ವಿಶ್ವಸಂಸ್ಥೆ,ಸೆ.26 ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಘಂಟಾಘೋಷವಾಗಿ ಸಾರಿ ಹೇಳಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಾಶ್ಮೀರ ಎಂದಿಗೂ ನಮ್ಮದೆ, ಅದಾಗಲೇ ಭಾರತ ನಿರ್ಧರಿಸಿದೆ. ಕಾಶ್ಮೀರ ಬಗ್ಗೆ ಕನಸು ಕಾಣುವುದನ್ನು ಬಿಡಿ ಎಂದು ಖಡಕ್ಕಾಗಿ ನುಡಿದಿದ್ದಾರೆ.
ವಿಶ್ವಸಂಸ್ಥೆಯ 71ನೇ ಸಾಮಾನ್ಯ ಸಭೆ ಉದ್ದೇಶಿಸಿ ಸುಮಾರು 20 ನಿಮಿಷ ಮಾತನಾಡಿದ ಅವರು, ಕಾಶ್ಮೀರ, ಬಲೂಚಿಸ್ಥಾನ, ಉರಿ ಮತ್ತು ಪಠಾಣ್ಕೋಟ್ ದಾಳಿಯನ್ನು ಪ್ರಸ್ತಾಪಿಸಿ ಪಾಕಿಸ್ಥಾನ ವಿರುದ್ಧ ಹರಿಹಾಯ್ದರು.
ಬಲೂಚಿಸ್ಥಾನದಲ್ಲಿನ ತನ್ನದೇ ನಾಗರಿಕರ ಮೇಲೆ ಅತ್ಯಂತ ಕೆಟ್ಟದಾಗಿ ದಬ್ಬಾಳಿಕೆ, ಹಿಂಸಾಚಾರ ನಡೆಸಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಪಾಕಿಸ್ಥಾನ, ಕಾಶ್ಮೀರದ ಬಗ್ಗೆ ಮಾತನಾಡುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಪಾಕ್ ಪ್ರಧಾನಿ ನವಾಜ್ ಶರೀಫ್ ನೀಡಿದ್ದ ಹೇಳಿಕೆಗೆ ಸುಷ್ಮಾ ತಿರುಗೇಟು ನೀಡಿದರು.
ಭಯೋತ್ಪಾದನೆ ಎಂಬುದು ಇಂದು ವಿಶ್ವಕ್ಕೇ ಒದಗಿರುವ ಬೃಹತ್ ಗಂಡಾಂತರವಾಗಿದೆ. ಪರಿಸ್ಥಿತಿ ಹೀಗಿರುವಾಗ ನಮ್ಮ ನೆರೆರಾಷ್ಟ್ರವೊಂದು ನೇರವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಮಾತ್ರವಲ್ಲದೆ ಗಾಜಿನ ಮನೆಯಲ್ಲಿ ನಿಂತು ಕಲ್ಲು ಹೊಡೆಯುವ ದುಃಸ್ಸಾಹಸಕ್ಕೆ ಕೈಹಾಕುತ್ತಿದೆ ಎಂದು ವಿಶ್ವದ ಪ್ರಮುಖ ರಾಷ್ಟ್ರಗಳ ನಾಯಕರ ಸಮ್ಮುಖದಲ್ಲಿ ಅವರು ಪಾಕಿಸ್ಥಾನಕ್ಕೆ ನೇರ ಎಚ್ಚರಿಕೆ ನೀಡಿದರು. ಆ ಮೂಲಕ ಸ್ವತಃ ಪಾಕಿಸ್ಥಾನವೇ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದೆ ಎಂದು ಈ ಹಿಂದೆ ನವಾಜ್ ಷರೀಪ್ ಅವರ ಹೇಳಿಕೆಗೆ ಸುಷ್ಮಾ ಅವರು ತಿರುಗೇಟು ನೀಡಿದರು.
