Read - 3 minutes
ಹೊಸನಗರ(ಶಿವಮೊಗ್ಗ), ಅ.8: ಆಡಳಿತ ಮಾಡಲಲ್ಲ, ಆಡಳಿತ ಕಲಿಯಲು ಶ್ರೀರಾಮಚಂದ್ರಾಪುರಮಠಕ್ಕೆ ಬನ್ನಿ. ನಮ್ಮ ಮಠದಲ್ಲಿ ದಕ್ಷ –ಸಜ್ಜನ ಆಡಳಿತಗಾರರಿದ್ದು, ನೆಲದ ಕಾನೂನಿನ ಉಲ್ಲಂಘನೆಯಾಗಿಲ್ಲ, ಧರ್ಮದ ಹಾದಿಯನ್ನೂ ಮಠ ಬಿಟ್ಟಿಲ್ಲ. ಮಠ ಸ್ಥಾಪನೆ ಮಾಡಿದ್ದು ಶಂಕರಾಚಾರ್ಯರು, ಭಕ್ತರು ಕಟ್ಟಿಬೆಳೆಸಿದ್ದಾರೆ, ಬೇರೆಯವರಿಗೆ ಇದನ್ನು ಮುಟ್ಟುವ ಹಕ್ಕಿಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಹೊಸನಗರ ರಾಮಚಂದ್ರಾಪುರಮಠದ ಪ್ರಧಾನಮಠದ ಆವರಣದಲ್ಲಿ ಇಂದು ನಡೆದ ಐತಿಹಾಸಿಕ ಶಪಥಪರ್ವ ಸಮಾವೇಶದಲ್ಲಿ ಸಂದೇಶ ನೀಡಿದ ಅವರು, ಎಷ್ಟೇ ಆಕ್ರಮಣ ಮಾಡಿದರೂ ನಮ್ಮಿಂದ ಶಿಷ್ಯವೃಂದ ಹಾಗೂ ನಮ್ಮ ಮುಖದ ನಗು ಕಸಿದುಕೊಳ್ಳಲು ಸಾಧ್ಯವಿಲ್ಲ. ಶಿಷ್ಯರಿಗಾಗಿ ಗುರುಗಳು ತಪಸ್ಸನ್ನಾಚರಿಸುವುದು ಸಾಮಾನ್ಯ, ಆದರೆ ಇಂದು ಗುರುಗಳಿಗಾಗಿ ಮೌನ ಹಾಗೂ ಉಪವಾಸದ ಮೂಲಕ ತಪಸ್ಸನ್ನಾಚರಿಸಿದ್ದಾರೆ. ಇಂತಹ ಶಿಷ್ಯರು ಎಷ್ಟು ದುರ್ಲಭವೋ, ಇಂತಹ ಸರ್ಕಾರಗಳೂ ಕೂಡ ಅಷ್ಟೇ ದುರ್ಲಭ ಎಂದು ಮಾರ್ಮಿಕವಾಗಿ ಹೇಳಿದರು. ಯುದ್ಧ ಸುಲಭ ಆದರೆ ಸಹನೆ ಕಷ್ಟ, ಗುರುಗಳಿಗೆ ಸಹನೆ ಸಹಜ ಹಾಗೂ ಗುರುಗಳ ಸಹನೆಗೆ ಮಿತಿ ಇಲ್ಲ, ಆದರೆ ಶಿಷ್ಯರ ಸಹನೆಗೆ ಮಿತಿ ಇದೆ. ಈ ಕುರಿತು ಸರ್ಕಾರ ಎಚ್ಚರ ವಹಿಸಬೇಕು ಎಂಬ ಸಂದೇಶವನ್ನು ಸರ್ಕಾರಕ್ಕೆ ನೀಡಿದರು.
