ಶ್ರೀನಗರ, ಸೆ.18: ಜಮ್ಮು ಕಾಶ್ಮೀರದ ಸೇನಾ ನೆಲೆಗಳ ಮೇಲೆ ಉಗ್ರರು ಇಂದು ಭೀಕರ ದಾಳಿ ನಡೆಸಿದ್ದು, ದುರಂತದಲ್ಲಿ 17 ಯೋಧರು ಹುತಾತ್ಮರಾಗಿದ್ದಾರೆ.
ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್ ನಲ್ಲಿರುವ ಸೇನಾ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿರುವ ಉಗ್ರರು, ಸೇನಾ ಪ್ರಧಾನ ಕಚೇರಿ ಹಾಗೂ ಕಚೇರಿಯ ಒಳಭಾಗದಲ್ಲಿ ಸ್ಫೋಟ ನಡೆಸದ್ದಾರೆ.
ಗಡಿಯಲ್ಲಿರುವ ಭದ್ರತಾ ಕಂಬಿಗಳನ್ನು ಮುರಿದು ಒಳನುಗ್ಗಿರುವ ಉಗ್ರರು, ಸೇನಾ ಪ್ರಧಾನ ಕಚೇರಿ ಎದುರೇ ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾರೆ. ಅಲ್ಲದೆ, ಅಮಾನುಷವಾಗಿ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 12ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, 17 ಯೋಧರು ಹುತಾತ್ಮರಾಗಿದ್ದಾರೆ.
ದಾಳಿ ನಡೆದ ಕೂಡಲೇ ಎಚ್ಚೆತ್ತೆ ಸೇನಾ ಯೋಧರು ಪ್ರತಿದಾಳಿ ನಡೆಸಿದ್ದು, ಈ ವೇಳೆ ನಾಲ್ವರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ದಾಳಿ ಹೊಣೆಯನ್ನು ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಘಟನಾ ಸ್ಥಳಕ್ಕೆ ಹೆಚ್ಚಿನ ಸೇನಾಪಡೆಗಳನ್ನು ರವಾನಿಸಿದ್ದು, ಇಡಿಯ ಪ್ರದೇಶದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಗಾಯಾಳು ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸ್ಥಳಕ್ಕೆ ಪರಿಕ್ಕರ್ ಭೇಟಿ
ಘಟನೆ ಕುರಿತು ವಿಚಾರ ತಿಳಿದ ತಕ್ಷಣ ಮಾಹಿತಿ ತರಿಸಿಕೊಂಡಿರುವ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಇಂದು ಸಂಜೆಯೊಳಗೆ ಉರಿ ಸೆಕ್ಟರ್ ಗೆ ಪರಿಕ್ಕರ್ ಭೇಟಿ ನೀಡಲಿದ್ದು, ಪರಿಸ್ಥಿತಿ ಅವಲೋಕನ ನಡೆಸಿ, ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಪ್ರತಿಕ್ರಿಯೆ
ಉಗ್ರರ ದಾಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉರಿ ಸೆಕ್ಟರ್ ನಲ್ಲಿ ಉಗ್ರರ ದಾಳಿ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, ಈ ದಾಳಿಯನ್ನು ಖಂಡಿಸುತ್ತೇನೆ. ಇಂತಹ ದಾಳಿಗಳನ್ನು ನಾವು ಸಹಿಸುವುದಿಲ್ಲ ಹಾಗೂ ಇಂತಹ ದಾಳಿಗಳಿಂದ ನಾವು ಹೆದರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಘಟನೆಯಲ್ಲಿ ಹುತಾತ್ಮರಾದ ಯೋಧರ ತ್ಯಾಗವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.
ರಾಜನಾಥ್ ಸಿಂಗ್ ಪ್ರವಾಸ ಮುಂದೂಡಿಕೆ
ಬಾರಾಮುಲ್ಲಾದಲ್ಲಿ ಭಯೋತ್ಪಾದಕರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಈ ಹಿಂದೆ ನಿಗದಿಯಾಗಿದ್ದ ರಷ್ಯಾ- ಅಮೆರಿಕ ಪ್ರವಾಸವನ್ನು ಮುಂದೂಡಿದ್ದು ಗೃಹ ಇಲಾಖೆ, ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಜೊತೆ ಸಭೆ ನಡೆಸಿದ್ದಾರೆ.
ಪ್ರಧಾನಿ ತುರ್ತು ಸಭೆ
ಸೇನಾ ಕಚೇರಿಗಳ ಮೇಲೆ ಉಗ್ರರು ದಾಳಿ ನಡೆಸಿ 17 ಯೋಧರನ್ನು ಬಲಿ ಪಡೆದಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ತುರ್ತು ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
Discussion about this post