Read - < 1 minute
ಬೆಂಗಳೂರು: ದನ ಕಾಯೋನು ಚಿತ್ರದ ಬಗ್ಗೆ ಹಬ್ಬಿರುವ ವಿಚಾರ ಕೇವಲ ವದಂತಿಗಳು. ಇದರಲ್ಲಿ ಯಾವುದೇ ಹುರುಳಿಲ್ಲ. ಮೊದಲೇ ನಿಗದಿಯಾದಂತೆ ಇದೇ 7ರಂದು ಚಿತ್ರ ಬಿಡುಗಡೆಗೊಳ್ಳಲಿದೆ ಎಂದು ನಿರ್ಮಾಪಕ ಕನಕಪುರ ಶ್ರೀನಿವಾಸ್ ಸ್ಪಷ್ಟಪಡಿಸಿದ್ದಾರೆ.
ದನ ಕಾಯೋನು ಚಿತ್ರದ ನಿರ್ದೇಶಕ ಹಾಗೂ ನಟ ದುನಿಯಾ ವಿಜಿ ಅವರು ಕಮಿಷನ್ ಪಡೆದಿದ್ದಾರೆ ಎಂಬ ಆರೋಪವನ್ನು ತಾವು ಮಾಡಿದ್ದಾಗಿ ವದಂತಿ ಹಬ್ಬಿದೆ. ಈ ಬಗ್ಗೆ ಸ್ವತಃ ಯೋಗರಾಜ್ ಭಟ್ ಹಾಗೂ ವಿಜಿ ನನ್ನೊಂದಿಗೆ ಮಾತನಾಡಿದ್ದಾರೆ. ಅವರಿಗೂ ಸಹ ನಾನು ಆ ರೀತಿ ಹೇಳಿಕೆ ನೀಡಿಲ್ಲ ಎಂದು ತಿಳಿಸಿದ್ದೇನೆ. ಯಾರೋ ಬೇಕೆಂದೇ ಈ ರೀತಿಯ ವದಂತಿ ಹಬ್ಬಿಸಿದ್ದಾರೆ ಎಂದು ಹೇಳಿದರು.
ಚಿತ್ರ ಬಿಡುಗಡೆ ಸಂದರ್ಭದಲ್ಲಿ ಬೇಕೆಂದೇ ಯಾರೋ ಪಿತೂರಿ ನಡೆಸುತ್ತಿದ್ದಾರೆ ಎಂಬ ಅನುಮಾನ ಕಾಡುತ್ತಿದೆ. ಆದರೆ, ನಾನು ನಿರ್ದೇಶಕರಾಗಲಿ ಅಥವಾ ನಟನ ಬಗ್ಗೆಯಾಗಲಿ ಯಾವುದೇ ತಪ್ಪು ಅಭಿಪ್ರಾಯ ಹೊಂದಿಲ್ಲ. ನಮ್ಮ ನಡುವೆ ಉತ್ತಮ ಬಾಂಧವ್ಯವಿದೆ. ನಿನ್ನೆಯೂ ಸಹ ಅವರೊಂದಿಗೆ ಮಾತನಾಡಿದ್ದೆ. ಇಂದೂ ಸಹ ಈ ವಿಚಾರವಾಗಿ ಮಾತನಾಡಿ ಸ್ಪಷ್ಟಪಡಿಸಿದ್ದೇನೆ ಎಂದು ತಿಳಿಸಿದರು.
ದನ ಕಾಯೋನು ಚಿತ್ರದ ಚಿತ್ರೀಕರಣ ಆರಂಭಗೊಂಡಾಗಿನಿಂದ ಒಂದಲ್ಲ ಒಂದು ವಿವಾದಗಳು ಎದುರಾಗುತ್ತಲೇ ಇದ್ದವು. ಇದೀಗ ಎಲ್ಲವೂ ಮುಗಿದು ಇನ್ನೇನು ಚಿತ್ರ ಬಿಡುಗಡೆಯಾಗುತ್ತದೆ ಎನ್ನುವಾಗ ಮತ್ತೊಂದು ವಿವಾದ ಎದುರಾಗಿದೆ.
ಇದಕ್ಕೆ ಕಾರಣ ಏನೆಂಬುದು ಮಾತ್ರ ತಿಳಿದುಬಂದಿಲ್ಲ. ಈ ರೀತಿ ವದಂತಿಯನ್ನು ಯಾರು, ಏಕೆ ಹಬ್ಬಿಸುತ್ತಿದ್ದಾರೆ ಎಂಬುದು ಸಹ ಯಕ್ಷಪ್ರಶ್ನೆಯಾಗಿದೆ.
ಇದೇ ಶುಕ್ರವಾರ ಅಂದರೆ ಅಕ್ಟೋಬರ್ 7ರಂದು ಬಹು ನಿರೀಕ್ಷಿತ ಚಿತ್ರಗಳಾದ ಎಚ್.ಡಿ. ಕುಮಾರಸ್ವಾಮಿಯವರ ಪುತ್ರ ನಟಿಸಿರುವ ಜಾಗ್ವಾರ್, ಪ್ರಕಾಶ್ ರೈ ನಿರ್ದೇಶನ ಹಾಗೂ ನಟನೆಯುಳ್ಳ ಇದೊಳ್ಳೆ ರಾಮಾಯಣ ಹಾಗೂ ದುನಿಯಾ ವಿಜಿಯ ದನ ಕಾಯೋನು ಚಿತ್ರ ಬಿಡುಗಡೆಗೊಳ್ಳುತ್ತಿದ್ದು, ಚಿತ್ರಮಂದಿರದ ಕೊರತೆ ಇನ್ನಿತರ ಸಮಸ್ಯೆಗಳು ಇರುವ ಹಿನ್ನೆಲೆಯಲ್ಲಿ ಯಾರೋ ನಡೆಸಿರುವ ಕುತಂತ್ರವಾಗಿರಬಹುದೇ ಎಂಬ ಅನುಮಾನಗಳನ್ನು ಮೂಡಿಸುತ್ತಿವೆ.
Discussion about this post