ಬೆಂಗಳೂರು, ಸೆ.6: ಅಮೃತಮಹಲ್ ತಳಿಯ ಸಂರಕ್ಷಣೆಯ ಜವಾಬ್ದಾರಿಯನ್ನು ಶ್ರೀರಾಮಚಂದ್ರಾಪುರಮಠವು ವಹಿಸಿಕೊಳ್ಳಲು ಸಿದ್ದವಿದೆ. ಇದು ಸರ್ಕಾರಕ್ಕೆ ನಮ್ಮ ಆಗ್ರಹವಾಗಿದ್ದು, ಸರ್ಕಾರದಿಂದ ಭೂಮಿ ಅಥವಾ ಹಣದ ನಿರೀಕ್ಷೆ ನಮಗಿಲ್ಲ, ಅಳಿಯುತ್ತಿರುವ ಅಮೂಲ್ಯ ಅಮೃತಮಹಲ್ ತಳಿಯ ಸಂರಕ್ಷಣೆಯಷ್ಟೇ ಶ್ರೀಮಠದ ಕಾಳಜಿ ಆಗಿದೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಹೇಳಿದರು.
ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ನಡೆಯುತ್ತಿರುವ ಗೋಚಾತುರ್ಮಾಸ್ಯದ ಗೋಸಂದೇಶ ಸಭೆಯಲ್ಲಿ ಸಾನ್ನಿಧ್ಯವಹಿಸಿ ಮೈಸೂರು ಮಹಾರಾಜರು ವಿಶೇಷ ಕಾಳಜಿಯಿಂದ ಅಭಿವೃದ್ಧಿಪಡಿಸಿದ ಅಮೃತಮಹಲ್ ತಳಿಯ ಬಗ್ಗೆ ಮಾತನಾಡಿದ ಶ್ರೀಗಳು, ಅಮೃತಮಹಲ್ ಕಾವಲ್ ಬಗ್ಗೆ ಸರ್ಕಾರ ನಿರ್ಲಕ್ಷವಹಿಸಿದೆ, ಸರ್ಕಾರ ಮಾಡಬೇಕಾಗಿದ್ದ ಕೆಲಸವನ್ನು ಮಾಡಲು ಶ್ರೀಮಠ ಸಿದ್ದವಿದೆ. ಸರ್ಕಾರ ಸೂಕ್ತರೀತಿಯಲ್ಲಿ ಸ್ಪಂದಿಸಿದರೆ, ಅಮೃತಮಹಲ್ ತಳಿಯ ಸಂರಕ್ಷಣೆಯ ಹೊಣೆಯನ್ನು ಹೊತ್ತು ಮೈಸೂರು ಮಹಾರಾಜರ ಕಾಲದಲ್ಲಿದ್ದಂತೆ ಪುನಃ ಅಭಿವೃದ್ಧಿಪಡಿಸಿ, ತಳಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಶ್ರೀರಾಮಚಂದ್ರಾಪುರಮಠ ಮಾಡುತ್ತದೆ ಎಂದು ಸರ್ಕಾರವನ್ನು ಆಗ್ರಹಿಸಿದರು.
ಹಿಂದೆ ಮೈಸೂರು ಮಹರಾಜರು ಅಮೃತಮಹಲ್ ರಾಸುಗಳನ್ನು ಯುದ್ಧದಲ್ಲಿಯೂ ಬಳಸಿ ಯಶಸ್ಸನ್ನು ಗಳಿಸಿದ್ದರು, ಹೈದರಾಲಿ, ಟಿಪ್ಪು ಸುಲ್ತಾನ್ ಕೂಡ ಈ ತಳಿಗಳ ಬಗ್ಗೆ ವಿಶೇಷ ಕಾಳಜಿ ತೋರಿಸಿದ್ದರು, ಅಂದು ಅಮೃತಮಹಲ್ ಕಾವಲ್ ನಿರ್ವಹಣೆಗಾಗಿಯೇ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದ್ದರು, ಮೈಸೂರು ಅರಮನೆಗೆ ಹಾಲು ಹಾಗೂ ಇತರ ಉತ್ಪನ್ನಗಳೂ ಅಮೃತಮಹಲ್ ಕಾವಲ್ ನಿಂದ ಪೂರೈಕೆಯಾಗುತ್ತಿತ್ತು. ವಿಶಿಷ್ಟವಾದ ಈ ತಳಿಯ ಬಗ್ಗೆ ಇಂದಿನ ಸರ್ಕಾರಗಳ ನಿರ್ಲಕ್ಷದಿಂದಾಗಿ ವಿನಾಶದ ಅಂಚಿನಲ್ಲಿದೆ, ಇವುಗಳನ್ನು ಸಂರಕ್ಷಿಸಲೇ ಬೇಕಾದ ಅನಿವಾರ್ಯತೆ ಇದ್ದು, ಶ್ರೀಮಠ ಇದರ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಸಿದ್ದವಿದ್ದು, ಭೂಮಿ ಅಥವಾ ಹಣದ ನಿರೀಕ್ಷೆ ಮಠಕ್ಕೆ ಇಲ್ಲ, ಕಾಲಮಿಂಚುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಇತಿಹಾಸ ಕ್ಷಮಿಸುವುದಿಲ್ಲ ಎಂದರು.