ಶಾರೀರಿಕವಾಗಿ, ಬೌದ್ಧಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಒಂದು ಮಠವನ್ನು ನಾಶಪಡಿಸಲು ವರ್ಷಗಳಿಂದ ಪ್ರಯತ್ನ ನಡೆದಿದೆ. ಪುಸ್ತಕದಲ್ಲಿರುವ ಎಲ್ಲ ಕಾನೂನುಗಳು ರಾಮಚಂದ್ರಾಪುರ ಮಠವನ್ನು ಪೀಡಿಸಲಿಕ್ಕೆ ಇದೆಯ? ಎಂದು ಪ್ರಶ್ನಿಸಿದ ಶ್ರೀಗಳು, ಮಠದ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗುವ ಮುನ್ನ ಸರಿಯಾದ ಕಾರಣ ನೀಡಿ ಮುಂದುವರಿಯಿರಿ. ನಾವು ನ್ಯಾಯಲಯಗಳನ್ನು ಹಾಗೂ ಸರ್ಕಾರವನ್ನೂ ಆಗ್ರಹಿಸುವುದು ಇಷ್ಟೇ, ಕಾನೂನನ್ನು ಪ್ರಕಾರ ಹೋಗಿ, ಧಾರ್ಮಿಕ ಶ್ರದ್ಧಾಕೇಂದ್ರದಮೇಲೆ ಅನ್ಯಾಯಮಾಡಬೇಡಿ ಇದುವರೆಗೂ ನಾವು ಯಾವ ಸರಕಾರಕ್ಕೂ ವಿರುದ್ಧವಾಗಿ ಹೋದವರಲ್ಲ. ಯಾವುದೇ ಒಂದು ಪಕ್ಷ ಬೆಂಬಲಿಸಿ ನಿಂತಿಲ್ಲ. ಎಲ್ಲಿಯೂ ಚುನಾವಣಾ ರಾಜಕೀಯ ಮಾಡಿಲ್ಲ, ನಮ್ಮ ಶಿಷ್ಯರನ್ನು ನಿಮ್ಮ ರಾಜಕೀಯಕ್ಕೆ ಬಳಸಿಲ್ಲ ಹಾಗಿದ್ದರೂ ನಮ್ಮ ಮೇಲೆ ನಿಮ್ಮ ವಿರೋಧವೇಕೆ ಎಂದು ಪ್ರಶ್ನಿಸಿದ ಶ್ರೀಗಳು, ಯಾವ ಹಗರಣವೂ ಇಲ್ಲದ, ಅವ್ಯವಹಾರ ಒಲ್ಲದ ಮಠದ ಮೇಲೆ ನಿಮ್ಮ ಆಕ್ರಮಣ ಸರಿಯೇ ಜನರಿಗೆ ಉತ್ತರ ಕೊಡಿ ಎಂದರು.
ಗೋಕರ್ಣ ಹೋಗಿ ನೋಡಿ. ಹಿಂದೂ ಬಂದಿದ್ದ ಈಗ ಬರುತ್ತಿರುವ ಭಕ್ತರನ್ನು ಕೇಳಿ. ಮೊದಲು ಲೂಟಿ ಇತ್ತು ಈಗ ಪ್ರೀತಿ ಇದೆ. ಅಲ್ಲಿ ಕೊಳಕಿತ್ತು. ಈಗ ಸ್ವಚ್ಚತೆ ಇದೆ. ಆಗ ಹಸಿವಿತ್ತು. ಈಗ ಊಟ ಹಾಕಲಾಗುತ್ತಿದೆ ಇದು ತಪ್ಪ..? ಬ್ಲಾಕ್‍ಮೇಲ್ ಮಾಡುವ, ನಕಲಿ ಸಿಡಿ ತಯಾರಿಸುವ ವ್ಯಕ್ತಿಗಳು ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದರೂ ಅದು ತಪ್ಪು ಎನ್ನುವುದನ್ನು ನ್ಯಾಯಾಲಯವೂ ಒಪ್ಪಿದ್ದರೂ ಸರಕಾರವೇ ಅವರನ್ನು ರಕ್ಷಿಸುವುದಕ್ಕೆ ಹೋಗುತ್ತದೆ ಎಂದು ಸರ್ಕಾರದ ವಿವಿಧ ಇಲಾಖೆಗಳಮೂಲಕ ಮಠದಮೇಲಾಗುತ್ತಿರುವ ಅನ್ಯಾಯವನ್ನು ಪ್ರಶ್ನಿಸಿದರು.
