ಉಡುಪಿ, ಸೆ.3: ಸ್ಯಾಂಡ್ ಹಾರ್ಟ್ ಕಲಾವಿದರು ಈ ಬಾರಿ ಗಣೇಶೋತ್ಸವದ ಪ್ರಯುಕ್ತ ಕೇವಲ ಡ್ರಾಯಿಂಗ್ ಶೀಟ್ ಗಳನ್ನು ಬಳಸಿ ಆಕರ್ಷಕ ಆಳೆತ್ತರದ ಗಣಪತಿಯನ್ನು ರಚಿಸಿ ಗಮನ ಸೆಳೆದಿದ್ದಾರೆ.
ಗಣಪತಿ ವಿಗ್ರಹಗಳ ರಚನೆಗೆ ಬಳಸುವ ಆವೆಮಣ್ಣು, ಪರಿಸರಕ್ಕೆ ಹಾನಿಕಾರಕವಾದ ಪ್ಲಾಸ್ಟರ್ ಆಫ್ ಪ್ಯಾರೀಸ್, ರಾಸಾಯನಿಕ ಬಣ್ಣಗಳು, ಕೃತಕ ಆಭರಣಗಳಿಂದ ಆಗುವ ಪರಿಹಾರ ಹಾನಿಯ ವಿರುದ್ಧ ಈ ಕಲಾವಿದರು ಮೌನವಾಗಿ ತಮ್ಮ ಪ್ರತಿರೋಧವನ್ನು ಈ ಪರಿಸರಸ್ನೇಹಿ ಗಣಪತಿಯ ಮೂಲಕ ವ್ಯಕ್ತಪಡಿಸಿದ್ದಾರೆ.
ಉಡುಪಿಯ ಕೋರ್ಟ್ ಹಿಂದುಗಡೆಯ ರಸ್ತೆಯಲ್ಲಿರುವ ಭವಾನಿ ಎಂಟರ್ ಪ್ರೈಸಸ್ ನಲ್ಲಿ ರಚಿಸಲಾಗಿರುವ ಈ ಗಣಪತಿ 10 ಅಡಿ ಎತ್ತರವಿದೆ. ಇದನ್ನು ಸುಮಾರು 4 ಕೆ.ಜಿ.ಗಳಷ್ಟು ಕೈಯಿಂದ ತಯಾರಿಸಿದ ಗ್ರಿಟೀಂಗ್ಸ್ ಕಾಗದ ಮತ್ತು ಚಿತ್ರ ಬರೆಯಲು ಬಳಸುವ ಕಾಗದಗಳನ್ನು ಅಂಟು ಬಳಸಿ ನಿರ್ಮಿಸಲಾಗಿದೆ.
ಸ್ಯಾಂಡ್ ಹಾರ್ಟ್ ಎಂಬ ಹೆಸರಿನಲ್ಲಿ ಮರಳು ಶಿಲ್ಪ ರಚನೆಯಲ್ಲಿ ಹೆಸರುವಾಸಿಯಾಗಿರುವ ಶ್ರೀನಾಥ್ ಮಣಿಪಾಲ್, ವೆಂಕಿ ಪಲಿಮಾರ್, ರವಿ ಹಿರೇಬೆಟ್ಟು ಅವರು ಈ ವೈಶಿಷ್ಟ್ಯಪೂರ್ಣ ಕಲಾಕೃತಿಯನ್ನು ರಚಿಸಿದ್ದಾರೆ. ಸಂಸ್ಥೆಯ ಮಾಲಕ ಪುರುಷೋತ್ತಮ ಪಟೇಲ್ ಅವರ ಆಸಕ್ತಿಯಿಂದ ಈ ಕಲಾಕೃತಿ ಮೂಡಿಬಂದಿದೆ. 12 ದಿನಗಳ ಕಾಲ ಸಂಸ್ಥೆಯಲ್ಲಿ ಇದು ಪ್ರದರ್ಶನಗೊಳ್ಳಲಿದೆ.
ಈ ಹಿಂದೆ ಇದೇ ಸ್ಯಾಂಡ್ ಹಾರ್ಟ್ ಕಲಾವಿದರು ಪೇಪರ್ ಕಪ್ ಗಳಿಂದ, ಗುಡಿ ಕೈಗಾರಿಕೆಯ ವಸ್ತುಗಳಿಂದ ಬೃಹತ್ ಗಣಪತಿಗಳನ್ನು, ಪರಿಸರ ಪ್ರೇಮವನ್ನು ಸಾರಿದ್ದರು.
Discussion about this post