ವ್ಯಾಸ ಮಹರ್ಷಿ ಹೇಳಿದ “ಬಲವಾನ್ ಇಂದ್ರಿಯಗ್ರಮೊ ವಿದ್ವಾಂಸಮಪಿಕರ್ಷತಿ” (ಇಂದ್ರಿಯಲಾಲಸೆಗಳ ಶಕ್ತಿ ವಿದ್ವಾಂಸರನ್ನೂ ಸಹ ಸೆಳೆಯುತ್ತದೆ) ಎನ್ನುವ ಶ್ಲೋಕವನ್ನು ತನ್ನ ಸ್ವ ನಿಯಂತ್ರಣದ ಬಗ್ಗೆ ವಿಪರೀತ ಆತ್ಮವಿಶ್ವಾಸ ಹೊಂದಿದ್ದ ಶಿಷ್ಯ ಜೈಮಿನಿ “ಬಲವಾನ್ ಇಂದ್ರಿಯಗ್ರಮೊ ವಿದ್ವಾಂಸ ನಾಪಕರ್ಷತಿ” (ಇಂದ್ರಿಯಲಾಲಸೆಗಳ ಶಕ್ತಿ ವಿದ್ವಾಂಸರ ಮನಸ್ಸನ್ನು ಚೆದುರಿಸದು) ಎಂದು ಬರೆದ. ಇದನ್ನು ನೋಡಿದ ವ್ಯಾಸರು ಏನೂ ಮಾತನ್ನಾಡಲಿಲ್ಲ. ಜೈಮಿನಿ ಕಾಡಿನಲ್ಲಿ ವಾಸಿಸುತ್ತಾ ತಪಸ್ಸಿನಲ್ಲಿ ತೊಡಗಿದ್ದಾಗ ಒಂದು ಸಾಯಂಕಾಲ ಬಿರುಗಾಳಿ-ಮಳೆ ಆರಂಭವಾಯಿತು. ಆ ವೇಳೆ ಮಳೆಯಲ್ಲಿ ತೊಯ್ದ ಸುಂದರಿ ಯುವತಿಯೊಬ್ಬಳು ಋಷಿಯ ಗುಡಿಸಲಿಗೆ ಬಂದು ಆಶ್ರಯ ಕೇಳಿದಳು. ಜೈಮಿನಿ ಅನುಮತಿಸಿದ. ಗುಡಿಸಲಿನ ಮೂಲೆಯಲ್ಲಿದ್ದ ಒಲೆಯ ಬೆಂಕಿಯ ಬಳಿ ಆಕೆ ತನ್ನ ಬಟ್ಟೆಗಳನ್ನು ಒಣಗಿಸಿಕೊಳ್ಳತೊಡಗಿದಳು. ಅಷ್ಟರಲ್ಲಿ ಜೋರಾಗಿ ಗಾಳಿ ಬೀಸಿ ಅವಳ ಸೀರೆಯನ್ನು ಹಾರಿಸಿಕೊಂಡು ಹೋಯಿತು. ಆಕೆ ಬೆತ್ತಲಾದಳು. ಯುವ ತಪಸ್ವಿ ಬಹು ಹೊತ್ತು ತನ್ನನ್ನು ತಾನು ನಿಗ್ರಹಿಸಿಕೊಳ್ಳಲಾರದೆ ತನ್ನ ಇಂದ್ರಿಯ ಕಾಮನೆ ಪೂರೈಸುವಂತೆ ಆಕೆಯಲ್ಲಿ ವಿನಂತಿಸಿದ. ಆಕೆ “ನೀನೊಬ್ಬ ತಪಸ್ವಿ. ಇಂಥಹ ಇಂದ್ರಿಯಲೋಲುಪತೆಗೆ ಒಳಗಾಗಬಾರದು” ಎಂದು ತರುಣ ಮುನಿಯನ್ನು ವಿಮುಖನನ್ನಾಗಿಸಲು ಪ್ರಯತ್ನಿಸಿದಳು. ಪ್ರಯೋಜನವಾಗದಿದ್ದಾಗ ತನ್ನನ್ನು ಬೆನ್ನ ಮೇಲೆ ಹೊತ್ತು ಅಗ್ನಿಯ ಸುತ್ತ ಮೂರು ಪ್ರದಕ್ಷಿಣೆ ಹಾಕುವೆಯಾದರೆ ನಿನ್ನ ಆಸೆ ಈಡೇರಿಸುವೆನೆಂದು ಷರತ್ತು ಹಾಕಿದಳು. ಕಾಮಪ್ರಮತ್ತನಾಗಿದ್ದ ತರುಣ ಮುನಿ ಅದಕ್ಕೆ ತಕ್ಷಣ ಆಕೆಯನ್ನು ಹೊತ್ತುಕೊಂಡು ಅಗ್ನಿಗೆ ಪ್ರದಕ್ಷಿಣೆ ಹಾಕಲು ಶುರು ಮಾಡುತ್ತಿದ್ದಂತೆ ಆಕೆ ಆತನ ತಲೆಯ ಮೇಲೆ ಮೊಟಕುತ್ತಾ “ವಿದ್ವಾಂಸ ನಾಪ ಕರ್ಷತಿ?” ಎಂದು ಅಣಕಿಸಿದಳು. ತನ್ನ ಗುರುವಿನ ಮಾತನ್ನು ನೆನಪಿಸುತ್ತಿದ್ದಾಳಲ್ಲ ಎಂದು ಅಚ್ಚರಿಗೊಂಡು ಆಕೆಯನ್ನು ಕೆಳಗಿಳಿಸುತ್ತಿದ್ದಂತೆ ವ್ಯಾಸರು ನಸುನಗುತ್ತಾ ನಿಂತಿದ್ದರು. ತನ್ನ ತಪ್ಪಿನ ಅರಿವಾದ ಜೈಮಿನಿ ಶ್ಲೋಕವನ್ನು ಮೂಲ ರೂಪಕ್ಕೆ ಬದಲಾಯಿಸಿದ.
“ಯಸ್ಯ ಸ್ತ್ರೀ ತಸ್ಯ ಭೋಗೇಚ್ಛಾ” ಎನ್ನುತ್ತದೆ ಉಪನಿಷದ್ವಾಕ್ಯ. ಬ್ರಹ್ಮಚರ್ಯದ ಪ್ರತಿಜ್ಞೆ ಪಾಲಿಸುವುದೆಂದರೆ ಮಹಿಳೆಯರೊಂದಿಗೆ ಇಂದ್ರಿಯ ಸುಖ ಹೊಂದದಿರುವುದು ಮಾತ್ರವಲ್ಲ. ಮಹಿಳೆಯರ ಬಗ್ಗೆ ಚಿಂತಿಸುವುದು, ಅವರನ್ನು ನೋಡುವುದು, ಮಾತಾಡುವುದು, ಸ್ಪರ್ಶಿಸುವುದು ಕೂಡಾ ಬ್ರಹ್ಮಚರ್ಯದ ವ್ರತಭಂಗಕ್ಕೆ ಕಾರಣವಾಗುತ್ತದೆ. ಯಾವುದೇ ವ್ಯಕ್ತಿ ಅಂತಹ ನಿಯಮಗಳನ್ನು ಉಲ್ಲಂಘಿಸಿ ತಾನು ಅತಿಮಾನುಷ ವ್ಯಕ್ತಿ ಎಂದು ಭಾವಿಸಿದರೆ ಆತನ ಅವನತಿ ಖಚಿತ. ಇದು ಧರ್ಮಶಾಸ್ತ್ರಗಳ ಮಾತು. ಮಹಾನ್ ವ್ಯಕ್ತಿಗಳ ಅನುಭವದ ಕೂಸು. ಆದರೆ ಗಾಂಧಿ ಈ ನಿಯಮ, ಸಂಪ್ರದಾಯ, ಶ್ರೇಷ್ಠ ವ್ಯಕ್ತಿಗಳ ಮಾತನ್ನು ನಿರ್ಲಕ್ಷಿಸಿದರು. ಮಹಿಳೆಯರ ಸಂಘದಲ್ಲಿ ಮಾತ್ರ ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಪೂರ್ಣಗೊಳಿಸುವುದಾಗಿ ಹೇಳಿ ಯಾವುದೇ ಅಡ್ಡಿ ಇಲ್ಲದೆ ತಮ್ಮ ಪ್ರಯೋಗ ಆರಂಭಿಸಿದರು.
