ಕಣ್ಣೂರು, ಅ.3: ಎಲ್ಲಾ ಉದ್ಯಮಗಳಲ್ಲಿಯೂ ನಕಲಿಯನ್ನಾಗಿಸುವ ಕುಖ್ಯಾತಿ ಹೊಂದಿರುವ ಚೀನಾ , ಇದೀಗ ಮೊಟ್ಟೆಯಲ್ಲೂ ಅಂತಹದ್ದೇ ಪ್ರಯೋಗ ಮಾಡಿರುವುದು ಆತಂಕಕ್ಕೀಡುಮಾಡಿದೆ. ನಕಲಿ ಮಾಲುಗಳನ್ನು ದೇಶದ ಮಾರುಕಟ್ಟೆಗೆ ನುಗ್ಗಿಸಿ ಭಾರತದ ಆರ್ಥಿಕತೆಯನ್ನು ಹಾಳುಗೆಡವುದರ ಜೊತೆಗೆ , ಆರೋಗ್ಯಕ್ಕೆ ಮಾರಕವಾದ ಆಹಾರ ವಸ್ತುಗಳನ್ನು ಭಾರತದಲ್ಲಿಳಿಸಿ ಈಗ ತಲ್ಲಣ ಮೂಡಿಸಿದೆ.
ಜನರ ಆರೋಗ್ಯಕ್ಕೆ ಮಾರಕವಾಗುವ ರೀತಿಯಲ್ಲಿ ನಕಲಿ ಚೈನೀಸ್ ಮೊಟ್ಟೆಗಳ ಹಾವಳಿ ಕೇರಳದಲ್ಲಿ ಆರಂಭಗೊಂಡಿದೆ. ಗಂಭೀರ ಅನಾರೋಗ್ಯ ಸಮಸ್ಯೆಗಳನ್ನು ಉಂಟುಮಾಡುವ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಿ ಈ ನಕಲಿ ಮೊಟ್ಟೆಗಳನ್ನು ತಯಾರಿಸಲಾಗುತ್ತದೆ. ಇದರ ಮೂಲವನ್ನು ಪತ್ತೆ ಹಚ್ಚುವುದಕ್ಕೋ ಇಂತಹ ಮೊಟ್ಟೆಗಳನ್ನು ಪತ್ತೆ ಹಚ್ಚುವುದಕ್ಕೋ ಸಾಧ್ಯವಾಗದೆ ಆರೋಗ್ಯ ಇಲಾಖೆಯು ಚಡಪಡಿಸಲಾರಂಭಿಸಿದೆ.
ಕಳೆದ ಕೆಲವು ತಿಂಗಳುಗಳ ಹಿಂದೆಕಣ್ಣೂರು ಜಿಲ್ಲೆಯಲ್ಲಿಯೇ `ನಕಲಿಅಕ್ಕಿ’ಯನ್ನು ಪತ್ತೆ ಹಚ್ಚಲಾಗಿತ್ತು. ಇದನ್ನು ಬೇಯಿಸಿದಾಗ ಕರಗಿ ಪ್ಲಾಸ್ಟಿಕ್ ರೂಪ ಪಡೆದಾಗಲೇ ಇದು ನಕಲಿ ಅಕ್ಕಿಯೆಂದು ಪತ್ತೆ ಹಚ್ಚಲು ಸಾಧ್ಯವಾದದ್ದು! ಇದೀಗ ನಕಲಿ ಮೊಟ್ಟೆಗಳ ಹಾವಳಿಯು ಇತರ ಜಿಲ್ಲೆಗಳಿಗೂ ಹರಡಿರುವುದಾಗಿ ಬಲವಾದ ಶಂಕೆ ಮೂಡಿ ಬಂದಿದೆ.
