ಶಿವಮೊಗ್ಗ, ಸೆ.2: ಕನಿಷ್ಟ ವೇತನ, ಪಿಂಚಣಿ ವ್ಯವಸ್ಥೆ, ರಸ್ತೆ ಸುರಕ್ಷತಾ ಮಸೂದೆ ವಾಪಾಸ್ ಪಡೆಯುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಭಾರತ್ ಬಂದ್‌ಗೆ ಇಂದು ಕರೆ ನೀಡಿದ್ದರೂ, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ 10 ಕಾರ್ಮಿಕ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ಇದರಿಂದ ಜಿಲ್ಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗುವ ನಿರೀಕ್ಷೆ ಇತ್ತಾದರೂ, ಬಂದ್ ಪರಿಣಾಮ ಜನರಿಗೆ ತಟ್ಟಿದಂತೆ ಅನಿಸಲಿಲ್ಲ. ಮುಂಜಾನೆಯಿಂದಲೇ ಕೆಲವು ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ತಮ್ಮ ಬೇಡಿಕೆಗಳಿಗೆ ಸ್ಪಂದಿಸುವಂತೆ ಸರ್ಕಾರವನ್ನು ಆಗ್ರಹಿಸಿದವು.
ಇನ್ನುಳಿದಂತೆ ನಗರದ ಪ್ರಮುಖ ವಹಿವಾಟು ರಸ್ತೆಗಳಾದ ದುರ್ಗಿಗುಡಿ ಮತ್ತು ಗಾಂಧಿ ಬಜಾರ್‌ನಲ್ಲಿ ಕೆಲವು ಅಂಗಡಿ ಮಾಲಕರು ಅಂಗಡಿಯನ್ನು ಮುಚ್ಚಿದ್ದರೆ, ಇನ್ನೂ ಕೆಲವರು ನಿಧಾನವಾಗಿ ವಹಿವಾಟು ಆರಂಭಿಸುತ್ತಿದ್ದರು. ಕೆಲವು ಸಂಘಟನೆಗಳು ಬಲವಂತವಾಗಿ ಗಾಂಧಿಬಜಾರ್‌ನಲ್ಲಿ ಅಂಗಡಿಗಳನ್ನು ಮುಚ್ಚಿಸಲು ಪ್ರಯತ್ನಿಸಿತಾದರೂ ಪೊಲೀಸರ ಮನವೊಲಿಕೆಯಿಂದ ಅವರು ಹಿಂತಿರುಗಬೇಕಾಯಿತು.
ಜಿಲ್ಲೆಯ ಹೊರಭಾಗಕ್ಕೆ ತೆರಳುವ ಕೆಲವು ಖಾಸಗಿ ಬಸ್ಸುಗಳು ತಮ್ಮ ಸೇವೆಯನ್ನು ಕೆಲವುಕಾಲ ಸ್ಥಗಿತಗೊಳಿಸಿದ್ದರಾದರೂ ನಂತರ ಪ್ರಾರಂಭಿಸಿದರು. ಆದರೆ ಬಸ್ ನಿಲ್ದಾಣದಲ್ಲಿ ಜನಸಂಖ್ಯೆ ಅತಿ ವಿರಳವಾಗಿತ್ತು. ಇನ್ನು ಕೆಎಸ್‌ಆರ್‌ಟಿಸಿ ಬಸ್ ಬೆಳಿಗ್ಗೆ ಸ್ವಲ್ಪ ಹೊತ್ತು ಸಂಚಾರ ಸ್ಥಗಿತಗೊಳಿಸಿದ್ದರೆ ಮಧ್ಯಾಹ್ನದ ನಂತರ ಎಂದಿನಂತೆ ಓಡಾಟ ನಡೆಸಿದವು. ಆಟೋಗಳು ವಿರಳವಾಗಿದ್ದವು.