ಗಾಂಧಿ ನವಖಾಲಿಯಲ್ಲಿದ್ದಾಗ ಉಳಿದ ಸಹವರ್ತಿಗಳ ಜೊತೆ ಅವರ ಮೊಮ್ಮಗಳು 19 ವರ್ಷದ ಮನು ಕೂಡಾ ಇದ್ದಳು. ತಮ್ಮ ಬ್ರಹ್ಮಚರ್ಯ ಪ್ರತಿಜ್ಞೆಯ ಪರೀಕ್ಷೆಗೆ ಪ್ರತೀ ರಾತ್ರಿ ಹುಲ್ಲಿನ ಹಾಸಿಗೆಯ ಮೇಲೆ ಮನುವಿನ ಜೊತೆ ಕಳೆಯುವುದಾಗಿ ಗಾಂಧಿ ಪ್ರಕಟಿಸಿದರು. ಮನು ಇದಕ್ಕೆ ಒಪ್ಪಿಗೆ ಸೂಚಿಸಿದಳು. ಈ ಪ್ರಕ್ರಿಯೆ 1947ರ ಫೆಬ್ರವರಿಯವರೆಗೆ ಇಡೀ ನವಖಾಲಿಯಲ್ಲಿ ಗಾಂಧಿ ಹೆಜ್ಜೆಯನ್ನು ಹಿಂಬಾಲಿಸಿತು. ಪ್ರಾರ್ಥನೆ ಸಮಯದವರೆಗೆ ನಾವಿಬ್ಬರು ಪರಸ್ಪರರ ಹಿತೋಷ್ಣದಲ್ಲಿ ಆರಾಮಾಗಿ ನಿದ್ರಿಸುತ್ತಿದ್ದೆವು ಎಂದು ಸ್ವತಃ ಮನು ಹೇಳಿದ್ದಳು. ಗಾಂಧಿಯ ಇಂತಹ ವರ್ತನೆ ಅವರ ಸಣ್ಣ ತಂಡದಲ್ಲಿ ಕೂಡಲೇ ದಿಗ್ಭ್ರಾಂತಿಯನ್ನುಂಡುಮಾಡಿತು. ಏನಾಗುತ್ತಿದೆ ಎನ್ನುವುದರ ಸುದ್ದಿ ಅವರ ಪ್ರವಾಸ ಪ್ರದೇಶಗಳಲ್ಲಿ ಮಾತ್ರವಲ್ಲದೆ ಬೇರೆಡೆಯೂ ಹರಡಿತು. ದೆಹಲಿಗೂ ಸುದ್ದಿ ತಲುಪಿತು. ಹೊಸ ವೈಸ್ ರಾಯ್ ಮೌಂಟ್ ಬ್ಯಾಟನ್ ಜೊತೆ ಮಹತ್ವದ ಮಾತುಕತೆ ಆರಂಭಿಸಲು ಎದುರು ನೋಡುತ್ತಿದ್ದ ಕಾಂಗ್ರೆಸ್ ಧುರೀಣರಿಗೆ ಈ ವಾರ್ತೆ ತೀವ್ರ ಆಘಾತ ಉಂಟು ಮಾಡಿತು. ತಮ್ಮ ಬಗೆಗಿನ ಕ್ಷುಲ್ಲಕ ಮಾತು, ಗೊಣಗುಟ್ಟುವಿಕೆ ಮತ್ತು ವ್ಯಂಗ್ಯ ಮಾತುಗಳ ಮೇಲೆ ಮುಗಿಬಿದ್ದ ಗಾಂಧಿ ಒಂದು ಪ್ರಾರ್ಥನಾ ಸಭೆಯಲ್ಲಿ ಈ ಕುರಿತು ಸಮಜಾಯಿಶಿ ನೀಡಿದರು. ಮೊಮ್ಮಗಳು ಮನು ಪ್ರತಿ ರಾತ್ರಿ ತಮ್ಮ ಜೊತೆ ಹಾಸಿಗೆ ಹಂಚಿಕೊಂಡಿದ್ದಾಗಿ ಹೇಳಿದ ಅವರು, ಆಕೆ ಏಕೆ ಅಲ್ಲಿದ್ದಳು ಎನ್ನುವುದನ್ನೂ ವಿವರಿಸಿದರು. ಇದು ಅವರ ಸುತ್ತಲಿದ್ದವರನ್ನೇನೋ ಸಮಧಾನಪಡಿಸಿತು. ಆದರೆ ಯಾವಾಗ ಅವರು ಈ ವಿವರವನ್ನು ತಮ್ಮ ಹರಿಜನ ಪತ್ರಿಕೆಯಲ್ಲಿ ಪ್ರಕಟಿಸಲು ಕಳುಹಿಸಿದರೋ ಮತ್ತೆ ಬಿರುಗಾಳಿ ಎದ್ದಿತು. ಇಬ್ಬರು ಸಂಪಾದಕರು ಪತ್ರಿಕೆ ತ್ಯಜಿಸಿದರು. ಪತ್ರಿಕೆಯ ಟ್ರಸ್ಟಿಗಳು ಗಾಂಧಿ ಬರೆದ ವಿವರ ಪ್ರಕಟಿಸಲು ನಿರಾಕರಿಸಿದರು(ಫ್ರೀಡಮ್ ಅಟ್ ಮಿಡ್ ನೈಟ್, ಲ್ಯಾರಿ ಕಾಲಿನ್ಸ್ & ಲ್ಯಾಪಿಯೆರ್).
ಗಾಂಧಿ ತಮ್ಮ ಈ ನಿರ್ಧಾರವನ್ನು ಬಿಹಾರ ಪ್ರವಾಸದಲ್ಲೂ ವಿಸ್ತರಿಸಲು ಬಯಸಿದಾಗ ಕಾಂಗ್ರೆಸ್ಸಿನಲ್ಲಿ ಬಿರುಗಾಳಿಯೆದ್ದಿತು. ಬಿಹಾರದ ಸಂಪ್ರದಾಯಸ್ಥ ಹಿಂದೂಗಳ ಮೇಲೆ ಇದು ಉಂಟು ಮಾಡಬಹುದಾದ ಪರಿಣಾಮವನ್ನು ಊಹಿಸಿಯೇ ಕಾಂಗ್ರೆಸ್ಸಿಗರ ಮೈ ಬೆವರಲು ಆರಂಭವಾಯಿತು. ಗಾಂಧಿಯ ಮನವೊಲಿಸುವ ಯತ್ನವನ್ನು ಹಲವರು ಮಾಡಿದರು. ಆದರೆ ಪ್ರಯೋಜನವಾಗಲಿಲ್ಲ. ಕೊನೆಗೆ ಮನುವೇ ಬುದ್ಧಿವಂತಿಕೆಯಿಂದ ಈ ಆಚರಣೆ ಕೊನೆಗೊಳಿಸಲು ಸಹಾಯ ಮಾಡಿದಳು. ಬಿಹಾರಕ್ಕೆ ತಾನು ಬರುವುದಿಲ್ಲವಾಗಿಯೂ ಆದರೆ ಮುಂದೆ ತಾನು ಅವರ ಜೊತೆಯೇ ಇರುವುದಾಗಿ ಗಾಂಧಿಯನ್ನು ಮನವೊಲಿಸಿದಳು. ಆಕೆಯ ನಿರ್ಧಾರ ತಾತ್ಕಾಲಿಕವಾಗಿತ್ತು. ಗಾಂಧಿ ದುಃಖತಪ್ತ ಹೃದಯದಿಂದ ಮನುವಿನಿಂದ ಬೀಳ್ಕೊಂಡರು.
