Read - 2 minutes
ನವದೆಹಲಿ, ಅ.9: ಗಡಿ ನಿಯಂತ್ರಣ ರೇಖೆಯಾಚೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತದ ವಿರುದ್ಧ ಭಯೋತ್ಪಾದಕ ದಾಳಿಗೆ ಸಂಚು ನಡೆಸುತ್ತಿದ್ದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಪಡೆಗಳು ನಡೆಸಿದ ದಾಳಿ ನಡೆಸಿ ವಿಧ್ವಂಸಕ ಶಿಬಿರಗಳನ್ನು ಧ್ವಂಸಗೈದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ಈ ವರ್ಷ ನಾವಾಚರಿಸುವ ವಿಜಯ ದಶಮಿ ‘ಅತ್ಯಂತ ವಿಶೇಷ’ ಎಂದು ಮಾರ್ಮಿಕವಾಗಿ ಉಲ್ಲೇಖಿಸಿದ್ದಾರೆ.
ಇಂದು ಇಲ್ಲಿನ ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಅತ್ಯಂತ ಸಮರ್ಥ ಸಶಸ್ತ್ರಪಡೆಗಳು ಅಗತ್ಯ ಎಂದು ಒತ್ತಿ ಹೇಳಿದರು. ನಾವು ವಿಜಯದಶಮಿ ಆಚರಿಸಲು ಸಜ್ಜಾಗಿದ್ದೇವೆ. ಈ ವರ್ಷದ ವಿಜಯದಶಮಿ ದೇಶಕ್ಕೆ ಅತ್ಯಂತ ವಿಶೇಷವಾಗಿದೆ ಎಂದು ಪ್ರಧಾನಿಯವರು ಹೇಳಿದಾಗ ಪ್ರೇಕ್ಷಕವರ್ಗದಿಂದ ಕಿವಿಗಡಚಿಕ್ಕುವ ಕರತಾಡನ ವ್ಯಕ್ತವಾಯಿತು.
ಕೆಡುಕಿನ ವಿರುದ್ಧ ಒಳಿತಿನ ವಿಜಯದ ಸಂದೇಶವನ್ನು ಸಾರುವ ವಿಜಯದಶಮಿಯು, ನಮ್ಮ ಸೇನಾಪಡೆ ಇತ್ತೀಚೆಗೆ ಎಲ್ಒಸಿಯಾಚೆ ನುಗ್ಗಿ ಲಷ್ಕರ್ ತೊಯ್ಬಾ ಸೇರಿದಂತೆ ವಿವಿಧ ಪಾಕ್ ಪ್ರೇರಿತ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿ 38ರಿಂದ 70ರಷ್ಟು ಉಗ್ರರನ್ನು ಸಂಹರಿಸಿದ ಹಿನ್ನೆಲೆಯಲ್ಲಿ ಮಹತ್ವ ಪಡೆದಿರುವುದಾಗಿ ಪ್ರಧಾನಿಯವರು ಪರೋಕ್ಷವಾಗಿ ಉಲ್ಲೇಖಿಸಿದರು.
ಈ ಸಂದರ್ಭ ಪ್ರಧಾನಿ ಮೋದಿಯವರು ಜನಸಂಘದ ಮಾಜಿ ಅಧ್ಯಕ್ಷ ದೀನದಯಾಳ್ ಉಪಾಧ್ಯಾಯ ಅವರ ಜೀವನ ಮತ್ತು ಸಂದೇಶಗಳಿಗೆ ಸಂಬಂಸಿ 15ಪುಸ್ತಕ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಈ ವರ್ಷ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಆಚರಣೆಯನ್ನು ಬಿಜೆಪಿಯು ಆಯೋಜಿಸಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಉಪಾಧ್ಯಾಯ ಅವರು ಏಕಾತ್ಮತಾ ಮಾನವತಾವಾದದ ಮೂಲಕ ಜನರನ್ನು ಜಾತಿ, ಮತ, ಪಂಥಗಳ ಹೆಸರಿನಲ್ಲಿ ಒಡೆಯುವ ಹುಸಿ ಸೆಕ್ಯುಲರ್ ರಾಜಕೀಯಕ್ಕಿಂತ ಭಿನ್ನವಾಗಿ ಎಲ್ಲರನ್ನು ಸಮಾನ ಗೌರವದಿಂದ ಕಾಣುವ ಸಂದೇಶವನ್ನು ನೀಡಿದ್ದಾರೆ.