ಮಹಾರಾಷ್ಟ್ರದ ಅಕ್ಕಲಕೋಟೆಯ ಪೂಜ್ಯ ರಾಜಶೇಖರ ಶಿವಾಚಾರ್ಯ ಸ್ವಾಮಿಜಿ ಸಂತಸಂದೇಶ ನೀಡಿ, ಗೋಮಾತೆ ಇಲ್ಲದಿದ್ದರೆ ಭಾರತ ಮಾತೆಯ ಉಳಿವು ಅಸಾಧ್ಯ, ಇಂದು ಗೋವುಗಳ ಸ್ಥಿತಿ ಶೋಚನೀಯವಾಗಿದೆ ಎಂದ ಶ್ರೀಗಳು, ರಾಘವೇಶ್ವರ ಶ್ರೀಗಳ ಗೋಪ್ರೇಮವನ್ನು ನೋಡಿ ಮಹಾರಾಷ್ಟದಲ್ಲಿರುವ ತಮ್ಮ ಆಶ್ರಮದಲ್ಲಿ ಗೋಶಾಲೆಯನ್ನು ನಿರ್ಮಿಸಲು ಪ್ರೇರೇಣೆಯಾಗಿದ್ದು, ಶ್ರೀಗಳ ಹೆಸರಿನಲ್ಲಿಯೇ ಗೋಶಾಲೆಯನ್ನು ನಿರ್ಮಿಸುತ್ತೇವೆ ಎಂದು ಸಭೆಯಲ್ಲಿ ಉದ್ಘೋಷಿಸಿದರು. ಪೂಜ್ಯ ಪ್ರಶಾಂತ ದೇವರು, ವಿರಕ್ತಮಠ ಹಾಗೂ ಶ್ರೀರಾಮಚಂದ್ರ ಗುರೂಜಿ ಸಭೆಯಲ್ಲಿ ಸಾನ್ನಿಧ್ಯವಹಿಸಿದ್ದರು.
ಗೋಸೇವಕ ಗುಣವಂತೇಶ್ವರ ಭಟ್ ಅವರಿಗೆ ಪೂಜ್ಯ ಶ್ರೀಗಳು ಗೋಸೇವಾ ಪುರಸ್ಕಾರವನ್ನು ಅನುಗ್ರಹಿಸಿದರು. ಗುಣವಂತೇಶ್ವರ ಭಟ್ ಅವರು ಗೋವುಗಳ ಕುರಿತಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ಶ್ರೀಭಾರತೀಪ್ರಕಾಶನವು ಹೊರತಂದ ಗೋ-ಧುನ್ ಹಾಗೂ ಸಾಧನಾಪಂಚಕ ಪ್ರವಚನಮಾಲಿಕೆಯ ದೃಶ್ಯ ಮುದ್ರಿಕೆಯನ್ನು ಸಾನ್ನಿಧ್ಯವಹಿಸಿದ್ದ ಸಂತರು ಲೋಕಾರ್ಪಣೆ ಮಾಡಿದರು. ಸಭಾಕಾರ್ಯಕ್ರಮದ ನಂತರ ಕಲಾರಾಮ ವೇದಿಕೆಯಲ್ಲಿಜೆಡ್ಡು ರಾಮಚಂದ್ರ ಭಟ್ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ವೆಂಕಟನಾರಾಯಣ, ವಿಶ್ವೇಶ್ವರಯ್ಯ ಸಹಕಾರದ ಸಂಘದ ಶ್ರೀಪತಿ ರಾವ್, ಉದ್ಯಮಿಗಳಾದ ರಾಮಕೃಷ್ಣ ಅಡಿಗ, ಇಂದು ಲೋಕಾರ್ಪಣೆಯಾದ ಸಿಡಿಯ ಗಾಯಕರಾದ ಕೊಲ್ಕತ್ತಾದ ಸತ್ಯಜಿತ್ ಜೈನ್, ರಾಜ್ಯ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ವಸಂತಿ ಕೆ ಇವರುಗಳು ಉಪಸ್ಥಿತರಿದ್ದು ಶ್ರೀಗಳಿಂದ ಆಶೀರ್ವಾದ ಪಡೆದರು. ಜಿ ವಿ ಹೆಗಡೆ ಕೋಣನಕುಂಟೆ ಇವರು ಸರ್ವಸೇವೆ ನೆರವೇರಿಸಿದರು. ಶ್ರೀಮಠದ ಪದಾಧಿಕಾರಿಗಳು, ವಿವಿಧ ಭಾಗಗಳ ಶಿಷ್ಯ ಭಕ್ತರು ಉಪಸ್ಥಿತರಿದ್ದರು. ಎಂದಿನಂತೆ ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ, ಫಲಸಮರ್ಪಣೆ, ಮಂತ್ರಾಕ್ಷತೆ ಹಾಗೂ ಸಾಧನಾಪಂಚಕ ಪ್ರವಚನ ನಡೆಯಿತು.
Discussion about this post