ಮೈಸೂರು, ಅ.5: ಸಾಂಸ್ಕೃತಿಕ ನಗರಿ ಮೈಸೂರು ನವರಾತ್ರಿ ಅಂಗವಾಗಿ ಆಯೋಜಿಸುವ ಮಹಿಳಾ ದಸರಾ ಮತ್ತು ಪ್ರದರ್ಶನಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಮಹಿಳಾ ದಸರಾದಲ್ಲಿ ಹಲವು ಬಗೆಯ ಮಳಿಗೆಗಳನ್ನು ತೆರೆಯಲಾಗಿದೆ. ಈ ಪ್ರದರ್ಶನದಲ್ಲಿ ಚನ್ನಪಟ್ಟಣ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಗುಲ್ಬರ್ಗ, ವಿಜಯಪುರ, ಹಾಸನ, ಚಿತ್ರದುರ್ಗ, ಕೊಡಗು ಹಾಗೂ ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಭಾಗವಹಿಸುವ ಮಹಿಳೆಯರು ತಾವೇ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಚನ್ನಪಟ್ಟಣದ ಮರದ ಗೊಂಬೆ, ಉತ್ತರ ಕರ್ನಾಟಕದ ರೊಟ್ಟಿ ತಿನಿಸು, ಕೊಡಗಿನ ವಿವಿಧ ಬಗೆಯ ವೈನ್ಗಳು, ಮೈಸೂರಿನ ಕಲಾವಿದರೊಬ್ಬರು ತಾವೇ ಕೈಯಲ್ಲಿ ತಯಾರಿಸಿದ ಆಭರಣಗಳು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದ್ದು, ಝಗಮಗಿಸುವ ವಸ್ತುಗಳು ನೋಡುವುದಕ್ಕೆ ಕಣ್ಮನ ಸೆಳೆಯುತ್ತಿವೆ.
ಈ ನಡುವೆ ಬಾಯಿ ರುಚಿಗಾಗಿ ವಿವಿಧ ಎಣ್ಣೆಯ ತಿಂಡಿ-ತಿನಿಸು ಸೇರಿದಂತೆ ಸಿಹಿ ತಿಂಡಿಗಳು ಭರ್ಜರಿ ಮಾರಾಟವಾಗುತ್ತಿವೆ.
ಅಲ್ಲದೆ, ನೆಲಹಾಸುಗಳು ಸಹ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ನಗರದ ಜೆ.ಎಲ್. ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ದಸರಾ ವಸ್ತು ಪ್ರದರ್ಶನ ಮದುವಣಗಿತ್ತಿಯಂತೆ ಶೃಂಗಾರದಿಂದ ಕಂಗೊಳಿಸುತ್ತಿದ್ದು, ಹಲವು ಬಗೆಯ ಕಲಾಕೃತಿಗಳು, ಆಭರಣಗಳು ಹಾಗೂ ಕೈಮಗ್ಗದಿಂದ ತಯಾರಿಸಿದ ವಸ್ತುಗಳ ಮಾರಾಟವು ನಡೆಯುತ್ತಿದ್ದು, 25ಕ್ಕೂ ಹೆಚ್ಚು ಅಂಗಡಿಗಳನ್ನು ತೆರೆಯಲಾಗಿದೆ.
ವಾದ್ಯ ಮೇಳ: ನಾಡಹಬ್ಬ ದಸರಾ ಅಂಗವಾಗಿ 2 ಗಂಟೆಗಳ ಕಾಲ ಸಮೂಹ ವಾದ್ಯಮೇಳ ವಿಶೇಷ ಕಾರ್ಯಕ್ರಮ ನಡೆಯಲಿದೆ.
ಮೈಸೂರು ಅರಮನೆ ಆವರಣದಲ್ಲಿ ನಾಳೆ ಸಂಜೆ 7 ರಿಂದ 9 ಗಂಟೆವರೆಗೆ ನಡೆಯಲಿರುವ ಸಮೂಹ ವಾದ್ಯಮೇಳದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗೌರವ ವಂಚನೆ ಸ್ವೀಕರಿಸಲಿದ್ದಾರೆ.
ಸರ್ಕಾರ ಹಾಗೂ ಪೊಲೀಸ್ ಬ್ಯಾಂಡ್ಗಳ ಎಲ್ಲ ಸಮೂಹ ವಾದ್ಯಮೇಳ ಇದಾಗಿದ್ದು, ಸಾರ್ವಜನಿಕರಿಗೆ ರಸದೌತಣ ನೀಡಲಿದೆ.