ದೀನದಯಾಳ್ ಉಪಾಧ್ಯಾಯ ಅವರು ಕೆಲವೇ ವ್ಯಕ್ತಿಗಳ ಹಿಡಿತದಲ್ಲಿರುವ ರಾಜಕೀಯ ಪಕ್ಷದ ಬದಲಿಗೆ ಸಂಘಟನೆ ಆಧಾರಿತ ರಾಜಕೀಯ ಪಕ್ಷದ ಪರಿಕಲ್ಪನೆಯನ್ನು ದೇಶಕ್ಕೆ ನೀಡಿರುವುದು ಅತ್ಯಂತ ದೊಡ್ಡ ಕೊಡುಗೆ ಎಂದು ಮೋದಿ ಒತ್ತಿ ಹೇಳಿದರು.
ಇದೇ ರೀತಿ , ವಿಶೇಷವಾಗಿ ಬಲಿಷ್ಠ ಸೇನೆಯೊಂದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಿರುವ ಬಹುದೊಡ್ಡ ಅಗತ್ಯ. ಈಗಿನ ಪರಿಸ್ಥಿತಿಯಲ್ಲಂತೂ ಇದು ಅತ್ಯಂತ ಅಗತ್ಯ. ಈ ಹಿನ್ನೆಲೆಯಲ್ಲೇ , ದೇಶದ ಸಶಸ್ತ್ರಪಡೆಗಳು ಅತ್ಯಂತ ಸಮರ್ಥ ಮತ್ತು ಶಕ್ತಿಶಾಲಿಯಾಗಿರಬೇಕು. ಇದರಿಂದ ಮಾತ್ರವೇ ದೇಶವೊಂದು ಶಕ್ತಿಶಾಲಿಯಾಗಿ ಎದ್ದು ನಿಲ್ಲಲು ಸಾಧ್ಯ ಎಂದು ದೀನದಯಾಳ್ ರು ಹೇಳಿರುವುದು ಉಲ್ಲೇಖನೀಯ. ಇದು ಸ್ಪರ್ಧಾತ್ಮಕ ಯುಗ. ಈ ಹಿನ್ನೆಲೆಯಲ್ಲಿ ದೇಶ ಸಮರ್ಥ ಮತ್ತು ಬಲಿಷ್ಠವಾಗಿರಬೇಕು ಎಂದರು.