ಶಾಲಾಕಾಲೇಜುಗಳಿಗೆ ಜಿಲ್ಲಾಡಳಿತ ರಜೆಯನ್ನು ಘೋಷಿಸಿರಲಿಲ್ಲವಾದರೂ ತಮ್ಮ ಅಗತ್ಯಕ್ಕೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಲು ಸೂಚಿಸಿತ್ತು. ಆದರೆ, ಎಂದಿನಂತೆ ನಗರದಲ್ಲಿ ಶಾಲಾಕಾಲೇಜುಗಳು ತೆರೆದಿದ್ದವು. ಅಂಬುಲೆನ್ಸ್, ಔಷಧ ಮಾರಾಟ ಮಳಿಗೆಗಳು, ಪೆಟ್ರೋಲ್ ಬಂಕ್‌ಗಳು, ಚಿತ್ರಮಂದಿರಗಳು ತೆರೆದಿದ್ದವು. ವ್ಯಾಪಾರ ವಹಿವಾಟಿಗೆ ಯಾವುದೇ ಅಡಚಣೆ ಉಂಟಾಗಲಿಲ್ಲ.
ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಕೈಗಾರಿಕಾ ಪ್ರದೇಶದ ಕಾರ್ಮಿಕರುಗಳು, ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಕಾರ್ಮಿಕರಿಗೂ ನಿಗದಿತ ಕನಿಷ್ಟ ನಿವೃತ್ತಿ ವೇತನ ೩ ಸಾವಿರ ರೂ. ನೀಡಬೇಕು, ಕೇಂದ್ರ ಮತ್ತು ರಾಜ್ಯದ ಸಾರ್ವಜನಿಕ ಸಾಮ್ಯದ ಕೈಗಾರಿಕೆಗಳಲ್ಲಿ ಬಂಡವಾಳ ಹಿಂತೆಗೆತದ ಕ್ರಮಗಳನ್ನು ನಿಲ್ಲಿಸಬೇಕು, ಬೋನಸ್, ಭವಿಷ್ಯ ನಿಧಿ ಮಿತಿ ಹೆಚ್ಚಳ ಮಾಡಬೇಕು, ಮೂಲ ಕಾರ್ಮಿಕರ ಕಾನೂನುಗಳನ್ನು ಯಾವುದೇ ವಿನಾಯಿತಿ ಇಲ್ಲದೇ ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋಧಿ ತಿದ್ದುಪಡಿಗೊಳಿಸಬಾರದು, ರಸ್ತೆ ಸುರಕ್ಷತಾ ಮಸೂದೆ ಕೈಬಿಡಬೇಕು, ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಕಾರ್ಮಿಕ ನ್ಯಾಯಾಲಯ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಗೆ ನೂರಾರು ಆಗಮಿಸಿದ್ದ ಜನರಿಂದ ಜಿಲ್ಲಾಧಿಕಾರಿ ಕಚೇರಿ ಸರ್‌ಎಂವಿ ರಸ್ತೆ ಸಂಪೂರ್ಣ ಬಂದ್ ಆಗಿತ್ತು. ಸುಮಾರು ೧ ಗಂಟೆಗೂ ಹೆಚ್ಚುಕಾಲ ನಡೆದ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡಬೇಕಾಯಿತು. ಒಟ್ಟಿನಲ್ಲಿ ನಗರದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ ಜೋರಾಗಿತ್ತು.
ಏನಿತ್ತು?
ಆಂಬುಲೆನ್ಸ್, ಆಸ್ಪತ್ರೆ, ಔಷಧ ಮಾರಾಟ ಮಳಿಗೆ, ಪೆಟ್ರೋಲ್ ಬಂಕ್, ಹೊಟೇಲ್, ಚಿತ್ರಮಂದಿರ, ಟ್ಯಾಕ್ಸಿ ಸೇವೆ, ಅಂಗಡಿ ಮುಂಗಟ್ಟು.
ಏನಿರಲಿಲ್ಲ?
