Read - < 1 minute
ನವದೆಹಲಿ, ಸೆ.೧೭: ಬಲೂಚಿಸ್ತಾನದಲ್ಲಿನ ಮಾನವಹಕ್ಕು ಉಲ್ಲಂಘನೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಪಾಕಿಸ್ಥಾನ ಕಂಗೆಟ್ಟಿದೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದಲ್ಲಿ ಬಲೂಚ್ ಪ್ರತಿನಿಧಿಯಾಗಿರುವ ಮೆಹರಾನ್ ಮರ‌್ರಿ ಹೇಳಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಕೆಂಪು ಕೋಟೆಯ ಮೇಲಿಂದ ಮಾಡಿದ್ದ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಬಲೂಚಿಸ್ಥಾನದಲ್ಲಿ ಪಾಕ್ ಸರಕಾರ ಹಾಗೂ ಸೇನೆ ನಡೆಸುತ್ತಿರುವ ದೌರ್ಜನ್ಯವನ್ನು ಉಲ್ಲೇಖೀಸಿ ವಿಶ್ವ ಗಮನವನ್ನು ಸೆಳೆದಿದ್ದರು. ಇದರಿಂದ ತೀವ್ರ ಕಂಗೆಟ್ಟ ಪಾಕಿಸ್ಥಾನ, ಬಲೂಚಿಸ್ತಾನದಲ್ಲಿ ಕಳೆದ ಕೆಲವು ವಾರಗಳಿಂದ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದ ಬಳಿಕ ಪಿಓಕೆ ಹಾಗೂ ಬಲೂಚಿಸ್ತಾನದಲ್ಲಿ ಪಾಕ್ ನಡೆಸುತ್ತಿರುವ ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆಯ ಬಗ್ಗೆ ವಿಶ್ವ ಗಮನವನ್ನು ಸೆಳೆಯುತ್ತಿದ್ದು ಆ ಮೂಲಕ ಪಾಕ್ ಸರ್ಕಾರದ ಮೇಲೆ ತೀವ್ರವಾದ ಒತ್ತಡ ಹೇರುತ್ತಿದೆ. ಇದರಿಂದ ಕಂಗೆಟ್ಟಿರುವ ಪಾಕಿಸ್ಥಾನ, ಬಲೂಚಿಸ್ಥಾನದಲ್ಲಿ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು ಅಲ್ಲಿನ ಪೌರರನ್ನು ಅಪಹರಿಸುವ, ಅವರ ಮೇಲೆ ದಾಳಿ ಎಸಗುವ ಕೆಲಸ ಮಾಡುತ್ತಿದೆ. ಇದು ಪಾಕ್ ಸರಕಾರದ ಹತಾಶೆಯನ್ನು ಸೂಚಿಸುತ್ತದೆ ಎಂದು ಮರ‌್ರಿ ಹೇಳಿದರು.
ನಿನ್ನೆಯಷ್ಟೇ ಭಾರತದ ಪ್ರಸಾರ ಭಾರತಿಯು, ಆಲ್ ಇಂಡಿಯಾ ರೇಡಿಯೋ ಬಲೂಚಿ ಸೇವೆಗಾಗಿ ವೆಬ್‌ಸೈಟ್ ಹಾಗೂ ಮೊಬೈಲ್ ಆ್ಯಪ್ ಚಾಲನೆಗೊಳಿಸಿದೆ. ಆ ಮೂಲಕ ಅದು ಬಲೂಚಿ ಭಾಷೆಯನ್ನು ಆಡುವ ವಿಶ್ವದಾದ್ಯಂತದ ಜನರೊಂದಿಗೆ ಬಲೂಚಿಸ್ತಾನದ ಜನರನ್ನು ಕೂಡ ತಲುಪಲು ಮುಂದಾಗಿರುವುದು ಗಮನಾರ್ಹವಾಗಿದೆ.
ಬಲೂಚಿಸ್ಥಾನದ ವಿಷಯವನ್ನು ಭಾರತದ ಪ್ರಧಾನಿ ಮೋದಿ ಅವರು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಎತ್ತಿ ವಿಶ್ವ ಗಮನ ಸೆಳೆದಿರುವುದಕ್ಕೆ ಹಾಗೂ ಈಗ ಎರಡು ದಿನಗಳ ಹಿಂದೆ ಮತ್ತೂಮ್ಮೆ ಈ ವಿಷಯವನ್ನು ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಸಭೆಯಲ್ಲಿ ಎತ್ತಿರುವುದಕ್ಕೆ ನಾವು ಭಾರತಕ್ಕೆ ತುಂಬಾ ಕೃತಜ್ಞರಾಗಿದ್ದೇವೆ.
-ಮೆಹರಾನ್ ಮರ‌್ರಿ
Discussion about this post