Read - 2 minutes
ಬೆಂಗಳೂರು, ಸೆ.16: ತಮಿಳುನಾಡಿಗೆ ಸೆಪ್ಟೆಂಬರ್ 20ರ ನಂತರ ಕಾವೇರಿ ನೀರು ಬಿಡಲು ನಾನು ಸಿದ್ಧನಿಲ್ಲ. ಸರ್ಕಾರ ವಜಾ ಆದರೂ ಚಿಂತೆಯಿಲ್ಲ ಎಂದು ಆಪ್ತ ಸಚಿವರ ಎದುರು ಗುಡುಗಿರುವ ಸಿಎಂ ಸಿದ್ದರಾಮಯ್ಯ, ಸರ್ಕಾರ ಬಿದ್ದರೆ ಬೀಳಲಿ, ಜನತಾ ನ್ಯಾಯಾಲಯಕ್ಕೆ ಹೋಗಲು ಸಜ್ಜಾಗೋಣ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಸುಪ್ರೀಂಕೋರ್ಟ್ ಆದೇಶದ ಅನ್ವಯ ಸೆ.20ರ ತನಕ ನೀರು ಕೊಡುವುದೇ ಕಷ್ಟ. ಹೀಗಿರುವಾಗ ಸೆ.20ರಂದು ನ್ಯಾಯಾಲಯ ಮತ್ತೆ ತೀರ್ಪು ನೀಡಿ, ತಮಿಳುನಾಡಿಗೆ ನೀರು ಬಿಡಿ ಎಂದರೆ ಸ್ಪಷ್ಟವಾಗಿ ಆ ಆದೇಶ ಉಲ್ಲಂಘಿಸುತ್ತೇನೆ, ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ ಎಂದಿದ್ದಾರೆ.
ಉನ್ನತ ಮೂಲಗಳು ಈ ವಿಷಯ ಸ್ಪಷ್ಟಪಡಿಸಿದ್ದು, ಸೆ.20ರ ನಂತರವೂ ನೀರು ಬಿಡುವ ಸ್ಥಿತಿ ಬಂದರೆ ಕಾವೇರಿ ನೀರನ್ನು ನೆಚ್ಚಿಕೊಂಡ ಜನರಿಗೆ ಕುಡಿಯಲು ನೀರು ಕೊಡಲು ಸಾಧ್ಯವಿಲ್ಲ. ಈ ರೀತಿ ನಿಮಗೆ ನೀರು ಕೊಡಲು ಸಾಧ್ಯವಿಲ್ಲ ಎಂದು ಜನರ ಮುಂದೆ ಅಸಹಾಯಕನಾಗಿ ನಿಲ್ಲುವುದಕ್ಕಿಂತ ಸಿಎಂ ಪಟ್ಟದಿಂದ ಕೆಳಗಿಳಿಯುವುದೇ ಒಳ್ಳೆಯದು ಎಂದು ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ
ಎಂದಿವೆ.
ಸೆ.20ರ ತನಕ ನೀರು ಬಿಡುಗಡೆ ಮಾಡಿದ ನಂತರ ನಮ್ಮಲ್ಲಿ ಉಳಿಯುವ ನೀರನ್ನು ಕುಡಿಯುವ ನೀರಿಗೆ ಒದಗಿಸಲು ಪರದಾಡಬೇಕಿದೆ.ಹೀಗಿರುವಾಗ ಮಳೆಯೇ ಬಾರದಿದ್ದರೆ ಸೆ.20ರ ನಂತರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವೇ ಇಲ್ಲ.
ಒಂದು ವೇಳೆ ನ್ಯಾಯಾಲಯ ಕಾವೇರಿ ನೀರನ್ನು ಸೆ.20ರ ನಂತರವೂ ಬಿಡುಗಡೆ ಮಾಡಿ ಎಂದರೆ ಮತ್ತು ಆ ಆದೇಶವನ್ನು ನಾವು ಪಾಲಿಸಿದರೆ ಇತ್ತೀಚೆಗೆ ಮಹಾರಾಷ್ಟ್ರದ ಲಾಥೂರ್ ನಲ್ಲಿ ಸೃಷ್ಟಿಯಾದ ಜಲಕ್ಷಾಮ ಇಲ್ಲೂ ಆಗುತ್ತದೆ.
ಹೀಗೆ ಕುಡಿಯಲು ನೀರಿಲ್ಲದೆ ಜಲಕ್ಷಾಮ ಸೃಷ್ಟಿಸಿಕೊಳ್ಳಲು ನಾನು ತಯಾರಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ನೀರಿಗಾಗಿ ಹಾಹಾಕಾರ ಮಾಡುವ ಪರಿಸ್ಥಿತಿ ಜನರಿಗೆ ಬಂದರೆ ಅದನ್ನು ನೋಡಿಕೊಂಡು ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ಇಷ್ಟವೂ ಇಲ್ಲ ಎಂದು ಸಿದ್ದರಾಮಯ್ಯ ಆಪ್ತ ಸಚಿವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸದಿದ್ದರೆ ಏನಾಗಬಹುದು..? ರಾಜ್ಯ ಸರ್ಕಾರವನ್ನು ಕೇಂದ್ರ ಸರ್ಕಾರ ವಜಾ ಮಾಡಬಹುದು. ತಾನೇ ಸೇನೆಯನ್ನು ಮುಂದೆ ನಿಲ್ಲಿಸಿಕೊಂಡು ರಾಜ್ಯದ ಕಾವೇರಿ ನದಿ ಪಾತ್ರದ ಜಲಾಶಯಗಳಿಂದ ನೀರು ಬಿಡಿಸಲು ಮುಂದಾಗಬಹುದು.
ಹಾಗಂತ ಅಧಿಕಾರಕ್ಕಾಗಿ ಅದನ್ನು ನೋಡಿಕೊಂಡು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಲು ನನಗೆ ಇಷ್ಟವಿಲ್ಲ. ಹೀಗಾಗಿ ಸೆ.20ರ ನಂತರವೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿ ಎಂದು ಸುಪ್ರೀಂಕೋರ್ಟ್ ಹೇಳಿದರೆ, ಆ ತೀರ್ಪನ್ನು ಉಲ್ಲಂಘಿಸಲು ನಾನು ಸಿದ್ಧ ಎಂದಿದ್ದಾರೆ.
ಅಧಿಕಾರದಲ್ಲಿರುವವರು ಪದತ್ಯಾಗಕ್ಕೆ ಸಜ್ಜಾಗುವುದು ಕಷ್ಟವಾದರೂ ಜನರ ಕಣ್ಣಲ್ಲಿ ಕುಡಿಯುವ ನೀರಿಗೆ ಪರಿತಪಿಸುವ ದೈನ್ಯತೆ ನೋಡುವುದು ಅದಕ್ಕಿಂತ ಕಷ್ಟ ಎಂದು ಸಿದ್ದರಾಮಯ್ಯ ಆಪ್ತರೆದುರು ತಮ್ಮ ಮನದಿಂಗಿತ ತೋಡಿಕೊಂಡಿದ್ದಾರೆ.
ಹೀಗೆ ಸರ್ಕಾರ ವಜಾ ಆದರೂ ಅಡ್ಡಿಯಿಲ್ಲ.ಸೆ.20ರ ನಂತರ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ನಾನು ಸಿದ್ಧನಿಲ್ಲ ಎಂದು ಸಿದ್ಧರಾಮಯ್ಯ ಹೇಳಿಕೊಂಡ ಮಾತು ಇದೀಗ ದಿಲ್ಲಿಯವರೆಗೆ ತಲುಪಿದ್ದು, ಇದರ ಬೆನ್ನಲ್ಲೇ ರಹಸ್ಯ ಸಂಧಾನ ಪ್ರಕ್ರಿಯೆಗಳು ಚುರುಕುಗೊಂಡಿವೆ.
