ಬೆಂಗಳೂರು, ಆ.31: ವಾಹನಗಳ ಮೇಲೆ ದೇವರುಗಳ ಚಿತ್ರ, ಚಿತ್ರನಟ ಚಿತ್ರ ಹಾಕಿಕೊಳ್ಳುವುದು ಕಾಮನ್. ಆಯಾ ಸೀಸನ್ ನಲ್ಲಿ ಯಾವ ದೇವರ ಹಬ್ಬಗಳಿರುತ್ತವೋ, ಯಾವ ಚಿತ್ರ ನಟರ ಟ್ರೆಂಡ್ ಇರುತ್ತದೋ ಆ ಚಿತ್ರಗಳು ವಾಹನಗಳ ಮೇಲೆ ರಾರಾಜಿಸುವುದು ಅಲಿಖಿತ ಪದ್ದತಿ.
ಆದರೆ, ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ಆಟೋ, ಲಾರಿ, ಬೈಕ್, ಬಸ್ ಗಳ ಮೇಲೆ ಕಳೆದ ಒಂದೆರಡು ತಿಂಗಳಿನಿಂದ ರಾರಾಜಿಸುತ್ತಿರುವುದು ಕೇಸರಿ ಬಣ್ಣದ ಹನುಮಾನ್ ಸ್ಟಿಕ್ಕರ್. ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಸಂಚರಿಸುವ ಖಾಸಗೀ ವಾಹನಗಳು ಅಂದರೆ, ಬೈಕ್, ಕಾರು, ಲಾರಿ, ಟೆಂಪೋ ಟ್ರಾವೆಲರ್, ಆಟೋ ಹೀಗೆ ಬಹುತೇಕ ವಾಹನಗಳ ಮೇಲೆ ಈ ಅರ್ಧ ಮುಖದಲ್ಲಿ ಚಿತ್ರಿಸಲಾಗಿರುವ ಹನುಮಾನ್ ಸ್ಟಿಕ್ಕರ್ ಕ್ರೇಜ್ ಆಗಿದೆ.
ಇನ್ನು ಕರಾವಳಿ ಭಾಗ, ಮಲೆನಾಡು, ಬಯಲಸೀಮೆಯ ವಾಹನ ಸವಾರರೂ ಸಹ ಈ ಸ್ಟಿಕ್ಕರ್ ಹಾಕಿಸಿಕೊಳ್ಳುವುದರಲ್ಲಿ ಹಿಂದೆ ಬಿದ್ದಿಲ್ಲ. ಅರ್ಧ ಮುಖಾಕೃತಿಯ ಹನುಮಾನ್ ಚಿತ್ರವನ್ನು ಕೇಸರಿ ಬಣ್ಣದ ರೇಡಿಯಂ ಸ್ಟಿಕ್ಕರ್ ನಲ್ಲಿ ಚಿತ್ರಿಸಲಾಗಿದೆ. ಇವುಗಳನ್ನು ವಾಹನ ಗಾಜಿನ ಮೇಲೆ ಅಂಟಿಸಿದಾಗ ಸೂಪರ್ ಲುಕ್ ಬರುತ್ತದೆ. ಇಂತಹ ಸ್ಟಿಕ್ಕರ್ ಅಂಟಿಸಿಕೊಳ್ಳುವುದು ಈಗ ಕ್ರೇಜ್ ಆಗಿ ಪರಿವರ್ತನೆಯಾಗಿದೆ.
ಪ್ರಮುಖವಾಗಿ ಹಿಂದೂ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರು, ಭಜರಂಗ ದಳದ ಕಾರ್ಯಕರ್ತರು ಈ ಸ್ಟಿಕ್ಕರ್ ಗಳನ್ನು ಕ್ರೇಜ್ ನ್ನು ಹೆಚ್ಚಿಸಿದ್ದಾರೆ. ಈಗ ಗಣಪತಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಲ್ಲೂ ಗಣೇಶ ಹಾಗೂ ಹಿಂದೂ ಸಂಘಟನೆಯ ಧೈರ್ಯ ಎಂದೇ ಬಣ್ಣಿಸಲಾದ ಆಂಜನೇಯನ ಮುಖಚಿತ್ರಣ ಹೆಚ್ಚಿನ ಮಹತ್ವ ಪಡೆದಿದ್ದು, ಎಲ್ಲ ವರ್ಗದ ಜನರಲ್ಲಿ, ಅದರಲ್ಲೂ ಯುವಕರಲ್ಲಿ ಕ್ರೇಜ್ ಆಗಿ ಪರಿವರ್ತಿತವಾಗಿದೆ.
Discussion about this post