ತಮ್ಮ ಆಶ್ರಮವಾಸಿ ಪುರುಷರು ಮತ್ತು ಮಹಿಳೆಯರ ಎದುರೇ ಗಾಂಧಿ ಸ್ನಾನ ಮಾಡುತ್ತಿದ್ದರು. ನಗ್ನರಾಗಿ ಆಯಿಲ್ ಮಸಾಜ್ ಮಾಡಿಕೊಳ್ಳುತ್ತಿದ್ದರು. ಯುವತಿಯರು ಮೇಲಿಂದ ಮೇಲೆ ಅವರಿಗೆ ಅಂಗಮರ್ಧನ ಸೇವೆ ಮಾಡುತ್ತಿದ್ದರು. ಸರಳತೆಯ ಮೂರ್ತಿ ಗಾಂಧಿ ಎಂದು ಹೇಳುವವರು ಈ ವಿಚಾರ ಗಮನಿಸಿಲ್ಲ ಅನ್ನಿಸುತ್ತೆ. ಹುಡುಗಿಯರು ಮಸಾಜ್ ಮಾಡುತ್ತಿರುವಾಗಲೇ ಅವರು ಸಂದರ್ಶನವನ್ನೂ ನೀಡುತ್ತಿದ್ದರು. ಅದೇ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರನ್ನೂ ಭೇಟಿ ಮಾಡುತ್ತಿದ್ದರು. ಅವರು ಕಡಿಮೆ ಬಟ್ಟೆ ಧರಿಸುತ್ತಿದ್ದರು. ತಮ್ಮ ಪುರುಷ ಹಾಗೂ ಮಹಿಳಾ ಸಹವರ್ತಿಗಳಿಗೂ ಹಾಗೇ ಮಾಡಲು ಉತ್ತೇಜಿಸುತ್ತಿದ್ದರು. ವಸ್ತ್ರಗಳು ಮರ್ಯಾದೆಯ ಮೋಸದ ತಿಳುವಳಿಕೆಯನ್ನಷ್ಟೇ ಉತ್ತೇಜಿಸುತ್ತವೆ ಎನ್ನುತ್ತಿದ್ದರು. ನಗ್ನಸ್ಥಿತಿಯು ತಾವು ಸಾಧಿಸಲು ಪ್ರಯತ್ನಿಸುತ್ತಿರುವ ನೈಜ ಮುಗ್ಧತೆಯನ್ನು ಪ್ರತಿನಿಧಿಸುತ್ತದೆ ಎನ್ನುವುದು ಅವರ ವಿಚಾರವಾಗಿತ್ತು(ಫ್ರೀಡಮ್ ಅಟ್ ಮಿಡ್ ನೈಟ್, ಲ್ಯಾರಿ ಕಾಲಿನ್ಸ್ & ಲ್ಯಾಪಿಯೆರ್).
ಮೈತುಂಬಾ ಬ್ಯಾಂಡೇಜ್ ಮಾಡಲ್ಪಟ್ಟಿದ್ದ ವ್ಯಕ್ತಿಯೊಬ್ಬನನ್ನು ರಾತ್ರಿ ಹತ್ತು ಗಂಟೆಗೆ ಕಲ್ಕತ್ತಾದ ಗಾಂಧಿ ನಿವಾಸವಾದ “ಹೈದರಿ ಮ್ಯಾನ್ಶನ್”ಗೆ ಉದ್ರಿಕ್ತ ಗುಂಪೊಂದು ಕರೆದುಕೊಂಡು ಬಂತು. ಬಂಗಾಳದಲ್ಲಿ ಹಿಂದೂಗಳ ನರಮೇಧಕ್ಕೆ ಕಾರಣನಾದ ಮುಸ್ಲಿಮ್ ಗೂಂಡಾ ನಾಯಕ ಸುಹ್ರಾವರ್ದಿಗೆ ಗಾಂಧಿ ರಕ್ಷಣೆ ನೀಡಿದ್ದಾರೆ ಎನ್ನುವುದನ್ನು ತಿಳಿದ ಮೇಲಂತೂ ಅವರ ಕೋಪ ಇಮ್ಮಡಿಸಿತ್ತು. ಅವರೆಲ್ಲಾ ತಾರಕ ಸ್ವರದಲ್ಲಿ ಗಾಂಧಿ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. “ನನ್ನ ನಿದ್ರೆ ಹಾಳಾಯಿತು. ಏನಾಗುತ್ತದೆ ಎಂದು ಗೊತ್ತಾಗದೆ ಶಾಂತವಾಗಿ ಮಲಗಲು ಯತ್ನಿಸಿದೆ. ಗವಾಕ್ಷಿಯ ಗಾಜುಗಳನ್ನೊಡೆಯುವ ಶಬ್ಧ ಕೇಳಿಸಿತು. ನನ್ನ ಪಕ್ಕ ಧೀರ ಹುಡುಗಿಯರಾದ ಮನು ಹಾಗೂ ಅಭಾ ಇದ್ದರು. ಅವರು ನಿದ್ರಿಸಿರಲಿಲ್ಲ. ಆದರೆ ನನ್ನ ಕಣ್ಣುಗಳು ನನಗರಿವಿಲ್ಲದಂತೆಯೇ ಮುಚ್ಚಿಕೊಂಡಿದ್ದವು. ಮನು ಮತ್ತು ಅಭಾ ಉದ್ರಿಕ್ತರನ್ನು ಸಮಾಧಾನಪಡಿಸಲು ನೋಡಿದರು. ದೇವರ ದಯ, ಆ ಗುಂಪಿನಲ್ಲಿದ್ದವರು ಸದ್ಯ ಇವರಿಗೆ ಯಾವ ಅಪಾಯವನ್ನೂ ಮಾಡಲಿಲ್ಲ.” ಗುಂಪು ಹಾಕಿ ಸ್ಟಿಕ್, ಕಲ್ಲುಗಳನ್ನು ತೂರುವ ಮೂಲಕ ಪೀಠೋಪಕರಣಗಳನ್ನು, ಚಿತ್ರಪಟಗಳನ್ನು ಒಡೆಯಲಾರಂಭಿಸಿತು. ಕೆಲವರು ಮಧ್ಯದ ಹಾಲ್ ಪ್ರಯೋಗಿಸಿ ಕೋಣೆಗಳ ಬಾಗಿಲು ಬಡಿಯತೊಡಗಿದರು. ಗಾಂಧಿ ಎದ್ದು ಬಾಗಿಲ ಹೊಸ್ತಿಲ ಮೇಲೆ ನಿಂತು “ಏನಿದು ಹುಚ್ಚಾಟ, ನೀವೇಕೆ ನನ್ನ ಮೇಲೆ ದಾಳಿ ಮಾಡುತ್ತಿಲ್ಲ?” ಎಂದು ಪ್ರಶ್ನಿಸಿದರು. ಗುಂಪಿನಲ್ಲಿದ್ದವರು ಆಕ್ರೋಶದಿಂದ ಕೂಗಿದರು “ಎಲ್ಲಿದ್ದಾನೆ ಆ ರ್ಯಾಸ್ಕಲ್ ಸುಹ್ರಾವರ್ದಿ?” “ಅವರು ಸುಹ್ರಾವರ್ದಿಯನ್ನು ಶಿಕ್ಷಿಸುವ ಉದ್ದೇಶ ಹೊಂದಿದ್ದರು. ಆದರೆ ಅದೃಷ್ಟವಶಾತ್ ಆತ ನನ್ನೊಡನೆ ನೌಕಾಲಿಗೆ ಹೊರಡಲು ಸಿದ್ಧನಾಗಲು ತನ್ನ ಮನೆಗೆ ಹೋಗಿದ್ದ. ಅವನನ್ನು ಕಾಣದಿದ್ದುದರಿಂದ ಗುಂಪಿನ ಕೋಪ ನನ್ನತ್ತ ತಿರುಗಿತು.” ಅಷ್ಟರಲ್ಲಿ ಆ ಮನೆಯ ಇಬ್ಬರು ಮುಸ್ಲಿಮ್ ಸದಸ್ಯರು ಓಡೋಡಿ ಬಂದರು. ಉದ್ರಿಕ್ತ ಗುಂಪು ಅವರನ್ನು ಬೆನ್ನಟ್ಟಿತ್ತು. ಒಬ್ಬನ ಮೈಯಿಂದ ರಕ್ತ ಸೋರುತ್ತಿತ್ತು. ಆತ ಗಾಂಧಿ ಬೆನ್ನ ಹಿಂದೆ ಆಶ್ರಯ ಪಡೆದ!(ಮಹಾತ್ಮ ಗಾಂಧಿ – ದಿ ಲಾಸ್ಟ್ ಫೇಸ್, ಪ್ಯಾರೇಲಾಲ್)
Discussion about this post