ಚೈನೀಸ್ ಮೊಟ್ಟೆ ಎಂದು ಕರೆಯಲ್ಪಡುವ ಈ ಮೊಟ್ಟೆಯನ್ನು ಇನ್ನಿತರ ಕೆಲವು ದೇಶಗಳಲ್ಲಿಯೂ ಉತ್ಪಾದಿಸುತ್ತಿರುವುದಾಗಿ ತಿಳಿದು ಬಂದಿದೆ. ಕಳೆದ ಭಾನುವಾರ ಕಣ್ಣೂರು ಕರಿವೆಳ್ಳೂರು ನಿವಾಸಿ ಕೂತೂರು ರಾಮಚಂದ್ರನ್ ಎಂಬವರಿಗೆ ಲಭಿಸಿದ ಮೊಟ್ಟೆಗಳೆಲ್ಲಾ ಇದೇ ವರ್ಗಕ್ಕೆ ಸೇರಿದವುಗಳಾಗಿದ್ದವು. ತಮಿಳುನಾಡಿನ ಮೂಲಕ ಕೇರಳಕ್ಕೆ ಈ ಮೊಟ್ಟೆಗಳು ಹೆಚ್ಚಾಗಿ ಸಾಗಾಟವಾಗುತ್ತಿವೆ ಎನ್ನಲಾಗಿದೆ. ಇದಕ್ಕೆ ಸಾಮಾನ್ಯ ನಾಟಿಕೋಳಿ ಮೊಟ್ಟೆಯ ಬೆಲೆಯನ್ನೇ ನಿಗದಿಪಡಿಸಲಾಗಿದೆ. ವ್ಯಾಪಾರಿಗಳು ಇದು ನಕಲಿಮೊಟ್ಟೆಯೆಂದು ತಿಳಿಯದೆಯೇ ಖರೀದಿಸಿ ಮೋಸ ಹೋಗುತ್ತಿರುವುದಾಗಿ ತಿಳಿದು ಬಂದಿದೆ.
ಚೈನೀಸ್ ಕೋಳಿಮೊಟ್ಟೆಯ ಕುರಿತಾಗಿ ಈ ಹಿಂದೆಯೇ ಸಾಮಾಜಿಕ ಅಂತರ್ಜಾಲಗಳಲ್ಲಿ ವಿವರಣೆ ಬಂದಿತ್ತು. ಮೊಟ್ಟೆಯೊಳಗಿನ ಲೋಳೆೆ(ಬಿಳಿ ದ್ರವ)ಗಾಗಿ ಸ್ಟಾರ್ಚ್, ರೆಸಿನ್, ಸೋಡಿಯಂ ಆಲ್ಗಿನೇಟ್ ಉಪಯೋಗಿಸಲಾಗುತ್ತದೆ. ಇದನ್ನು ದ್ರವರೂಪಕ್ಕೆ ತರಲು ಒಂದು ರೀತಿಯ ಆಲ್ಗಾದ ಸತುವನ್ನು ಉಪಯೋಗಿಸಲಾಗುತ್ತಿದೆ. ಇನ್ನು ಮೊಟ್ಟೆಯೊಳಗಿನ ಹಳದಿಗಾಗಿ ಅರ್ಗಿಕ್ ಆ್ಯಸಿಡ್, ಪೊಟಾಶಿಯಂ ಆಲಂ, ಜಲಾಟಿನ್, ಕ್ಯಾಲ್ಸಿಯಂಕ್ಲೋರೈಡ್, ಬೆನ್ಸಿಯೋಸಿಕ್ ಆ್ಯಸಿಡ್, ಕೃತಕ ಬಣ್ಣ ಮೊದಲಾದವುಗಳನ್ನು ಉಪಯೋಗಿಸಲಾಗುತ್ತಿದೆ. ಮೊಟ್ಟೆಯ ಚಿಪ್ಪನ್ನು ತಯಾರಿಸಲು ಕ್ಯಾಲ್ಸಿಯಂ ಕಾರ್ಬೋನೇಟ್, ಜಿಪ್ಲಂ, ಪೆಟ್ರೋಲಿಯಂ ಮಯಣ ಸೇರಿದಂತೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಲಾಗುತ್ತಿದೆ. ಇದು ನಿಜವಾದ ಮೊಟ್ಟೆಯೆಂದು ನಂಬಿಸುವುದಕ್ಕಾಗಿ ಈ ರೀತಿಯಾಗಿ ಕೃತಕವಾಗಿ ನಿರ್ಮಿಸಿದ ಮೊಟ್ಟೆಗಳ ಮೇಲೆ ಕೊಳಿಯ ತ್ಯಾಜ್ಯಗಳನ್ನೂ ಸಿಂಪಡಿಸಲಾಗುತ್ತದೆ. ಮೊಟ್ಟೆಗಳ ಚಿಪ್ಪುಗಳನ್ನು ನಿರ್ಮಿಸುವುದಕ್ಕಾಗಿ ಪ್ರತ್ಯೇಕ ಅಚ್ಚುಗಳನ್ನು ಉಪಯೋಗಿಸಲಾಗುತ್ತಿದೆ. ಇದನ್ನು ಎಷ್ಟೇ ಪರಿಶೋಸಿದರೂ ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಈ ಮೊಟ್ಟೆಗಳನ್ನು ನಿರ್ಮಿಸಲಾಗುತ್ತಿದೆ.
