Read - < 1 minute
ಇಸ್ಲಾಮಾಬಾದ್/ಹೊಸದಿಲ್ಲಿ,ಸೆ.23- ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನವಾಜ್ ಶರೀಫ್ ಮಾಡಿದ ಭಾಷಣ ಸ್ವತಃ ಪಾಕಿಸ್ಥಾನದಲ್ಲೇ ತೀವ್ರ ಟೀಕೆಗೆ ಗುರಿಯಾಗಿದೆ. ಕಾಶ್ಮೀರವನ್ನು ಕೇಂದ್ರಿಕರಿಸಿ ಶರೀಫ್ ಮಾಡಿದ ಭಾಷಣದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ಥಾನ ನಗೆಪಾಟಲಿಗೀಡಾಗಿದ್ದು, ಅಲ್ಲದೇ ಮೂಲೆಗುಂಪಾಗಿದೆ ಎಂದು ಪಾಕ್ ವಿಪಕ್ಷಗಳು ಟೀಕಿಸಿವೆ.
ಶರೀಫ್ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರರ ನೇತೃತ್ವದಲ್ಲಿ ದೇಶ ಜಾಗತಿಕವಾಗಿ ಮೂಲೆಗುಂಪಾಗುತ್ತಿದೆ. ಅಂತೆಯೇ ನೆರೆ ರಾಷ್ಟ್ರಗಳ ಜತೆಗಿನ ಸೌಹಾರ್ದಯುತ ಸಂಬಂಧನ್ನು ಕಳೆದುಕೊಳ್ಳುತ್ತಿದೆ ಎಂದು ಪಾಕಿಸ್ಥಾನ ಸಂಸತ್ ವಿಪಕ್ಷ ನಾಯಕ ಸೈಯದ್ ಖುರ್ಷಿದ್ ಶಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಭಾಷಣ
ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಬುಧವಾರ ಶರೀಫ್ ಮಾಡಿದ ಭಾಷಣ ಸಾಮಾನ್ಯವಾಗಿತ್ತು. ಭಾರತದ ಬಗ್ಗೆ ಸೂಕ್ತವಾಗಿ ಮಾತನಾಡಲು ಸಾಧ್ಯವಾಗಿಲ್ಲ ಎಂದು ಪಾಕಿಸ್ಥಾನ ಪೀಪಲ್ಸ್ ಪಕ್ಷ(ಪಿಪಿಪಿ)ದ ನಾಯಕರೂ ಆದ ಶಾ ಟೀಕಿಸಿದ್ದಾರೆ.
ದೇಶದಲ್ಲಿ ನಡೆದ ಭಯೋತ್ಪಾದನೆ ಘಟನೆಗಳಲ್ಲಿ ಭಾರತದ ಪಾತ್ರ ಮತ್ತು ಅದರಿಂದ ಪಾಕಿಸ್ಥಾನ ಎದುರಿಸುತ್ತಿರುವ ಸಮಸ್ಯೆ ಮತ್ತು ಬೆದರಿಕೆಗಳ ಬಗ್ಗೆ ಖಚಿತವಾಗಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಲು ಶರೀಫ್ ವಿಫಲರಾಗಿದ್ದಾರೆ ಎಂದು ತಮ್ಮ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಶಾ ಉಲ್ಲೇಖಿಸಿದ್ದಾರೆ.
ಅಂತೆಯೇ ಇತ್ತೀಚಿನ ಘಟನೆಯಿಂದ ಭಾರತ ಮತ್ತು ಪಾಕಿಸ್ಥಾನ ನಡುವೆ ಯುದ್ಧ ಸ್ಥಿತಿ ಉಂಟಾಗಿದ್ದು, ಈ ಬಗ್ಗೆ ಶರೀಫ್ ಸರ್ಕಾರ ಸಂಸತ್ನ ವಿಶ್ವಾಸ ಪಡೆದುಕೊಳ್ಳಬೇಕು. ಮಾತ್ರವಲ್ಲದೇ ದೇಶದ ವಿದೇಶಾಂಗ ಮತ್ತು ರಕ್ಷಣಾ ನೀತಿಗಳನ್ನು ಪರಿಶೀಲಿಸಬೇಕು ಎಂದು ಶಾ ಸಲಹೆ ನೀಡಿದ್ದಾರೆ.
Discussion about this post