ಆ ಮಹಾ ಪುರುಷ ಯುದ್ಧದೊಳಗೆ ಗೆಲುವಿನಿಂದ ಸಂತುಷ್ಟನಾಗಿದ್ದರೂ ದೈಹಿಕವಾಗಿ ಬಳಲಿದ್ದ. ಚಿಗುರು ಮೀಸೆಯ ಆ ತರುಣ ಧರ್ಮ ರಕ್ಷಕನಂತೆ ಆ ಮಹಾಕಾಯದ ದೈತ್ಯನ ವಧಿಸಿದ್ದು ಇಡೀ ದೇವಾದಿ ದೇವತೆಗಳ ಬಾಯಿಯಿಂದ ಜಯಘೋಷವನ್ನು ಕೇಳಿಸುವಂತೆ ಮಾಡಿತ್ತು.ಇಡೀ ದೇಶವೇ ಅವನ ಕಬಂಧ ಬಾಹುವಿನಿಂದ ಹಿಡಿಯಲ್ಪಟ್ಟಿತ್ತು. ತನಗೆ ಬೇಕಾದಂತೆ ಹೆಂಗಳೆಯರನ್ನು ಭೋಗಿಸಿ ನಂತರ ತನ್ನ ಬೆಂಬಲಿಗರಿಗೆ ಕೊಡುತ್ತಿದ್ದ.ಹೆಣ್ಣು ಹೊನ್ನು ಮಣ್ಣು ಸಿಕ್ಕರೆ, ಅಂತಹ ಕಬಂಧ ಭಾಹುವನ್ನು ಸೋಲಿಸುವುದು ಅಷ್ಟೇನೂ ಸುಲಭದ ಮಾತಲ್ಲ. ಹದಿನಾರು ಸಾವಿರ ಮುಗ್ಧ ಕನ್ನಿಕೆಯರು ಆತನ ಸೆರೆಮನೆಯಲ್ಲಿ ಈ ದೂರ್ತರ ಕಾಮ ಪಿಪಾಸೆಯ ವಸ್ತುವಾಗಿದ್ದರು. ಎಲ್ಲೆಲ್ಲಿ ಸುಂದರ ಯುವತಿಯರಿರುವರೋ ಅಲ್ಲಿಗೆ ಧಾಳಿನಡೆಸಿ ಅಪಹರಿಸಿ ತಂದಿರಿಸುವುದೇ ಈತನ ಸೈನಿಕರ, ಬಂಟರ ಕೆಲಸವಾಗಿತ್ತು. ಇದನ್ನು ತಡೆಯುವ ವೀರಾಧಿ ವೀರ ಪುರುಷರಿಗೆ ಮರಣವೇ ಆಗುತ್ತಿತ್ತು. ನಿತ್ಯವೂ ಈ ಅಸುರನ ರಾಜಧಾನಿಯಲ್ಲಿ ನರಬಲಿ ನಡೆಯುತ್ತಲೇ ಇತ್ತು. ಇನ್ನು ರಾಜ್ಯದಲ್ಲಿ ಋಷಿಗಳಿಗೆ,ಮುನಿಗಳಿಗೆ ರಕ್ಷಣೆ ಎಂಬುದೇ ಇರಲಿಲ್ಲ.ಪ್ರತಿ ದಿನ ಬೆಳಗಾದರೆ ‘ ಇಂದು ಈ ದೂರ್ತನ ಅಂತ್ಯವಾಗಬಹುದು, ನಾಳೆಯಾಗಬಹುದು ‘ ಎಂದು ಸಜ್ಜನರು ಯೋಚಿಸುತ್ತಿದ್ದರೆ, ಸೆರೆಮನೆಯ ಹೆಂಗಳೆಯರು, ಇಂದು ಯಾವ ದೂರ್ತನ ಕಾಮ ಪಿಪಾಸೆಗೆಗೆ ಬಲಿಯಾಗಬೇಕೋ ಎಂದು ಭಯದಿಂದ ದಿನ ಬೆಳಗಾಗುವುದನ್ನೇ ನೋಡುತ್ತಿದ್ದರು ಆ ಅಮಯಾಯಕ ಮುಗ್ದ ಸ್ತ್ರೀಯರು.
