ನವದೆಹಲಿ, ಸೆ.14: ಸೋಮವಾರ ನವದೆಹಲಿಯಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿಯ ಸಭೆ ನಡೆಯಲಿದೆ. ಕಾವೇರಿ ನದಿಯಿಂದ ನೀರು ಹರಿಸಬೇಕೆಂದು ತಮಿಳುನಾಡು, ಪಾಂಡಿಚೇರಿ ರಾಜ್ಯಗಳು ಕ್ಯಾತೆ ತೆಗೆದಿವೆ.
ಈ ಹಿನ್ನಲೆಯಲ್ಲಿ ಬರುವ ಸೋಮವಾರ ಕರ್ನಾಟಕದಲ್ಲಿ ಮತ್ತೆ ಕೆಲ ಸಮಾಜಘಾತುಕ ಶಕ್ತಿಗಳು ಗಲಭೆ ಎಬ್ಬಿಸುವ ಸಾಧ್ಯತೆ ಇರುವುದರಿಂದ ಎಲ್ಲೆಡೆ ಭಾರೀ ಬಿಗಿ ಭದ್ರತೆ ಕೈಗೊಳ್ಳಬೇಕೆಂದು ಕೇಂದ್ರ ಗುಪ್ತಚರ ವಿಭಾಗ ರಾಜ್ಯಸರ್ಕಾರಕ್ಕೆ ಸೂಚನೆ ಕೊಟ್ಟಿದೆ.
ಈ ಸಂಬಂಧ ಕೇಂದ್ರ ಗುಪ್ತಚರ ವಿಭಾಗದ ಮುಖ್ಯಸ್ಥರು, ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್. ಮೇಘರಿಕ್, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಪಟ್ನಾಯಕ್ ಹಾಗೂ ಗುಪ್ತಚರ ವಿಭಾಗದ ಮುಖ್ಯಸ್ಥರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.
ಅಂದು ಕೇಂದ್ರ ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಮೂರೂ ರಾಜ್ಯಗಳ ಮುಖ್ಯ ಕಾರ್ಯದರ್ಶಿ, ನೀರಾವರಿ ಇಲಾಖೆ ಕಾರ್ಯದರ್ಶಿಗಳು ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ.
ಮೇಲುಸ್ತುವಾರಿ ಸಮಿತಿ ಅಂದು ಯಾವುದಾದರೊಂದು ಪ್ರಮುಖ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ತಮಿಳುನಾಡು ಮತ್ತು ಪಾಂಡಿಚೇರಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಪರಿಗಣಿಸದಿರುವುದು, ಇಲ್ಲವೆ ಸಂಕಷ್ಟ ಸೂತ್ರದ ಪ್ರಕಾರ ಕಾವೇರಿ ಜಲಾಶಯದಿಂದ ಸುಪ್ರೀಂಕೋರ್ಟ್ ನಿರ್ದೇಶನದಂತೆ ನೀರು ಹರಿಸಲು ಸೂಚನೆ ಕೊಡಬಹುದು.
ಒಂದು ವೇಳೆ ಕಾವೇರಿ ಮೇಲುಸ್ತುವಾರಿ ಸಮಿತಿ ಕರ್ನಾಟಕಕ್ಕೆ ನೀರು ಹರಿಸಲು ನಿರ್ದೇಶನ ನೀಡಿದರೆ ಮತ್ತೆ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ ಎಂದು ಗುಪ್ತಚರ ವಿಭಾಗ ಎಚ್ಚರಿಕೆ ನೀಡಿದೆ.
ಮೇಲುಸ್ತುವಾರಿ ಸಮಿತಿ ತೀರ್ಪು ವ್ಯತಿರಿಕ್ತವಾಗಿ ಬಂದರೆ ಮತ್ತೆ ಕರ್ನಾಟಕದಲ್ಲಿ ಗಲಭೆ ನಡೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಕಳೆದ ಸೋಮವಾರ ಸುಪ್ರೀಂಕೋರ್ಟ್ ಇದೇ 20ರವರೆಗೆ ಪ್ರತಿದಿನ 12 ಸಾವಿರ ಕ್ಯೂಸೆಕ್ ನೀರು ಹರಿಸಲು ತೀರ್ಪು ನೀಡುತ್ತಿದ್ದಂತೆ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತು.