ಎಲ್ಲ ಮಠಗಳಿಗೆ ಒಂದು ಕರೆ:
ಏಳಿ, ಎಚ್ಚರಗೊಳ್ಳಿ, ನಮ್ಮ ರಕ್ಷಣೆಗೋಸ್ಕರ ನಾವು ನಿಮ್ಮನ್ನು ಕರೆಯುತ್ತಿದ್ದೆವೆ ಎಂದು ತಪ್ಪು ತಿಳಿಯಬೇಡಿ, ನಮ್ಮ ರಕ್ಷಣೆ ನಾವು-ಭಕ್ತರು ಸೇರಿ ಮಾಡಿಕೊಳ್ತೇವೆ, ಒಂದು ವೇಳೆ ಅನಾಹುತ ಸಂಭವಿಸಿದರೆ, ನಿಮ್ಮ ಮಠಗಳ ಮೇಲಿನ ಆಕ್ರಮಣಕ್ಕೆ ದ್ವಾರ ತೆರೆದುಕೊಳ್ಳುತ್ತದೆ. ನಾವೆಲ್ಲ ಮಠಾಧೀಶರೂ ಒಟ್ಟಾದರೆ, ಯಾರೂ ಏನು ಮಾಡಲಾರರು, ಎಲ್ಲ ಮಠಗಳು ಎಚ್ಚರಗೊಳ್ಳಿ ಎಂದು ಮಠಗಳಿಗೆ ಕರೆ ನೀಡಿದರು.
ಷಡ್ಯಂತ್ರಿಗಳಿಗೆ,ಸರಕಾರಕ್ಕೆ ಸೂಚನೆ:
ಇವತ್ತು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು, ಇದೇ ಜಾಗದಲ್ಲಿ ಹೀಗೆಯೇ ಇಷ್ಟೇ ಸಂಖ್ಯೆಯ ಸಂತರನ್ನು ಸೇರಿಸಬಲ್ಲೆವು ನಾವು, ಅದು ಇದಕ್ಕಿಂತ ನೂರ್ಪಟ್ಟು ಪರಿಣಾಮ ಬೀರಬಲ್ಲದು. ಇಂದಿಗೇ ಈ ಎಲ್ಲಾ ಆಕ್ರಮಣಗಳನ್ನು ನಿಲ್ಲಿಸಿ. ಇಲ್ಲದಿದ್ದರೆ ತೀವ್ರಪರಿಣಾಮವನ್ನು ಎದುರಿಸಬೇಕಾದೀತು, ಇಷ್ಟು ದಿನ ನಮ್ಮ ಮೇಲೆ ಆಕ್ರಮಣವಾದಾಗ ನಾವು ಸಹಿಸಿದೆವು, ಆದರೆ ಮಠದಮೇಲೆ ಆಕ್ರಮಣವನ್ನು ಸಹಿಸಲು ಸಾಧ್ಯವಿಲ್ಲ, ಕಾನೂನಿನ ಉಲ್ಲಂಘನೆಯಾಗಿಲ್ಲದಿದ್ದರೂ ಇಂದು ಮೂಲ ಮಠ, ಪ್ರಧಾನ ಮಠ, ಆಡಳಿತ ಕ್ಷೇಂದ್ರ , ಪೀಠಾಧಿಪತಿಗಳು – ಇವೆಲ್ಲವೂ ಪೀಡನೆಗೆ ಒಳಗಾಗಿದೆ. ಮಠದ ರಕ್ಷಣೆಗಾಗಿ ಯಾವುದೇ ತ್ಯಾಗಕ್ಕೂ ಸಿದ್ದರಿದ್ದು, ಪ್ರಾಣಾರ್ಪಣೆಗೂ ಸಿದ್ಧ ಎಂದರು.