ಆ ದಿನ ಬಂದೇ ಬಂತು. ಆ ಅಸುರನ ಶಿರವು ಮಹಾಪುರುಷನ ಚಕ್ರದಲ್ಲಿ ಛೇಧನವಾಯಿತಂತೆ ಎಂಬ ಸುದ್ಧಿ ಕ್ಷಣದಲ್ಲಿ ರಾಜ್ಯವ್ಯಾಪಿಯಾಗಿ ಹರಡಿತು.
ಮಹಾಪುರುಷನಿಗೆ ರಾಜ್ಯದ ಸಜ್ಜನರೆಲ್ಲಾ ಹೂ ಮಾಲೆ ಹಾಕಿದರು. ಸ್ತ್ರೀಯರು ನರ್ತನ ಮಾಡುತ್ತಾ ಆರತಿ ಬೆಳಗಿದರು .ಈ ಮಹಾಪುರುಷನು ಇದನ್ನೆಲ್ಲಾ ಲೆಕ್ಕಿಸದೆ ನೇರವಾಗಿ ಸೆರೆಮನೆಯತ್ತ ನಡೆದ.ಬಂಧಿಸಿಟ್ಟ ಸ್ತ್ರೀಯರನ್ನು ಬಂಧಮುಕ್ತರನ್ನಾಗಿಸಿದ.
ಇಲ್ಲಿಗೇ ಮುಗಿಯಲಿಲ್ಲ ಕಥೆ. ಆ ಸ್ತ್ರೀಯರೆಲ್ಲಾ ಮಹಾ ಪುರುಷನಿಗೆ ಕೃತಜ್ಞತೆ ಸಲ್ಲಿಸಿ, ‘ ಹೇ ಅನಾತ ಬಂಧೂ, ನೀನೇನೋ ದುರುಳನ ವಧೆ ಮಾಡಿದೆ, ನಮ್ಮನ್ನು ಬಂಧ ಮುಕ್ತರನ್ನಾಗಿಸಿಯೂ ಬಿಟ್ಟೆ.ಆದರೆ ಮುಂದಿನ ನಮ್ಮ ದಾರಿಯು ಮಂಕಾಗಿದೆ.ನಮ್ಮ ಚರಿತ್ರೆ ತಿಳಿದ ದುಷ್ಟ ಯುವಕರು ಸುಮ್ಮನಿರುತ್ತಾರೆಯೇ? ಊರಿನ ಗೊಡ್ಡು ಸಂಪ್ರದಾಯದ ಜನರು ನಮ್ಮನ್ನು ಅವಮಾನಿಸಲಿಕ್ಕಿಲ್ಲವೇ? ದುಷ್ಟರು ಮೇಲ್ನೋಟಕ್ಕೆ ಬಹುಪಾಲು ನಾಶವಾದರೂ ಒಳಗೊಳಗೆ ಇದ್ದೇ ಇರುತ್ತಾರೆ.ನಮಗೆ ವೈಶ್ಯೆಯ ಪಟ್ಟವಂತೂ ಬಂದದ್ದು ಎಲ್ಲರ ಬಾಯಿಯಲ್ಲೂ ಇದೆ. ಒಂದು ವೇಳೆ ಗಂಡನೆಂಬ ಒಂದು ಪ್ರಾಣಿ ಇದ್ದಿದ್ದರೆ ಕೊನೆಗೆ ಅವರ ಪಾದದಡಿಯಲ್ಲಿ ಬಿದ್ದಾದರೂ ಸಾಯಬಹುದು. ನಮ್ಮ ದೌರ್ಭಾಗ್ಯದಲ್ಲಿ ಅದು ಇಲ್ಲ ಪರಮಾತ್ಮಾ.ನೀನು ನಮ್ಮನ್ನು ಒಂದು ಸೆರೆಮನೆಯಿಂದ ಬಿಡಿಸಿ ಇನ್ನೊಂದು ಸೆರೆಮನೆಗೆ ತಳ್ಳಿದಂತಾಯಿತು’ ಎಂದು ರೋಧಿಸುತ್ತಾರೆ.
