Read - < 1 minute
ಜಮ್ಮು, ಸೆ.೧೫: ಉಗ್ರ ವಾನಿ ಹತ್ಯೆಯ ನಂತರ ಭುಗಿಲೆದಿದ್ದ ಹಿಂಸಾಚರ ನಿಯಂತ್ರಣಕ್ಕೆ ಬಂದಿತ್ತು. ಆದರೂ, ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿತ್ತು. ಈಗ ಮತ್ತೆ ಇಲ್ಲಿ ಹಿಂಸಾಚಾರ ಆರಂಭಗೊಂಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಹಿಂಸಾಚಾರ ಆರಂಭವಾಗಿದೆ. ನಿನ್ನೆ ರಾತ್ರಿ ನಡೆದ ಕಲ್ಲು ತೂರಾಟ ಹಿನ್ನೆಲೆಯಲ್ಲಿ ರಜೌರಿ ಟೌನ್‌ನಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ರಜೌರಿ ಕ್ಷೇತ್ರದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಆರಂಭವಾಗಿದೆ. ಹಿಂಸಾಚಾರ ಹತ್ತಿಕ್ಕುವ ಸಲುವಾಗಿ ಕಳೆದ ರಾತ್ರಿಯಿಂದಲೇ ಕರ್ಫ್ಯೂ ಜಾರಿ ಮಾಡಲಾಗಿದೆ. ಪ್ರಸ್ತುತ ಪರಿಸ್ಥಿತಿ ಉದ್ವಿಗ್ನಕಾರಿಯಾಗಿಯೇ ಇದ್ದು, ಸದ್ಯ ಮೇಲ್ನೋಟಕ್ಕೆ ಶಾಂತವಿದ್ದಂತೆ ಕಂಡುಬರುತ್ತಿದೆ. ಆದರೆ, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಉನ್ನತಾಧಿಕಾರಿ ತಿಳಿಸಿದ್ದಾರೆ.
ರಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರತಿಕ್ರಿಯೆ ನೀಡಿದ್ದು, ಕೆಲವು ಪ್ರಯಾಣಿಕರು ಒಂಟೆ ಮಾಂಸವನ್ನು ಹೊತ್ತೊಯ್ಯಿತ್ತಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ವಾಣಿಜ್ಯ ವಾಹನವೊಂದರಲ್ಲಿ ಕೆಲವು ಪ್ರಯಾಣಿಕರು ಸಾಗಿಸುತ್ತಿದ್ದ ಒಂಟೆ ಮಾಂಸವನ್ನು ಇದೀಗ ವಶಕ್ಕೆ ಪಡೆಯಲಾಗಿದೆ. ಆಸ್ತಿ ನಾಶ ಹಾಗೂ ಪ್ರಾಣಹಾನಿಗಳು ಸಂಭವಿಸದಂತೆ ಎಚ್ಚರಿಕೆ ವಹಿಸಿ ಕರ್ಫ್ಯೂ ಜಾರಿ ಮಾಡಲಾಗಿದೆ. ಪ್ರಕರಣದ ತನಿಖೆ ಈಗಾಗಲೇ ಆರಂಭಗೊಂಡಿದೆ ಎಂದಿದ್ದಾರೆ.
Discussion about this post