1990ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಈ ಕೃತಕ ಮೊಟ್ಟೆಯ ತಯಾರಿ ಆರಂಭಗೊಂಡಿತ್ತು. ಇದೀಗ ಸಾವಿರಾರು ಮಂದಿ ಗುಡಿಕೈಗಾರಿಕಾ ರೀತಿಯಲ್ಲಿ ಇಂತಹ ಮೊಟ್ಟೆಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ವ್ಯಕ್ತಿಯೋರ್ವ ದಿನವೊಂದರಲ್ಲಿ ಇಂತಹ 1500 ಮೊಟ್ಟೆಗಳನ್ನು ಉತ್ಪಾದಿಸುತ್ತಿರುವುದಾಗಿ ಚೀನಾದ ಸುದ್ದಿಮೂಲಗಳು ಬೊಟ್ಟು ಮಾಡುತ್ತಿವೆ.
ಈ ಮೊಟ್ಟೆಯನ್ನು ಒಡೆದು ದಿವಸಗಳು ಕಳೆದರೂ ಯಾವುದೇ ವಾಸನೆ ಉಂಟಾಗುವುದಿಲ್ಲ. ಇದಕ್ಕೆಇರುವೆಯಾಗಲೀ ನೊಣವಾಗಲೀ ಮುತ್ತಿಕೊಳ್ಳದು. ಮೊಟ್ಟೆಯ ಹಳದಿಗೆ ರಬ್ಬರ್ ಗುಣವಿರುವುದು. ಮೊಟ್ಟೆಯ ಚಿಪ್ಪನ್ನು ಒಡೆದರೂ ಮೊಟ್ಟೆಯೊಳಗಿನ ಭಾಗಗಳು ಒಡೆಯಲಾರವು. ಚಿಪ್ಪಿನ ಬಳಿಕ ಸೂಕ್ಷ್ಮವಾದ ಪ್ಲಾಸ್ಟಿಕ್ ಪದರುಇರುವುದರಿಂದಲೇ ಮೊಟ್ಟೆಯ ಚಿಪ್ಪೊಡೆದರೂ ಒಳಗಿನ ಭಾಗಗಳು ಚದುರದೆ ನಿಲ್ಲುತ್ತವೆ. ಇಂತಹ ಮೊಟ್ಟೆಗಳಿಗೆ ರುಚಿ, ಸುವಾಸನೆ ಇತರ ಮೊಟ್ಟೆಗಳಿಗಿಂತ ಕಡಿಮೆಯಾಗಿದೆ. ಇದನ್ನು ತಿನ್ನುವಾಗ ಚೂಯಿಂಗಂ ಜಗಿದ ಅನುಭವವಾಗುವುದು. ಹೊಟೇಲ್ ಗಳು ಫ್ರೈಡ್ ರೈಸ್, ಮೊಟ್ಟೆ ಪದಾರ್ಥದಲ್ಲಿ ಇವುಗಳನ್ನು ಉಪಯೋಗಿಸಿದರಂತೂ ಪತ್ತೆಹಚ್ಚಲೇ ಸಾಧ್ಯವಾಗದು. ಇಂತಹ ಮೊಟ್ಟೆಗಳಿಂದ ಕಿಡ್ನಿ , ಕರುಳು ಮತ್ತು ಹೊಟ್ಟೆಯನ್ನು ಬಾಸುವ ಗಂಭೀರ ರೋಗಗಳು ಉಂಟಾಗುವ ಸಾಧ್ಯತೆ ಇರುವುದಾಗಿ ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಭಯೋತ್ಪಾದಕ ಪಾಕಿಗೆ ಬೆಂಬಲ ನೀಡುವ ಚೀನಾ, ಈಗ ಇಂತಹ ಹುನ್ನಾರ ನಡೆಸುತ್ತಿರುವ ಬಗ್ಗೆ ಭಾರತೀಯರು ಎಚ್ಚೆತ್ತುಕೊಂಡು ಚೀನೀ ಉತ್ಪನ್ನಗಳನ್ನು ಬಹಿಷ್ಕರಿಸಿ ದೇಶದ ಉತ್ಪನ್ನಗಳನ್ನೇ ಬಳಸಿ ತಮ್ಮಆರೋಗ್ಯ ಮತ್ತು ದೇಶದ ಆರ್ತಿಕ ಸ್ವಾಸ್ಥ್ಯವನ್ನು ರಕ್ಷಿಸಬೇಕಾಗಿದೆ.
Discussion about this post