ಆಗ ಆ ಮಹಾಪುರುಷನು ನಗುತ್ತಾ, ‘ ಹೇ ಮಾನಿನಿಯರೇ, ನೀವು ಗಂಡನೆಂಬವನೊಬ್ಬನಿದ್ದರೆ ನಿಶ್ಚಿಂತೆಯಲ್ಲಿ ಇರಬಹುದೆಂದು ಹೇಳಿದಿರಲ್ಲವೇ? ಇದನ್ನು ಆ ಅಸುರನ ವಧೆಗೆ ಮುಂಚೆಯೇ ನಾನು ತಿಳಿದಿದ್ದೆ.ನಿಮ್ಮ ಬಂಧ ಮುಕ್ತಿಗೊಳಿಸುವ ಮುಂಚೆಯೇ ಅರಿತಿದ್ದೆ.’ ಎಂದು ತನ್ನ ಆಪ್ತ ಸೇವಕರನ್ನು ಕರೆದು ಅವರೆಲ್ಲರಿಗೂ ಒಂದೊಂದು ಮಂಗಳ ಸೂತ್ರವನ್ನು ಕೊಡಿಸುತ್ತಾನೆ.ನಂತರ ‘ ಎಲೌ ಮಾನಿನಿಯರೇ , ನಿಮಗಿಷ್ಟವಾದಲ್ಲಿ, ಈಗಲೇ ಈ ಮಂಗಳ ಸೂತ್ರವನ್ನು ನಿಮ್ಮ ಗಂಡನ ಹೆಸರಿನಲ್ಲಿ ಕಟ್ಟಿಕೊಳ್ಳಿ..’ ಎಂದು ಹೇಳಿದ ಈ ಮಹಾಪುರುಷ.ಹೆಂಗಳೆಯರು ಮುಖ ಮುಖ ನೋಡುತ್ತಾ ‘ ಯಾರು ಗಂಡ?.’ ಎನ್ನುವ ರೀತಿಯಲ್ಲಿ ನೋಡುತ್ತಾರೆ.ಆಗ ಆ ಮಹಾಪುರುಷನು’ ನಾನೆಪ್ಪಾ ಅದು.ನನ್ನ ಸಹಸ್ರನಾಮೋಚ್ಚರಣೆಯಲ್ಲಿ ಸೂತ್ರವನ್ನು ಕಟ್ಟಿಕೊಳ್ಳಿ. ಕೃಷ್ಣ,ಗೋವಿಂದ,ಮಧುಸೂಧನ,ಅಧೋಕ್ಷಜ ಇತ್ಯಾದಿ ಸಾವಿರ ಸಾವಿರ ಹೆಸರಿನಲ್ಲಿ ಸಜ್ಜನರು, ಋಷಿಮುನಿಗಳು ನನ್ನನ್ನು ಕರೆದರು.ನಿಮಗಿಷ್ಟವಾದ ಹೆಸರಿನಲ್ಲಿ ಮಂಗಳ ದಾರವನ್ನು ಧರಿಸಿಕೊಳ್ಳಿ..ಎಂದಿನ ವರೆಗೆ ನಾನಿರುವೆನೋ ಅಂದಿನ ವರೆಗೆ ನಿಮ್ಮ ಪಾತಿವೃತ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನನ್ನ ಕೆಲಸ.ಆದರೆ ನೀವು ಅನನ್ಯ ಭಕ್ತಿಯಿಂದ ಫಲ ನಿರೀಕ್ಷಿಸದೆ ನಿಮ್ಮ ನಿಮ್ಮ ಕಾಯಕದೊಂದಿಗೆ ನನ್ನ ಸ್ಮರಣೆ ಮಾಡುತ್ತಿರಬೇಕು.ಫಲವನ್ನು ಕೊಡುವವನು ನಾನು. || ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನಾ|| ಎಂದು ಕೃಷ್ಣನ ವಾಕ್ಯಗಳು ಗಗನವ್ಯಾಪ್ತಿಯಾಗಿ ಕೇಳಿತು.ಅಸುರ ಭೌಮಾಸುರ ( ನರಕಾಸುರ) ವಧೆಯ ಸಂತಸದಲ್ಲಿ ತೈಲಾಭ್ಯಾಂಗ ಸ್ನಾನವನ್ನು ರಾಜ್ಯದಾಧ್ಯಂತ,ದೇಶದಾಧ್ಯಂತ ಹಬ್ಬವನ್ನಾಗಿ ಆಚರಿಸಲಾಯಿತು. ದೇವತೆಗಳು ಹೂಮಳೆಗೆರೆದರು.
Discussion about this post