಲೇಬೇಕು ಎಂಬ ದುರುದ್ದೇಶದಿಂದ ಕಾಂಗ್ರೆಸ್ ಹಲವಾರು ಜನಪ್ರತಿನಿಧಿಗಳ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುತ್ತಿದೆ.
ಪಾಲಿಕೆ ಆಯುಕ್ತರು ಮತ್ತು ಕಂದಾಯ ವಿಭಾಗದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಿನಾಕಾರಣ ಚುನಾವಣೆಯನ್ನು ಮುಂದೂಡಲು ಕಾಂಗ್ರೆಸ್ನೊಂದಿಗೆ ಪ್ರಾದೇಶಿಕ ಆಯುಕ್ತರು ಶಾಮೀಲಾಗಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ವಕ್ತಾರ ಎನ್.ಆರ್. ರಮೇಶ್ ನಗರದ ಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮಾತ್ರವಲ್ಲ ಪ್ರಾದೇಶಿಕ ಆಯುಕ್ತರ ಈ ವರ್ತನೆ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳಿಗೂ ಪತ್ರ ಬರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಸೆ.10ರಂದೇ ಮೇಯರ್ ಅವಧಿ ಪೂರ್ಣಗೊಂಡಿದ್ದು, 11ರಂದು ಕಡ್ಡಾಯವಾಗಿ ಚುನಾವಣೆ ನಡೆಸಲೇಬೇಕು. ಆದರೆ, ಪ್ರಾದೇಶಿಕ ಆಯುಕ್ತರು ದುರುದ್ದೇಶಪೂರ್ವಕವಾಗಿ ಚುನಾವಣೆಯನ್ನು ಮುಂದೂಡುವ ಮೂಲಕ ಆಡಳಿತ ಪಕ್ಷದೊಂದಿಗೆ ಶಾಮೀಲಾಗಿದ್ದಾರೆ ಎಂದು ರಮೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಬೇಕು ಎಂಬ ಉದ್ದೇಶದಿಂದ ಕಾಂಗ್ರೆಸಿಗರು ಬಳ್ಳಾರಿಯ ಅಲ್ಲಂವೀರಭದ್ರಪ್ಪ, ಉಡುಪಿಯ ಆಸ್ಕರ್ ಫರ್ನಾಂಡಿಸ್, ಹೈದರಾಬಾದ್ನ ಜಯರಾಂ ರಮೇಶ್, ಮುಧೋಳದ ರಾಮಪ್ಪತಿಮ್ಮಾಪುರ, ರಾಯಚೂರಿನ ಎನ್.ಎಸ್.ಬೋಸರಾಜ್ ಹಾಗೂ ತುರುವೇಕೆರೆಯ ಎಂ.ಡಿ.ಲಕ್ಷ್ಮಿನಾರಾಯಣ್ ಅವರ ಹೆಸರುಗಳನ್ನು ಮೇಯರ್ ಚುನಾವಣಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು, ಇದಕ್ಕೆ ಪ್ರಾದೇಶಿಕ ಆಯುಕ್ತೆ ಜಯಂತಿ ಸಹಕರಿಸಿದ್ದಾರೆ ಎನ್ನುವುದು ಬಿಜೆಪಿ ಆರೋಪವಾಗಿದೆ.
Discussion about this post