Read - 2 minutes
ಬೆಂಗಳೂರು, ಸೆ.29: ಈಗಾಗಲೇ ಹಲವಾರು ಹಗರಣ ಹಾಗೂ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಈಗ ಇಡೀ ರಾಜ್ಯವೇ ತಲೆತಗ್ಗಿಸುವಂತಹ ಹಗರಣವೊಂದನ್ನು ನಡೆಸಿದೆ ಎನ್ನಲಾಗಿದೆ. ಸುಮಾರು 500 ಕೋಟಿ ರೂ. ಮೊತ್ತದಷ್ಟು ಕಾಂಡೋಮ್ ಖರೀದಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಗುರುತರ ಆರೋಪವನ್ನು ರಾಜ್ಯ ಸರ್ಕಾರದ ಮೇಲೆ ಮಾಡಲಾಗಿದ್ದು, ಈ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಜಿ ಆರೋಗ್ಯ ಸಚಿವರ ಹೆಸರು ಕೇಳಿಬಂದಿದೆ.
ಈ ಕುರಿತಂತೆ ಬಿಜೆಪಿ ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದು, ಕಾಂಡೋಮ್ ಖರೀದಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಮಾರು 500 ಕೋಟಿ ರೂ.ಗಳ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಸಂಸ್ಥೆಗಳಿಂದ ಖರೀದಿ ಮಾಡುವ ಅವಕಾಶಗಳು ಇದ್ದಾಗ್ಯೂ, ರಾಜ್ಯ ಸರ್ಕಾರ ಖಾಸಗೀ ಕಂಪೆನಿಗಳಿಂದ ಖರೀದಿ ಮಾಡಿದೆ. ಅಲ್ಲದೇ, ಇದರ ವಿತರಣೆ ದಾಖಲೆಗಳಲ್ಲಿ ಮಾತ್ರ ಮಾಡಲಾಗಿದೆ. ಏಡ್ಸ್ ರೋಗಕ್ಕೆ ಪರಿಹಾರ ಹಾಗೂ ಮುಂಜಾಗ್ರತಾ ಕ್ರಮವಾಗಿ ಅನುಸರಿಸಲು ಖರೀದಿಸಲಾದ ಈ ಕಾಂಡೋಮ್ ಗಳ ವೆಚ್ಚದ ವಿವರಣೆಯನ್ನು ಸರ್ಕಾರ ಬಹಿರಂಗ ಪಡಿಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ರಮೇಶ್, ಮುಖ್ಯಮಂತ್ರಿಗಳು ಈ ಮಂಡಳಿಯ ಅಧ್ಯಕ್ಷರಾಗಿದ್ದು, ಆರೋಗ್ಯ ಸಚಿವರು ಇದರ ಉಪಾಧ್ಯಕ್ಷರಾಗಿದ್ದಾರೆ. ಯು.ಟಿ. ಖಾದರ್ ಆರೋಗ್ಯ ಸಚಿವರಾದ ಅವಧಿಯಲ್ಲಿ ಈ ಭಾರೀ ಮೊತ್ತದ ಹಗರಣ ನಡೆದಿದೆ ಎಂದು ದೂರಿದ್ದಾರೆ. ತಾವು ಮಾಡಿರುವ ಆರೋಪಕ್ಕೆ ದಾಖಲೆಗಳನ್ನು ಪ್ರದರ್ಶಿಸಿರುವ ರಮೇಶ್, ಇದರಲ್ಲಿ ನಕಲಿ ದಾಖಲೆಗಳ ಸೃಷ್ಠಿ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ಅವರು ರಾಷ್ಟ್ರೀಯ ಆರೋಗ್ಯ ಅಭಿಯಾನ, ಕೆಎಸ್ಎಪಿಎಸ್, ಲೈಂಗಿಕ ಕಾರ್ಯಕರ್ತರ ಸ್ಥಿತಿಗತಿಗಳ ಅಧ್ಯಯನ ಸಮಿತಿಗೆ ಡಾ.ಲೀಲಾ ಸಂಪಿಗೆ ಅವರಿಗೆ ಗುತ್ತಿಗೆ ಆಧಾರದ ಮೇಲೆ ಹುದ್ದೆ ನೀಡಿದ್ದರು.