ಎಲ್ಲ ಪೊಲೀಸ್ ಬ್ಯಾಂಡ್ ಗಳು ಒಂದೆಡೆ ಸೇರಿ ಸಮೂಹ ವಾದ್ಯ ಸಂಗೀತ ಸುಧೆ ಹರಿಸಲಿದೆ. ರಾಜ್ಯದ ವಿವಿಧೆಡೆ ಇರುವ ಪೊಲೀಸ್ ಬ್ಯಾಂಡ್ಗಳು ಸಹ ಇದರಲ್ಲಿ ಭಾಗವಹಿಸಿ ಮನರಂಜನೆ ನೀಡಲಿದೆ.
ಅಚ್ಚುಕಟ್ಟಾದ ದಸರಾ ವಸ್ತು ಪ್ರದರ್ಶನದ
ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದಲ್ಲಿ ಪ್ರತಿ ಬಾರಿಯೂ ಐತಿಹಾಸಿಕ ವಸ್ತು ಪ್ರದರ್ಶನದ ಬಗ್ಗೆ ಅವ್ಯವಸ್ಥೆ ಆರೋಪ ಕೇಳಿಬರುತ್ತಿತ್ತು. ಆರಂಂಭಕ್ಕೆ ಮುಂಚೆಯೇ ಮಳಿಗೆಯಿಲ್ಲದೆ ವಸ್ತು ಪ್ರದರ್ಶನ ಹೇಗೆ ಸಾಧ್ಯ ಎಂಬ ಕೂಗು ಇರುತ್ತಿತ್ತು. ಆದರೆ, ಈ ಬಾರಿ ದಸರಾ ಉತ್ಸವದಲ್ಲಿ ಎಲ್ಲ ಆರೋಪಗಳನ್ನೂ ಬದಿಗೊತ್ತಿ ಅದ್ಧೂರಿಯಾಗಿ, ಅಚ್ಚುಕಟ್ಟಾಗಿ ವಸ್ತುಪ್ರದರ್ಶನ ನಡೆಯುತ್ತಿದೆ.
ಪ್ರತಿವರ್ಷ ನಾಡಹಬ್ಬ ದಸರಾ ಉದ್ಘಾಟನೆ ದಿನದಂದು ವಸ್ತು ಪ್ರದರ್ಶನದಲ್ಲಿ ಖಾಲಿ ಮಳಿಗೆಗಳು ಉದ್ಘಾಟನೆಯಾಗುತ್ತಿದ್ದವು. ಈ ಬಾರಿ ಸರ್ಕಾರಿ ಮಳಿಗೆಯೊಂದಿಗೆ ಖಾಸಗಿ ಮಳಿಗೆಗಳು ಕೂಡ ಉದ್ಘಾಟನೆಯಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಈವರೆಗೂ ದಸರಾ ಉತ್ಸವದ ಸಂದರ್ಭದಲ್ಲಿ ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಮಳಿಗೆಗಳು ಆರಂಭಗೊಳ್ಳದೆ ಸರ್ಕಾರಿ ಇಲಾಖೆಗಳು ಮಳಿಗೆ ತೆರೆಯಲು ಅನುದಾನ ಬಿಡುಗಡೆಯಾಗಿಲ್ಲ ಎಂದು ಕಾರಣ ನೀಡುತ್ತಿದ್ದರು. ಆದರೆ, ಈ ಬಾರಿ ಎಲ್ಲ ಸಮಸ್ಯೆಗಳೂ ಬಗೆಹರಿದಿದ್ದು, ಸರ್ಕಾರಿ ಮಳಿಗೆಗಳು ವಸ್ತು ಪ್ರದರ್ಶನದಲ್ಲಿ ಆರಂಭವಾಗಿವೆ. ಹಾಗಾಗಿ ವೆುಸೂರು ದಸರಾ ವಸ್ತು ಪ್ರದರ್ಶನಕ್ಕೆ ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ವಸ್ತು ಪ್ರದರ್ಶನದಲ್ಲಿ ಗೃಹೋಪಯೋಗಿ ವಸ್ತುಗಳು ಹೆಚ್ಚು ಆಕರ್ಷಿತವಾಗಿದ್ದು, ಮಹಿಳಾ ಪ್ರವಾಸಿಗರನ್ನು ವಿಶೇಷವಾಗಿ ಸೆಳೆಯುತ್ತಿದೆ. ಈ ನಡುವೆ ವಿವಿಧ ಬಗೆಯ ತಿಂಡಿ-ತಿನಿಸುಗಳ ಮಾರಾಟ ಭರಾಟೆ ಜೋರಾಗಿ ನಡೆಯುತ್ತಿದೆ.
Discussion about this post