ಸ್ನೇಹ ಬಯಸಿದರೆ ದಾಳಿ ನಡೆಸಿದರು
ನಮ್ಮ ಪ್ರಧಾನಿ ನರೇಂದ್ರ ಮೋದಿಯವರು ಕಾಬೂಲ್ನಿಂದ ಇಸ್ಲಾಮಾಬಾದ್ಗೆ ತೆರಳಿ ಸ್ನೇಹದ ಹಸ್ತ ಚಾಚಿದರು, ಆದರೆ ನಾವು ಪ್ರತಿಯಾಗಿ ಪಠಾಣ್ ಕೋಟ್, ಉರಿ ದಾಳಿಯನ್ನು ಪಡೆಯಬೇಕಾಯಿತು. ಭಾರತ ಸ್ನೇಹ ಬಯಸಿದರೆ, ಆ ದೇಶ ಮಾತ್ರ ಗಡಿ ಮೂಲಕ ಭಯೋತ್ಪಾದನೆಯನ್ನು ಛೂಬಿಡುತ್ತಿದೆ. ಪಾಕಿಸ್ಥಾನದ ಗಡಿಯಾಚೆಗಿನ ಭಯೋತ್ಪಾದನೆಗೆ ಬಹದೂರ್ ಅಲಿ ಜೀವಂತ ಸಾಕ್ಷಿ ಎಂದು ಬೊಟ್ಟು ಮಾಡಿದರು.
ಜಾಗತಿಕ ತಾಪಮಾನ ಮತ್ತು ಇನ್ನಿತರ ಸಮಸ್ಯೆಗಳ ಕುರಿತಾಗಿ ಮಾತನ್ನು ಪ್ರಾರಂಭಿಸಿ ಸುಷ್ಮಾ ಸ್ವರಾಜ್ ಅವರು ಭಯೋತ್ಪಾದನೆಯ ವಿಷಯಕ್ಕೆ ಬಂದಾಗ ನೆರೆ ರಾಷ್ಟ್ರ ಪಾಕಿಸ್ಥಾನವನ್ನೇ ಗುರಿಯಾಗಿಸಿ, ಪಠಾಣ್ ಕೋಟ್, ಉರಿ ಸೇನಾ ನೆಲೆಯ ಭಯೋತ್ಪಾದಕ ದಾಳಿಗಳ ವಿಷಯವನ್ನು ಪ್ರಸ್ತಾಪಿಸಿದರು.
ಇನ್ನು ಭಾಷಣದ ಆರಂಭದಲ್ಲಿ ಸುಷ್ಮಾ ಸ್ವರಾಜ್ ಅವರು ಸ್ವಚ್ಛ ಭಾರತ, ಬೇಟಿ ಬಚಾವೊ ಬೇಟಿ ಪಡಾವೋ, ಮೇಕ್ ಇನ್ ಇಂಡಿಯಾ, ಜನಧನ್, ಡಿಜಿಟಲ್ ಇಂಡಿಯಾ ಸೇರಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಇತ್ಯಾದಿ ಯೋಜನೆಗಳು ಯಾವ ರೀತಿಯಲ್ಲಿ ವಿಶ್ವಸಂಸ್ಥೆಯ ಆಶಯಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ವಿಷಯವನ್ನು ಸಂಕ್ಷಿಪ್ತವಾಗಿ ವಿವರಿಸಿದರು.
ಅಂತೆಯೇ ವಿಶ್ವದ ಪ್ರಮುಖ ಸಮಸ್ಯೆಗಳಗಿರುವ ಬಡತನ, ಲಿಂಗ ತಾರತಮ್ಯ, ಸ್ವಚ್ಛತೆಯ ಕೊರತೆ ಇತ್ಯಾದಿಗಳ ವಿರುದ್ಧ ಭಾರತ ಸರಕಾರ ಪರಿಣಾಮಕಾರಿ ಹೋರಾಟವನ್ನು ಕೈಗೊಂಡಿದೆ ಎಂದರು. ಮಾತ್ರವಲ್ಲದೇ ಪ್ಯಾರೀಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತ ಒಪ್ಪಿಗೆ ಸೂಚಿಸಿದೆ. ಮಹಾತ್ಮ ಗಾಂಧಿ ಜನ್ಮದಿನವಾದ ಅ.2 ರಂದು ಈ ಒಪ್ಪಂದಕ್ಕೆ ಭಾರತ ಸಹಿ ಹಾಕಲಿದೆ ಎಂದೂ ಸಷ್ಮಾ ಸ್ವರಾಜ್ ತಿಳಿಸಿದರು.
Discussion about this post