ಬೆಂಗಳೂರು, ಸೆ.28: ಕಾವೇರಿ ವಿವಾದ ಕುರಿತಂತೆ ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಇಂದು ಸರ್ವಪಕ್ಷಗಳ ಸಭೆ ನಡೆಸಲಾಗಿದ್ದು, ನಾಳೆಯವರೆಗೂ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬೇಡಿ ಎಂದು ಎಲ್ಲ ಪಕ್ಷಗಳೂ ಒಕ್ಕೊರಲಿನಿಂದ ಸರ್ಕಾರವನ್ನು ಒತ್ತಾಯಿಸಿವೆ.
ಈ ಕುರಿತಂತೆ ಇಂದು ವಿಧಾನಸೌಧದಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ, ಜೆಡಿಎಸ್ ನಾಯಕರು ನಾಳೆಯವರೆಗೂ ನೀರು ಬಿಡದಂತೆ ಸಲಹೆ ನೀಡಿದ್ದಾರೆ. ನಾಳೆ ದೆಹಲಿಯ ಶ್ರಮಶಕ್ತಿ ಭವನದಲ್ಲಿ ಕೇಂದ್ರ ಸಚಿವೆ ಉಮಾ ಭಾರತಿ ನೇತೃತ್ವದಲ್ಲಿ ಕಾವೇರಿ ಸಂಧಾನ ಸಭೆ ನಡೆಯಲಿದ್ದು, ಅಲ್ಲಿಯವರೆಗೂ ಕಾದು ನೋಡಿ ಎಂದು ಸಭೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ತಮಿಳುನಾಡಿಗೆ ಮತ್ತೆ ಮೂರು ದಿನಗಳ 18 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂ ಕೋಟರ್ರ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯಲ್ಲಿ ವೇಳೆ ಸಭೆಯಲ್ಲಿ ಮಾತನಾಡಿದ ಅಟಾರ್ನಿ ಜನರಲ್ ಎಂ.ಆರ್. ನಾಯ್ಕ್, ವಿಧಾನಸಭೆ ನಿರ್ಣಯದ ಹೊರತಾಗಿಯೂ ಸುಪ್ರೀಂ ಕೋರ್ಟ್ ನೀರು ಬಿಡುವಂತೆ ಆದೇಶಿಸಿದೆ. ಈಗ ನ್ಯಾಯಾಲಯದ ಆದೇಶ ಪಾಲಿಸದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದರು. ಇದಕ್ಕೆ ಪ್ರತಿಪಕ್ಷ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಾಯ್ಕ್ ಅವರ ಸಲಹೆ ಪಾಲಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಲು ಸಾಧ್ಯವಿಲ್ಲ ಎಂದೇ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಹೀಗಿರುವಾಗ ಮತ್ತೆ ನೀರು ಬಿಡಲು ಹೇಗೆ ಸಾಧ್ಯ ಎಂದು ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಸಚಿವ ಕಾಗೋಡು ತಿಮ್ಮಪ್ಪ, ಎಚ್.ಕೆ. ಪಾಟೀಲ್, ಜಾರ್ಜ್, ಜಯಚಂದ್ರ, ಜಿ. ಪರಮೇಶ್ವರ್, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಅನಂತಕುಮಾರ್, ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಪಾಲ್ಗೊಂಡಿದ್ದರು.
Discussion about this post