ಯಾರ ವಿರುದ್ಧವೂ ಅಲ್ಲ
ಬಲಿಷ್ಠ ಎಂದ ಮಾತ್ರಕ್ಕೆ ಇದು ಯಾರೊಬ್ಬರ ವಿರುದ್ಧವೆಂದರ್ಥವಲ್ಲ. ನಾವು ನಮ್ಮ ಬಲ ಹೆಚ್ಚಿಸಿಕೊಳ್ಳಲು ಯತ್ನಿಸಿದರೆ ನೆರೆಯವರು ಇದು ತಮ್ಮನ್ನು ಗುರಿಯಾಗಿರಿಸಿ ನಡೆಸಲಾಗುತ್ತಿದೆ ಎಂದು ಆತಂಕ ಪಡಬೇಕಾದ್ದೇನೂ ಇಲ್ಲ. ನಾನು ಬಲಿಷ್ಠನಾಗುವುದು ನನ್ನ ಬಲಕ್ಕಾಗಿ ಮತ್ತು ನನ್ನ ಆರೋಗ್ಯಕ್ಕಾಗಿ ಎಂದು ಮೋದಿ ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸಿಗೆ ಪರ್ಯಾಯವೊಂದನ್ನು ತರುವ ನಿಟ್ಟಿನಲ್ಲಿ ದೀನದಯಾಳ್ಜೀ ಅವರ ಪ್ರಯತ್ನದ ಬಗ್ಗೆ ರಾಮ್ ಮನೋಹರ ಲೋಹಿಯಾ ಅವರು 1967ರಲ್ಲಿ ಪ್ರಸ್ತಾವಿಸಿದ್ದನ್ನು ನೆನಪಿಸಿದರು. ದೀನದಯಾಳ್ಜೀ ಅವರು ಏಕಾತ್ಮತಾ ಮಾನವತಾವಾದವನ್ನು ಎತ್ತಿಹಿಡಿದವರು. ಅವರ ಆಶಯದಂತೆ , ತಮ್ಮ ಸರಕಾರ ಬಡವರಲ್ಲಿ ಬಡವರಿಗೆ ಮತ್ತು ಸಮಾಜದ ಕೊಟ್ಟಕೊನೆಯ ವ್ಯಕ್ತಿಗೆ ಅಭಿವೃದ್ಧಿಯ ಫಲ ತಲುಪುವಂತೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಮೋದಿ ಹೇಳಿದರು. ದೀನದಯಾಳ್ಜೀ ಅವರ ಸರಳತೆ , ಆದರ್ಶ ನೀತಿಯನ್ನು ಮೋದಿ ಸ್ಮರಿಸಿಕೊಂಡರು.
ಕಾರ್ಯಕರ್ತರ ನಿಮರ್ಾಣ ಆಧಾರಿತ ರಾಜಕೀಯ ಪಕ್ಷ ಕಟ್ಟುವ ಮತ್ತು ಪಕ್ಷ ಕೇಂದ್ರಿತ ನೀತಿ ಮತ್ತು ರಾಷ್ಟ್ರಹಿತ ಕೇಂದ್ರಿತ ಪಕ್ಷದ ನೀತಿಯಿಂದ ನಾವು ಬಿಜೆಪಿ ಕಾರ್ಯಕರ್ತರೆಲ್ಲ ಪ್ರೇರಣೆ ಪಡೆಯಬೇಕು ಎಂದರು .ರೈತರು, ದೀನದಲಿತರು, ದುರ್ಬಲವರ್ಗದ ಜನರ ಕಲ್ಯಾಣಕ್ಕೆ ದೀನದಯಾಳ್ಜೀ ಅವರ ಕಳಕಳಿಯನ್ನು ಬೊಟ್ಟು ಮಾಡಿದ ಮೋದಿ, ಇದಕ್ಕಾಗಿ ತಮ್ಮ ಸರಕಾರ `ಗರೀಬ್ ಕಲ್ಯಾಣ ವರ್ಷ’ಆಚರಣೆಗೆ ಮುಂದಾಗಿರುವುದಾಗಿ ಹೇಳಿದರು.
ಈ ಸಂದರ್ಭ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಆರ್ ಎಸ್ ಎಸ್ ಸರಕಾರ್ಯವಾಹ ಸುರೇಶ್ ಭಯ್ಯಾಜಿ ಜೋಶಿ ಮಾತನಾಡಿ ಭಾರತದ ಭದ್ರತೆಯನ್ನು ಬಲಪಡಿಸಬೇಕಾದ ಅಗತ್ಯವನ್ನು ಎತ್ತಿ ಹೇಳಿದರು. ಭಾರತದ ಕಾರ್ಯಾಚರಣೆಯು ಅನ್ಯರನ್ನು ಸೋಲಿಸುವುದಕ್ಕಿಂತ ಹೆಚ್ಚಾಗಿ ತನ್ನನ್ನು ರಕ್ಷಿಸಿಕೊಳ್ಳುವ ಅಗತ್ಯದಿಂದ ಪ್ರೇರಿತವಾಗಿದೆ ಎಂದು ಜೋಶಿ ನುಡಿದರು.
Discussion about this post