Read - < 1 minute
ಬೆಂಗಳೂರು, ಅ.20: ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಶಾಸಕತ್ವಕ್ಕೆ ರಾಜೀನಾಮೆಯನ್ನು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅಂಗೀಕರಿಸಿದ್ದಾರೆ. ಇದೇ ಅ.17 ರಂದು ಶಾಸಕ ಸ್ಥಾನಕ್ಕೆ ವಿ. ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ನೀಡಿದ್ದರು.
ಈ ಮಧ್ಯೆ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲು ಶ್ರೀನಿವಾಸ್ ಪ್ರಸಾದ್ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ. ಈ ಬಗ್ಗೆ ದೂರವಾಣಿ ಮೂಲಕ ಮಾತುಕತೆಯೂ ನಡೆಸಲಾಗಿತತು, ಇಂದು ರಾಜೀನಾಮೆ ಅಂಗೀಕೃತಗೊಂಡಿದೆ.
ಶ್ರೀನಿವಾಸ್ ಪ್ರಸಾದ್ ರಾಜೀನಾಮೆಗೆ ಸಂಬಂಧಿಸಿದಂತೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗಿದ್ದು, ಈ ಬಗ್ಗೆ ತೀರ್ಮಾನವನ್ನು ಇಂದೇ ಪ್ರಕಟಿಸುವುದಾಗಿ ಸ್ಪೀಕರ್ ಕೋಳಿವಾಡ ತಿಳಿಸಿದ್ದರು. ಅಂತೆಯೇ ಸಂಜೆ ವೇಳೆ ರಾಜೀನಾಮೆ ಅಂಗೀಕಾರಗೊಂಡಿರುವುದನ್ನು ದೃಢಪಡಿಸಿದರು.
ತಮ್ಮ ಮೇಲೆ ಸರ್ಕಾರವಾಗಲಿ, ಆಡಳಿತ ಪಕ್ಷದ ಯಾರೂ ಕೂಡ ಪ್ರಭಾವ ಬೀರಿಲ್ಲ. ಸಭಾಧ್ಯಕ್ಷರ ಸ್ಥಾನದಲ್ಲಿ ಇರುವವರೆಗೂ ಅಂಥವುಗಳಿಗೆ ಅವಕಾಶವನ್ನೂ ನೀಡುವುದಿಲ್ಲ. ವಿರೋಧ ಪಕ್ಷಗಳು ಅವರವರ ಸ್ಥಾನಗಳಿಗೆ ಅನುಗುಣವಾಗಿ ಹೇಳಿಕೆ ನೀಡಿದರೆ ತಾವಾದರೂ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಪೂರ್ಣ ಮಾಹಿತಿ: ಕೆರೆ ಮತ್ತು ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ಬಂದಿದೆ. ರಾಜಕಾಲುವೆ ಬಫರ್ ಜೋನ್ ಗೆ ಸಂಬಂಧಿಸಿದಂತೆ ನಾಳೆ ಪುನಃ ಸಭೆ ನಡೆಸಲಾಗುವುದು. ಸಭೆಯಲ್ಲಿ ಪೂರ್ಣ ಮಾಹಿತಿ ಪಡೆದ ಬಳಿಕ ಕೆರೆ ಒತ್ತುವರಿಗೆ ಸಂಬಂಧಿಸಿದ ವರದಿ ಸಲ್ಲಿಸಲಾಗುವುದು ಎಂದ ಕೋಳಿವಾಡ ಅವರು, ಈಗಾಗಲೇ ಒಂದೂವರೆ ಸಾವಿರ ಎಕರೆಯಷ್ಟು ಕೆರೆ ಪ್ರದೇಶ ಒತ್ತುವರಿಯಾಗಿರುವುದಾಗಿ ಖಚಿತಪಡಿಸಿದರು.
Discussion about this post