Read - 2 minutes
ಬೆಂಗಳೂರು, ಸೆ.19: ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಇಂದು ಮದ್ಯಾಹ್ನ ನಡೆದಿದ್ದು, ರಾಜ್ಯದಿಂದ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ಸ್‌ನಂತೆ 10 ದಿನಗಳ ಕಾಲ ನೀರು ಹರಿಸುವಂತೆ ಸಮಿತಿ ಆದೇಶ ನೀಡಿದೆ.
ದೆಹಲಿಯ ಶ್ರಮಶಕ್ತಿ ಭವನದಲ್ಲಿ ಶಶಿಶೇಖರ್ ನೇತೃತ್ವದಲ್ಲಿ ನಡೆಯುತ್ತಿರುವ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಶಿಶೇಖರ್ ನೀರು ಹಂಚಿಕೆ ಬಗ್ಗೆ ಹೊಸ ಸೂತ್ರ ನೀಡಿದ್ದಾರೆ. ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ನೀರು ಹಂಚಿಕೆ ಲೆಕ್ಕಚಾರದಲ್ಲಿ ತೊಡಗಿದ್ದಾರೆ. ಕರ್ನಾಟಕ, ಕೇರಳ, ಪುದುಚೆರಿ, ತಮಿಳುನಾಡು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ರಾಜ್ಯದ ಕಾವೇರಿ ಕೊಳ್ಳದಲ್ಲಿ ಈ ಬಾರಿ ಮಳೆಯಿಲ್ಲದೇ ಬರ ಆವರಿಸಿದೆ. ಬೆಳೆಗಳಿಗೆ ನೀರು ಕೊಡುತ್ತಿಲ್ಲ ಎಂಬ ಕರ್ನಾಟಕದ ವಾದಕ್ಕೆ ಮನ್ನಣೆ ನೀಡದ ಸಮಿತಿ, ರಾಜ್ಯ ಮಂಡಿಸಿದ ಯಾವುದೇ ಅಂಕಿ ಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಮಾತ್ರವಲ್ಲ ರಾಜ್ಯದ ವಾಸ್ತವ ಸ್ಥಿತಿಗೆ ತದ್ವಿರುದ್ದವಾಗಿ ತೀರ್ಪು ನೀಡಿದೆ.
ಭುಗಿಲೆದ್ದ ಆಕ್ರೋಶ
ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಕಾವೇರಿ ನದಿ ಪಾತ್ರದ ರಾಜ್ಯದ ಜಿಲ್ಲೆಗಳಲ್ಲಿ ಮತ್ತೆ ಆಕೋಶ ಭುಗಿಲೆದ್ದಿದೆ.
ಮೇಲುಸ್ತುವಾರಿ ಸಮಿತಿ ಸಭೆಯ ತೀರ್ಪು ರಾಜ್ಯಕ್ಕೆ ತದ್ವಿರುದ್ದವಾಗಿ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು, ಮಂಡ್ಯ, ಮೈಸೂರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಪ್ರಮುಖವಾಗಿ ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದ್ದು, ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರೈತ ಪರ ಮುಖಂಡರು, ರೈತರು ಹಾಗೂ ಹೋರಾಟಗಾರರು ಬೀಗಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಈಶ್ವರಪ್ಪ ಕಿಡಿ:
ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ, ರಾಜ್ಯದ ಜನರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ಒಂದು ಹನಿ ನೀರನ್ನೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಎಸ್‌ವೈ ಆಕ್ರೋಶ
ಕಾವೇರಿ ವಿಚಾರ ಕುರಿತಂತೆ ರಾಜ್ಯಕ್ಕೆ ಮತ್ತೊಮ್ಮೆ ಅನ್ಯಾಯವಾಗಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಿದ್ಧರಾಮಯ್ಯ ರಾಜ್ಯದ ರೈತರ ಹಿತ ಕಡೆಗಣಿಸಿದ್ದಾರೆ. ಅವರ ಸ್ಥಾನದಲ್ಲಿ ನಾನಿದ್ದರೆ ರಾಜೀನಾಮೆ ಬಿಸಾಕಿ, ಜನರ ತೀರ್ಪಿಗೆ ಹೋಗುತ್ತಿದ್ದೆ ಎಂದಿದ್ದಾರೆ.