ಪುನಃ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ನಿಯೋಜಿಸಿರುವ ಭದ್ರತೆಯನ್ನು ಕಡಿತ ಮಾಡಬಾರದೆಂದು ಸಲಹೆ ಮಾಡಲಾಗಿದೆ.
ಹೆಚ್ಚಿನ ಭದ್ರತೆಗೆ ಸೂಚನೆ:
ಸೋಮವಾರ ಮೇಲುಸ್ತುವಾರಿ ಸಮಿತಿ ತೀರ್ಪು ಹೊರಬೀಳುತ್ತಿದ್ದಂತೆ ಕರ್ನಾಟಕಕ್ಕೆ ಮಾರಕವಾದರೆ ಮತ್ತೆ ಕೆಲವರು ಹಿಂಸಾಚಾರಕ್ಕೆ ಪ್ರಚೋದನೆ ಕೊಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರು ಸೇರಿದಂತೆ ವಿವಿಧೆಡೆ ನಿಯೋಜನೆಗೊಂಡಿರುವ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಬೇಕೆಂದು ನಿರ್ದೇಶನ ನೀಡಲಾಗಿದೆ.
ಬೆಂಗಳೂರಿನಲ್ಲಿ ತಮಿಳರ ಪ್ರಾಬಲ್ಯವಿರುವ ಪ್ರದೇಶಗಳು, ಈ ಹಿಂದೆ ಗಲಭೆಗೆ ಸಾಕ್ಷಿಯಾಗಿದ್ದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು. ಸೋಮವಾರದವರೆಗೆ ಪ್ರತಿದಿನ ಎರಡು ಬಾರಿ ಪಥಸಂಚಲನ ನಡೆಸುವುದು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಂತಿ ಕಾಪಾಡಲು ಕೆಲ ದಿಟ್ಟ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
ವಿಫಲ:
ಸೋಮವಾರ ಸುಪ್ರೀಂಕೋರ್ಟ್ ತೀರ್ಪು ಬರುವ ಮುನ್ನವೇ ರಾಜ್ಯದಲ್ಲಿ ಪರಿಸ್ಥಿತಿ ಕೈಮೀರಬಹುದೆಂದು ಕೇಂದ್ರ ಗುಪ್ತಚರ ವಿಭಾಗ ರಾಜ್ಯದ ಪೊಲೀಸರಿಗೆ ಎಚ್ಚರಿಕೆ ನೀಡಿತ್ತು.
ಆದರೆ ಇದರ ಬಗ್ಗೆ ಎಂದಿನಂತೆ ಉದಾಸೀನತೆ ತೋರಿದ ಪರಿಣಾಮವೇ ಬೆಂಗಳೂರು ಸೇರಿದಂತೆ ನಾನಾ ಕಡೆ ಗಲಭೆ ಉಂಟಾಗಲು ಕಾರಣವಾಯಿತೆಂದು ಗುಪ್ತಚರ ಇಲಾಖೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಾವು ಸೂಚಿಸಿದ ತಕ್ಷಣವೇ ಆಯಕಟ್ಟಿನಲ್ಲಿ ಭದ್ರತಾಪಡೆಯನ್ನು ಹೆಚ್ಚಿಸಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅನಾಹುತ ನಡೆಯುತ್ತಿರಲಿಲ್ಲ.
ಸೋಮವಾರ ಬೆಳಗ್ಗೆಯಿಂದಲೇ ಪ್ರಮುಖ ಸ್ಥಳಗಳಲ್ಲಿ ತುಕಡಿಗಳನ್ನು ನಿಯೋಜಿಸಿದ್ದರೆ ಕೆಲ ದುಷ್ಕರ್ಮಿಗಳು ಬೀದಿಗಿಳಿಯುತ್ತಿರಲಿಲ್ಲ. ನಿಮ್ಮ ಉದಾಸೀನತೆಯಿಂದಲೇ ಇಂದು ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
Discussion about this post