Read - < 1 minute
ನವದೆಹಲಿ;ಅ-10-ಸರ್ಜಿಕಲ್ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಜೈಷ್-ಇ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆ ಸಂಸತ್ ಭವನದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿ ನೀಡಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನುಗ್ಗಿ, ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ (ಐಎಸ್ಐ) ಸೂಚನೆಯಂತೆ ಸಂಸತ್ ಭವನದ ಮೇಲೆ ಜೆಇಎಂ ಉಗ್ರರು ದಾಳಿ ನಡೆಸಲು ಸಜ್ಜಾಗಿದ್ದಾರೆ ಎಂದು ಗುಪ್ತಚರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪಾರ್ಲಿಮೆಂಟ್ ಮೇಲೆ 2001ರ ದಾಳಿ ಮರುಕಳಿಸುವ ಸಾಧ್ಯತೆ ಇದೆ ಎಂದು ಸುಳಿವು ನೀಡಿರುವ ಗುಪ್ತಚರ ಸಂಸ್ಥೆ, ಭಯಾನಕ ದಾಳಿ ನಡೆಸಲು ಜೆಇಎಂ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಸಂಚು ರೂಪಿಸಿದ್ದು, ತನ್ನ ಆಪ್ತ ಸಹಚರರಿಗೆ ಕಟ್ಟಪ್ಪಣೆ ಮಾಡಿದ್ದಾನೆ ಎಂಬ ಬಗ್ಗೆ ಭಾರತದ ಒಂದು ಪ್ರಮುಖ ಗುಪ್ತಚರ ಸಂಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯ ಸಿಐಡಿ ವಿಭಾಗಕ್ಕೆ ಮಾಹಿತಿ ಲಭಿಸಿದೆ.
ಸಂಸತ್ಭವನದ ಮೇಲಿನ ಉದ್ದೇಶಿತ ದಾಳಿ ವಿಫಲಗೊಂಡರೆ, ದೆಹಲಿ ಸಚಿವಾಲಯ, ಅಕ್ಷರಧಾಮ ಮತ್ತು ಲೋಟಸ್ ಟೆಂಪಲ್ನಂಥ ಪ್ರಮುಖ ಸ್ಥಳಗಳು, ಜನಸಂದಣಿ ಇರುವ ಮಾರುಕಟ್ಟೆಗಳು ಅಥವಾ ಬಸ್-ರೈಲು ನಿಲ್ದಾಣಗಳಲ್ಲಿ ಕುಕೃತ್ಯ ನಡೆಸಲು ಸಹ ಷಡ್ಯಂತ್ರ ರೂಪಿಸಲಾಗಿದೆ.
ಅಫ್ಜಲ್ ಗುರು ನೇತೃತ್ವದಲ್ಲಿ ಡಿಸೆಂಬರ್, 13, 2001ರಲ್ಲಿ ಐವರು ಜೆಇಎಂ ಉಗ್ರರು ಪಾರ್ಲಿಮೆಂಟ್ ಮೇಲೆ ಭೀಕರ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆರು ಪೊಲೀಸರು, ಭದ್ರತಾಪಡೆಯ ಇಬ್ಬರು ಯೋಧರು ಸೇರಿದಂತೆ 9 ಮಂದಿ ಸಾವಿಗೀಡಾಗಿದ್ದರು. ನಂತರ ನಡೆದ ಗುಂಡಿನ ಕಾಳಗದಲ್ಲಿ ಐವರು ಭಯೋತ್ಪಾದಕರು ಹತರಾದರು.
Discussion about this post