ಭಾರೀ ಬಿಗಿ ಭದ್ರತೆ
ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.ತಮಿಳುನಾಡು ಗಡಿ, ಬೆಂಗಳೂರು ಸೇರಿದಂತೆ ಕಾವೇರಿ ಕೊಳ್ಳ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕಳೆದ ವಾರ ಕಾವೇರಿ ಹೋರಾಟದ ವೇಳೆ ಬೆಂಗಳೂರಿನಲ್ಲಿ ಸಂಭವಿಸಿದ ಹಿಂಸಾಚಾರದಿಂದ ಜಾಗೃತಗೊಂಡಿರುವ ಪೊಲೀಸರು, ಮೇಲುಸ್ತುವಾರಿ ಸಮಿತಿ ಸಭೆಯಿಂದ ರಾಜ್ಯಕ್ಕೆ ಏನಾದರೂ ಹಿನ್ನಡೆ ಉಂಟಾದರೆ ಅದರಿಂದ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಮೇಲೆ ಪರಿಣಾಮ ಬೀರದಂತೆ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ.
ಕಾವೇರಿ ಹೋರಾಟ ಪ್ರಾರಂಭದ ದಿನದಿಂದಲೂ ಭದ್ರತಾ ಪಡೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಸೋಮವಾರ ಅದೇ ಬಂದೋಬಸ್ತ್ ವ್ಯವಸ್ಥೆ ಮುಂದುವರಿಯಲಿದ್ದು, ಸರಿ ಸುಮಾರು 20 ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆಯಲ್ಲಿರುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾವೇರಿ ಕೊಳ್ಳ ವ್ಯಾಪ್ತಿಯ ಮತ್ತು ಕಾವೇರಿ ನೀರು ಬಳಕೆ ಮಾಡುವ ಮಂಡ್ಯ, ಮೈಸೂರು, ಹಾಸನ, ಬೆಂಗಳೂರು, ರಾಮನಗರ ಹಾಗೂ ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಆನೇಕಲ್, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಭದ್ರತಾ ಪಡೆಗಳ ಜತೆ ಸ್ಥಳೀಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಗಡಿ ಭಾಗದಲ್ಲಿ ತಮಿಳುನಾಡಿಗೆ ಸಂಚರಿಸುವ ವಾಹನಗಳ ಮೇಲೂ ತೀವ್ರ ನಿಗಾವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಕೆಲವರನ್ನು ಮುನ್ನೆಚ್ಚರಿಕೆಯಾಗಿ ವಶಕ್ಕೆ ಪಡೆಯಲು ಅಧಿಕಾರಿಗಳು ಸೂಚಿಸಿದ್ದು, ತಮಿಳುನಾಡು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಪೊಲೀಸ್ ಗಸ್ತು ನಡೆಸುವಂತೆ ನಿರ್ದೇಶಿಸಿದ್ದಾರೆ.
ತರಾತುರಿಯಲ್ಲಿ ಬೆಂಗಳೂರಿಗೆ ಮರಳಿದ ಸಿಎಂ:
ಮೇಲುಸ್ತುವಾರಿ ಸಮಿತಿ ಆದೇಶ ಹೊರಬರುವ ನಿರೀಕ್ಷೆ ಇದ್ದಂತೆಯೇ ಮುಖ್ಯಮಂತ್ರಿ ಚಾಮರಾಜನಗರದ ತಮ್ಮ ನಿಗದಿತ ಕಾರ್ಯಕ್ರಮದಿಂದ ತರಾತುರಿಯಾಗಿ ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಗೆ ಮರಳಿದರು.
Discussion about this post