ನವದೆಹಲಿ, ಅ.30: ಬೆಳಕಿನ ಹಬ್ಬ ದೀಪಾವಳಿಯೆ ಹಿನ್ನೆಲೆಯಲ್ಲಿ ಮನ್ ಕಿ ಬಾತ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಬಾರಿಯ ದೀಪಾವಳಿಯನ್ನು ವರ್ಷ ಪೂರ್ತಿ ನಮ್ಮನ್ನು ಗಡಿಯಲ್ಲಿ ಕಾಯುವ ಯೋಧರಿಗೆ ಸಮರ್ಪಿಸೋಣ ಎಂದು ದೇಶದ ಜನತೆಗೆ ಕರೆ ನೀಡಿದ್ದಾರೆ.
ಮನ್ ಕಿ ಬಾತ್ ನ 25ನೆಯ ಸರಣಿಯಲ್ಲಿ ಮಾತನಾಡಿರುವ ಮೋದಿ, ನನ್ನ ದೇಶದ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಇದೇ ವೇಳೆ, ನಾವು ಸಂಭ್ರಮದಿಂದ ದೀಪಾವಳಿ ಆಚರಿಸುತ್ತಿರುವ ವೇಳೆಯೇ, ನಮ್ಮನ್ನು ಕಾಯುತ್ತಿರುವ ಯೋಧರ ತ್ಯಾಗವನ್ನು ಕೊಂಡಾಡಿದ್ದಾರೆ. ದೇಶದ ಯೋಧರು ಗಡಿಯಲ್ಲಿ ನಮ್ಮನ್ನು ಕಾಯುತ್ತಿದ್ದಾರೆ. ಇದರಿಂದಲೇ ನಾವು ಇಲ್ಲಿ ಸಂಭ್ರಮದಿಂದ ದೀಪಾವಳಿಯನ್ನು ಆಚರಿಸಲು ಸಾಧ್ಯವಾಗಿದೆ. ಹೀಗಾಗಿ, ಪ್ರತಿ ಭಾರತೀಯನೂ ಯೋಧರಿಗೆ ಧನ್ಯವಾದವನ್ನು ಹೇಳಬೇಕು ಎಂದಿದ್ದಾರೆ.
ಕತ್ತಲೆಯನ್ನು ಹೋಗಲಾಡಿಸಿ ಬೆಳಕು ಮೂಡಿಸುವ ಹಬ್ಬವೇ ದೀಪಾವಳಿ. ಈ ಹಬ್ಬ ಸ್ವಚ್ಛತೆಯನ್ನು ಕೂಡ ಸೂಚಿಸುತ್ತದೆ. ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಅದರ ಜೊತೆಗೆ ನಮ್ಮ ಸುತ್ತಮುತ್ತಲೂ ಕೂಡ ಶುಚಿಯಾಗಿಟ್ಟುಕೊಳ್ಳಬೇಕು ಎಂದಿರುವ ಮೋದಿ, ದೀಪಾವಳಿ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಆಚರಿಸುವುದು ವಿಶೇಷ. ಇದು ಜನರನ್ನು ಬೆಸೆಯುತ್ತದೆ ಎಂದರು.
ಭಾರತದ ಕಲೆ, ಸಂಸ್ಕೃತಿ, ಹಬ್ಬಗಳು ನಮ್ಮ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ ಭೂಮಿ, ಪಕ್ಷಿ, ಪ್ರಾಣಿ, ನದಿ, ಗುಡ್ಡ-ಬೆಟ್ಟಗಳ ಬಗ್ಗೆ ನಮ್ಮ ಜವಾಬ್ದಾರಿ ಬಗ್ಗೆ ತಿಳಿಸುತ್ತದೆ ಎಂದಿದ್ದಾರೆ.
ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಹೆಸರಿನಲ್ಲಿ ಹಣತೆ ಹಚ್ಚಿ ಎಂದಿರುವ ಅವರು, ನಮ್ಮನ್ನು ರಕ್ಷಿಸುತ್ತಿರುವ ಭದ್ರತಾ ಪಡೆಗಳು ಮತ್ತು ಜವಾನರಿಗೆ ಬೆಂಬಲ, ಪ್ರೀತಿ ತೋರಿಸುತ್ತಿರುವ ನಾಗರಿಕರಿಗೆ ನನ್ನ ಕೃತಜ್ಞತೆಗಳು. ಈ ವರ್ಷದ ದೀಪಾವಳಿ ಅವರಿಗೆ ಸಮರ್ಪಣೆ ಮಾಡೋಣ ಎಂದಿದ್ದಾರೆ.
ಸ್ವಚ್ಛ ಭಾರತ ಅಭಿಯಾನದ ಕುರಿತಾಗಿ ಮಾತನಾಡಿರುವ ಪ್ರಧಾನಿ ಮೋದಿ, ತಮ್ಮ ರಾಜ್ಯವನ್ನು ಬಯಲು ಶೌಚ ಮುಕ್ತಗೊಳಿಸಲು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಕೇರಳದ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಧನ್ಯವಾದಗಳು. ಬಯಲು ಶೌಚ ಮುಕ್ತ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಿರುವ ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ರಾಜ್ಯಗಳಿಗೆ ಅಭಿನಂದನೆಗಳು. ಕೇರಳ ರಾಜ್ಯ ಕೂಡ ಸದ್ಯದಲ್ಲಿಯೇ ಬಯಲು ಶೌಚ ಮುಕ್ತವಾಗುವ ಹಾದಿಯಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.