ಈ ಕುರಿತಂತೆ ಲೈಂಗಿಕ ಕಾರ್ಯಕರ್ತರ ಸ್ಥಿತಿಗತಿಗಳ ಅಧ್ಯಯನ ಸಮಿತಿ ಅಧ್ಯಕ್ಷೆ ಜಯಮಾಲಾ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ದೂರು ನೀಡಲಾಗಿತ್ತು. ಇದಾದ ಬಳಿಕ ಡಾ.ಲೀಲಾಸಂಪಿಗೆ ಅವರು ಕೆಲಸದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಲೀಲಾಸಂಪಿಗೆ ಅವರಿಗೆ ಗುತ್ತಿಗೆ ಆಧಾರದ ಮೇಲೆ ಸರ್ಕಾರ ಮಟ್ಟದ ಉನ್ನತ ಹುದ್ದೆಯನ್ನು ನೀಡಿರುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.
ಮೂರು ಸಂಸ್ಥೆಗಳಲ್ಲಿ ಅನುದಾನದ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು , ಈ ಬಗ್ಗೆ ಆರೋಗ್ಯ ಸಚಿವ ತಮ್ಮ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಕೂಡಲೇ ಶ್ವೇತಪತ್ರ ಹೊರಡಿಸಬೇಕು ಎಂದು ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಒಟ್ಟಾರೆ 1,42,000 ಮಂದಿ ವಲಸಿಗರು, 80 ಸಾವಿರ ಮಂದಿ ಚಾಲಕರು ಹಾಗೂ 4,064 ಮಂದಿ ಎಚ್ಐವಿ ಪೀಡಿತರಿದ್ದಾರೆ ಎಂದು ದಾಖಲೆಗಳಲ್ಲಿ ತೋರಿಸಿದ್ದಾರೆ. ಇಷ್ಟು ರೋಗಿಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಅನುದಾನ ಬಿಡುಗಡೆಯಾಗಿತ್ತು.
ಆದರೆ ಈ ಸಂಸ್ಥೆಯು ಕಾಟಾಚಾರಕ್ಕೆ ಕಾಂಡಮ್ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿ, ವೆಬ್ಸೈಟ್ನಲ್ಲಿ ಈ ಬಗ್ಗೆ ಗಮನಿಸಿದರೆ ಇದು ಸರ್ಕಾರಿ ಪ್ರಾಯೋಜಿತ ವೇಶ್ಯಾವಾಟಿಕೆ ಯೋಜನೆ ಎಂಬ ಅನುಮಾನ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಅವರು ತಿಳಿಸಿದರು.
ಅವ್ಯವಹಾರ ನಡೆಸಲಾಗಿರುವ ನೂರಾರು ಕೋಟಿ ರೂ. ಹಣ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಬಿಲ್ ಗೇಟ್ಸ್ ಫೌಂಡೇಶನ್ ನಿಂದ ನೀಡಲಾದುದು ಎಂದು ಹೇಳಿದ್ದಾರೆ.
ಏಡ್ಸ್ ರೋಗವನ್ನು ತಡೆಗಟ್ಟುವ ಯೋಜನೆಯ ಭಾಗವಾಗಿ ಸರ್ಕಾರ ಕಾಂಡೋಮ್ ಗಳನ್ನು ಖರೀದಿ ಮಾಡಿ, ಸೆಕ್ಸ್ ವರ್ಕರ್ಸ್, ಹೋಮೋ ಸೆಕ್ಷುವಲ್ಸ್, ಟ್ರಕ್ ಚಾಲಕರು, ರೆಡ್ ಲೈಟ್ ಏರಿಯಾದಲ್ಲಿ ವಿತರಣೆ ಮಾಡಬೇಕಾಗಿರುತ್ತದೆ. ಆದರೆ, ನಕಲಿ ದಾಖಲೆ ಸೃಷ್ಠಿಸಿ ಹಣ ಲಪಟಾಯಿಸಲಾಗಿದೆಯೇ ಹೊರತು, ಕಾಂಡೋಮ್ ಗಳನ್ನು ವಿತರಣೆ ಮಾಡಲಾಗಿಲ್ಲ ಎಂದು ಬಿಜೆಪಿ ದೂರಿದೆ.
Discussion about this post