ರಾಷ್ಟ್ರೀಕೃತ ಬ್ಯಾಂಕ್, ಕೆಎಸ್‌ಆರ್‌ಟಿಸಿ ಬಸ್, ಎಪಿಎಂಸಿ ಮಾರುಕಟ್ಟೆ, ಆಟೋ, ಕೆಲವು ಖಾಸಗಿ ಬಸ್‌ಗಳು.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ದರ ಸುಲಿಗೆ
ಭಾರತ್ ಬಂದ್ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳು ತನ್ನ ಸೇವೆ ಸ್ಥಗಿತಗೊಳಿಸಿತ್ತಾದರೂ ಕೆಲವೊಂದು ಕಡೆ ಸಂಚಾರ ಎಂದಿನಂತೆ ಇತ್ತು. ಆಯನೂರಿನಿಂದ ಶಿವಮೊಗ್ಗಕ್ಕೆ ಬರಲು ಕೆಎಸ್‌ಆರ್‌ಟಿಸಿ ಬಸ್ಸುಗಳು ಇತ್ತಾದರೂ ಅದಕ್ಕೆ ಎಂದಿಗಿಂತ ದುಪ್ಪಟ್ಟು ಹಣವನ್ನು ವಸೂಲು ಮಾಡಿದ್ದಾರೆ ಎಂಬ ದೂರು ಬಂದಿದೆ. ಆಯನೂರಿನಿಂದ ಶಿವಮೊಗ್ಗಕ್ಕೆ ಬರಲು ೧೯ ರೂ. ದರ ನಿಗದಿಯಾಗಿದ್ದರೂ ಇಂದು ಪ್ರಯಾಣಿಕರಿಂದ ೩೫ ರೂ. ವಸೂಲು ಮಾಡಲಾಯಿತು ಮತ್ತು ಟಿಕೆಟ್ ಸಹಾ ನೀಡಲಿಲ್ಲ ಎಂಬ ದೂರು ಪ್ರಯಾಣಿಕರಿಂದ ಕೇಳಿ ಬಂದಿದೆ. ಇನ್ನೊಂದು ಕಡೆ ಕೆಎಸ್‌ಆರ್‌ಟಿಸಿ ಸಂಚಾರ ವಿರಳವಾಗಿತ್ತಾದರೂ ಮಾನವೀಯತೆ ಮೆರೆದ ಟ್ಯಾಕ್ಸಿ ಚಾಲಕರು ಎಂದಿನಂತೆ ಹಣವನ್ನು ಪ್ರಯಾಣಿಕರಿಂದ ಪಡೆದರು.
ಒಂದೆಡೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೆಲವು ನಿರ್ವಾಹಕರು ಟಿಕೇಟ್ ನೀಡದೇ ಹೆಚ್ಚಿನ ದರ ವಸೂಲಿ ಮಾಡಿದ್ದರೆ, ಇನ್ನೊಂದೆಡೆ ಟ್ಯಾಕ್ಸಿ ಚಾಲಕರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಬಂದ್‌ನಿಂದಾಗಿ ಭದ್ರಾವತಿಯಿಂದ ಶಿವಮೊಗ್ಗ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರ ಇಲ್ಲದೇ ಪ್ರಯಾಣೀಕರು ಪರದಾಡುತ್ತಿದ್ದರು. ಆದರೆ, ಈ ಮಾರ್ಗದ ಟ್ಯಾಕ್ಸಿ ಚಾಲಕರು ಎಂದಿನಂತೆ ತಮ್ಮ ನಿಗದಿತ ದರವನ್ನು ಪ್ರಯಾಣಿಕರಿಂದ ಪಡೆದದ್ದು ವಿಶೇಷವಾಗಿತ್ತು.
ಬೆಲೆ ಏರಿಕೆ ನಿಯಂತ್ರಿಸಿ ಸಾರ್ವತ್ರಿಕ, ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಜಾರಿ ಮಾಡಬೇಕು, ನಿರುದ್ಯೋಗ ತಡೆಗಟ್ಟಿ ಉದ್ಯೋಗ ಸೃಷ್ಟಿಸುವ ಕ್ರಮ ಕೈಗೊಳ್ಳಬೇಕು, ಕಾರ್ಮಿಕರ ಕನಿಷ್ಟ ವೇತನ ೧೮ ಸಾವಿರ ರೂ. ರಾಷ್ಟ್ರವ್ಯಾಪಿ ಜಾರಿಯಾಗಬೇಕು, ಗುತ್ತಿಗೆ ಪದ್ದತಿಯನ್ನು ರದ್ದುಪಡಿಸಬೇಕು, ಸಾರ್ವಜನಿಕ ಉದ್ದಿಮೆಗಳಲ್ಲಿ ಖಾಸಗೀಕರಣ ಮತ್ತು ವಿದೇಶಿ ನೇರ ಬಂಡವಾಳ ತರಬಾರದು ಎನ್ನುವುದು ಪ್ರತಿಭಟನಾಕಾರರ ಆಗ್ರಹವಾಗಿದೆ.
Discussion about this post