ಇದಕ್ಕೂ ಮೊದಲು ಪ್ರಧಾನಮಠದಲ್ಲಿರುವ ಶ್ರೀರಾಮದೇವರಿಗೆ ಪ್ರಾರ್ಥನೆಸಲ್ಲಿಸಿ, ಮಠದ ರಕ್ಷಣೆಯ ಶಪಥವನ್ನು ಬೋಧಿಸುವ ಮೂಲಕ ಶಪಥಪರ್ವ ಸಮಾವೇಶಕ್ಕೆ ಶ್ರೀಗಳು ಚಾಲನೆ ನೀಡಿದರು. ಶ್ರೀಮಠಕ್ಕೆ 21 ಬಾರಿ ಆದಿತ್ಯಹೃದಯವನ್ನು ಪಠಿಸುತ್ತಾ ಭಕ್ತರೊಂದಿಗೆ ಶ್ರೀಗಳು ಪ್ರದಕ್ಷಿಣೆಹಾಕಿ, ಭಕ್ತರ ಜೊತೆ ಉಪವಾಸ ಕೈಗೊಂಡರು.
ಹೊಸನಗರದಿಂದ ಶ್ರೀರಾಮಚಂದ್ರಾಪುರಮಠದ ವರೆಗೆ ಬೆಳಗ್ಗೆ ಮೌನ ಪಾದಯಾತ್ರೆ ನಡೆಯಿತು. ಸುಮಾರು 3 ಕಿಲೋಮೀಟರ್ ಉದ್ದಕ್ಕೆ ಈ ಜಾಥಾ ವ್ಯಾಪಿಸಿದ್ದು ಜನತೆ ಶ್ರೀಮಠದ ಮೇಲೆ ಇಟ್ಟಿರುವ ಶ್ರದ್ಧೆಗೆ ಸಾಕ್ಷಿಯಾಯಿತು.
ಜನಸಾಗರ:
ಮಂಗಳೂರು, ಬೆಂಗಳೂರು, ಸಾಗರ, ಹೊಸನಗರ, ಹೊನ್ನಾವರ, ಕುಮಟ, ಮುಂಬೈ ಸೇರಿದಂತೆ ರಾಜ್ಯ ಹೊರರಾಜ್ಯದ, ಎಲ್ಲಾ ಜಾತಿಮತಕ್ಕೆ ಸೇರಿದ ಸುಮಾರು ೩೦,೦೦೦ ಶ್ರೀಮಠದ ಶಿಷ್ಯರು ಹಾಗೂ ಅಭಿಮಾನಿಗಳು ಶಪಥಪರ್ವ ಸಮಾವೇಶದಲ್ಲಿ ಭಾಗಿಯಾಗಿದ್ದರು. ಮಂಗಳೂರಿನ ಶ್ರೀರಾಜಶೇಖರಾನಂದ ಸ್ವಾಮಿಜಿ, ಕಾಶಿ ಕಪಿಲಾಶ್ರಮದ ರಾಮಚಂದ್ರ ಸ್ವಾಮಿಜಿ ಹಾಗೂ ಗುಲ್ಬರ್ಗಾದ ಶ್ರೀ ಪಾಂಡುರಂಗ ಮಹರಾಜ್ ಹಾಗೂ ಅನೇಕ ಜನಪ್ರತಿನಿಧಿಗಳು ಭಾಗಿಯಾಗಿದ್ದರು.
ಇಷ್ಟೇ ಅಲ್ಲದೇ, ಬೇರೆ ಬೇರೆ ಸ್ಥಳದಲ್ಲಿ ಹಾಗೂ ವಿದೇಶದಲ್ಲಿ ನೆಲಸಿರುವ ಮಠದ ಸುಮಾರು 5 ಲಕ್ಷ ಭಕ್ತರು ಇದೇ ಸಮಯದಲ್ಲಿ ಮೌನ ಹಾಗೂ ಉಪವಾಸ ಕೈಗೊಳ್ಳುವ ಮೂಲಕ ಅಲ್ಲಿಂದಲೇ ತಮ್ಮ ಧ್ವನಿಯನ್ನು ಸೇರಿಸಿ ಮಠದೊಂಡಿಗೆ ನಾವಿದ್ದೇವೆ ಎಂದರು.
Discussion about this post