ಕಾವೇರಿ ನದಿ ಪಾತ್ರದಲ್ಲಿ ಮುಂದೆ ಮಳೆಯಾದರೆ ತಮಿಳುನಾಡಿಗೆ ಬಿಡುಗಡೆ ಮಾಡಬಹುದು. ಹೀಗಾಗಿ ಸೆ.20ರ ನಂತರ ಕಾವೇರಿಯಿಂದ ನೀರು ಬಿಡುಗಡೆ ಮಾಡಲು ಸುಪ್ರೀಂಕೋರ್ಟ್ ಆದೇಶ ನೀಡದಂತೆ ನೋಡಿಕೊಳ್ಳಬೇಕು ಎಂದು ದಿಲ್ಲಿ ಮಟ್ಟದಲ್ಲಿ ಸಂಧಾನ ನಡೆಸುತ್ತಿರುವವರು ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಒಂದು ವೇಳೆ ಸುಪ್ರೀಂಕೋರ್ಟ್ ಏನಾದರೂ ಸೆ.20ರ ನಂತರವೂ ತಮಿಳುನಾಡಿಗೆ ನೀರು ಬಿಡಿ ಎಂದರೆ ಸರ್ಕಾರ ವಜಾ ಆದರೂ ಸಿದ್ದರಾಮಯ್ಯ ಲೆಕ್ಕಿಸುವುದಿಲ್ಲ. ಹೀಗಾಗಿ ನೇರವಾಗಿಯೇ ತೀರ್ಪನ್ನು ಪಾಲಿಸಲು ಸಾಧ್ಯವಿಲ್ಲ ಎನ್ನುತ್ತಾರೆ.
ಒಂದು ಸಲ ಅವರು ಹಾಗೆ ಹೇಳಿದ ಕೂಡಲೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುತ್ತದೆ ಮತ್ತು ಇದನ್ನು ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸುವುದು ಅನಿವಾರ್ಯವಾಗುತ್ತದೆ.
ಒಂದು ವೇಳೆ ಕೇಂದ್ರ ಸರ್ಕಾರವೇನಾದರೂ ರಾಜ್ಯ ಸರ್ಕಾರವನ್ನು ವಜಾ ಮಾಡಿ ನೀರು ಬಿಡುಗಡೆಗೆ ಕ್ರಮ ಕೈಗೊಂಡರೆ ಕರ್ನಾಟಕದ ಜನ ದಂಗೆ ಏಳುತ್ತಾರೆ. ಅಷ್ಟೇ ಅಲ್ಲ, ಚುನಾವಣೆ ಆರು ತಿಂಗಳು ಬಿಟ್ಟು ನಡೆದರೂ ಬಿಜೆಪಿ ರಾಜ್ಯದಲ್ಲಿ ಸಂಪೂರ್ಣ ನೆಲ ಕಚ್ಚಿ ಹೋಗುತ್ತದೆ. ಕುಸಿದಿರುವ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಾಗುತ್ತದೆ ಮತ್ತು ಅದು ಭಾರೀ ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬರಲು ದಾರಿಯಾಗುತ್ತದೆ.
ಇದಕ್ಕೆ ಅವಕಾಶ ನೀಡಬಾರದು ಎಂದರೆ ಸೆ.20ರ ತನಕ ತಮಿಳುನಾಡಿಗೆ ನೀರು ಬಿಟ್ಟಿದ್ದು ಸಾಕು, ಮುಂದಿನ ದಿನಗಳಲ್ಲಿ ಕಾವೇರಿ ನದಿ ಪಾತ್ರದಲ್ಲಿ ಮಳೆ ಬಂದರೆ ಕರ್ನಾಟಕ ನೀರು ಬಿಡುಗಡೆ ಮಾಡುತ್ತದೆ ಎಂಬ ನಂಬಿಕೆ ಮೂಡಿಸುವ ಕೆಲಸವಾಗಬೇಕು ಎಂದು ದಿಲ್ಲಿ ನಾಯಕರಿಗೆ ಸಂಧಾನಕಾರರು ವಿವರಿಸಿದ್ದು, ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಅದೇ ರೀತಿ ಸೆ.20ರಂದು ಸುಪ್ರೀಂಕೋರ್ಟ್ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಅದೇ ಕಾಲಕ್ಕೆ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಮಾಡುವುದನ್ನು ನೋಡಲಾರೆ. ಸರ್ಕಾರ ವಜಾ ಆದರೂ ಚಿಂತೆಯಿಲ್ಲ ಎಂಬ ಹಠಕ್ಕೆ ಬಿದ್ದಿರುವ ಸಿದ್ದರಾಮಯ್ಯ ಜನತಾ ನ್ಯಾಯಾಲಯಕ್ಕೆ ಹೋಗುವ ಸ್ಥಿತಿ ಬರುತ್ತದಾ..? ಇಲ್ಲವಾ..? ಎಂಬ ಪ್ರಶ್ನೆ ಕಾಡತೊಡಗಿದೆ.
Discussion about this post