Read - < 1 minute
ಫಿಲ್ಬಿಟ್ (ಉತ್ತರಪ್ರದೇಶ): ಸೆ:1: ಸೌಂದರ್ಯ ಮತ್ತು ರೂಪವೇ ವಿವಾಹಿತೆಯೊಬ್ಬಳಿಗೆ ಮಾರಕವಾದ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ತನ್ನ ಚೆಲುವಿನ ಬಗ್ಗೆ ಸದಾ ಕೊಂಕು ನುಡಿ ಮತ್ತು ಚುಚ್ಚು ಮಾತುಗಳಿಂದ ಗಂಡ ಛೇಡಿಸುತ್ತಿದ್ದರಿಂದ ಬೇಸತ್ತ 30 ವರ್ಷದ ವಿವಾಹಿತೆಯೊಬ್ಬಳು ತನ್ನ ಮುಖವನ್ನು ತಾನೇ ಸುಟ್ಟುಕೊಂಡು ವಿರೂಪ ಮಾಡಿಕೊಂಡಿರುವ ಘಟನೆ ನಡೆದಿದೆ. ಸುಟ್ಟಗಾಯದಿಂದ ಆಸ್ಪತ್ರೆಗೆ ದಾಖಲಾಗಿರುವ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ರೇಖಾ ಲೋಧಿ ಈ ಘಟನೆಯ ದುರಂತ ನಾಯಕಿ. ಆರು ವರ್ಷಗಳ ಹಿಂದೆ ನಿರ್ಮಲ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದ ರೇಖಾ ಚೆಲುವು ಮತ್ತು ಲಾವಣ್ಯದಿಂದ ಎಲ್ಲರ ಗಮನಸೆಳೆಯುತ್ತಿದ್ದಳು. ಆಕೆಯ ಗಂಡ ಮತ್ತು ಅತ್ತೆಯ ಮನೆಯವರು ಆಕೆಯ ಸೌಂದರ್ಯವನ್ನು ಪ್ರಶಂಸಿಸುತ್ತಿದ್ದರು. ಆದರೆ ಇದೇ ರೂಪ ಕೆಲವೇ ದಿನಗಳಲ್ಲಿ ತನಗೆ ಮಾರಕವಾಗಲಿದೆ ಎಂಬ ಲವಲೇಶ ಅನುಮಾನವೂ ಆಕೆಗೆ ಇರಲಿಲ್ಲ.
ಯಾವುದೇ ಸಭೆ-ಸಮಾರಂಭಗಳಿಗೆ ಹೋಗಲಿ ಅಲ್ಲಿ ಬಂಧು-ಮಿತ್ರರು ರೇಖಾ ರೂಪವನ್ನು ಹಾಡಿ ಹೊಗಳುತ್ತಿದ್ದರು. ಆಕೆ ಎಲ್ಲರನ್ನೂ ಆಕಷರ್ಿಸುತ್ತಿದ್ದ ಪರಿ ನೋಡಿ ಗಂಡ ನಿರ್ಮಲ್ ಕುಮಾರ್ ಒಳಗೊಳಗೆ ಕುದಿಯುತ್ತಿದ್ದ. 10 ವರ್ಷದ ಬಾಲಕಿಯಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡಿದ್ದ ರೇಖಾ ಮಾವನನ್ನು (ಗಂಡನ ತಂದೆ) ತನ್ನ ತಂದೆಯ ಸಮಾನವಾಗಿ ಗೌರವಿಸುತ್ತಿದ್ದಳು. ಆದರೆ ಆ ವೃದ್ದ ಕೂಡ ಮಗನ ಜೊತೆ ಸೇರಿಕೊಂಡು ರೇಖಾಳ ರೂಪದ ಬಗ್ಗೆ ಕೊಂಕು ನುಡಿಗಳು ಮತ್ತು ವ್ಯಂಗ್ಯ ಮಾತುಗಳನ್ನು ಆಡಿ ಅಕೆಯ ಮನಸ್ಸನ್ನು ಚುಚ್ಚುತ್ತಿದ್ದರು. ದಿನವೂ ಇದೇ ವಿಷಯವಾಗಿ ಮನೆಯಲ್ಲಿ ಜಗಳವಾಗುತ್ತಿತ್ತು. ತನ್ನ ರೂಪದಿಂದಲೇ ತಾನೇ ಇಷ್ಟೆಲ್ಲ ರಾದ್ಧಾಂತವಾಗುತ್ತಿದೆ ಎಂದು ನೊಂದ ರೇಖಾ ತನ್ನ ಸುಂದರವಾದ ಮುಖವನ್ನು ತಾನೇ ಸುಟ್ಟುಕೊಂಡಳು.
ಶೇಕಡ 25ರಷ್ಟು ಸುಟ್ಟ ಗಾಯಗಳಾಗಿರುವ ಆಕೆ ಫಿಲ್ಬಿಟ್ನ ಎಸ್ಎಸ್ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಪ್ರಾಣಾಪಾಯದಿಂದ ಪಾರಾದರೂ ಅಕೆಯ ಮುಖ ವಿರೂಪಗೊಂಡಿದೆ. ನನ್ನ ಗಂಡ ಮತ್ತು ಮಾವ ಕೊಂಕುನುಡಿಗಳಿಂದ ನನ್ನ ರೂಪದ ಬಗ್ಗೆ ಪದೇ ಪದೇ ಛೇಡಿಸುತ್ತಿದ್ದರು. ಇದರಿಂದ ಬೇಸತ್ತು ಮುಖವನ್ನು ನಾನೇ ಸುಟ್ಟುಕೊಂಡೆ ಎಂದು ಚೇತರಿಸಿಕೊಳ್ಳುತ್ತಿರುವ ರೇಖಾ ಹೇಳಿಕೆ ನೀಡಿದ್ದಾಳೆ.
ನನ್ನ ಮಗಳಿಗೆ ಮಾನಸಿಕ ಹಿಂಸೆ ನೀಡಿದ ಗಂಡ ಮತ್ತು ಆತನ ತಂದೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೇಖಾಳ ತಾಯಿ ರಾಮಕುಮಾರಿ ಒತ್ತಾಯಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಸರ್ಕಲ್ ಇನ್ಸ್ಪೆಕ್ಟರ್ ಲಿಖಿತ ದೂರು ನೀಡಿದ ನಂತರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Discussion about this post