ವಿಶ್ವಸಂಸ್ಥೆ: ಸೆ: 22-ಕಾಶ್ಮೀರ ವಿಷಯವನ್ನು ಮತ್ತೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸಿ ಭಾರತದ ವಿರುದ್ಧ ತಿರುಗಿಸಲು ಪಾಕಿಸ್ತಾನ ನಡೆಸಿದ ಪ್ರಯತ್ನಕ್ಕೆ ಮತ್ತೆ ಹಿನ್ನಡೆಯಾಗಿದೆ.
ಕಾಶ್ಮೀರ ಸೇರಿದಂತೆ ಬಾಕಿ ಉಳಿದಿರುವ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ವಿಶ್ವಸಂಸ್ಥೆ ಮಹಾ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್ ಪಾಕಿಸ್ತಾನ ಮತ್ತು ಭಾರತಕ್ಕೆ ಸಲಹೆ ನೀಡಿದ್ದಾರೆ.
ಕಾಶ್ಮೀರ ವಿವಾದ ಇತ್ಯರ್ಥಗೊಳಿಸುವ ಸಂಬಂಧ ಪಾಕಿಸ್ತಾನದ ಪುನರಾವರ್ತಿತ ಮನವಿಗಳನ್ನು ತಳ್ಳಿ ಹಾಕಿದ ಅವರು, ಈ ಎರಡೂ ದೇಶಗಳು ಪರಸ್ಪರ ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಪಾಕ್ ಪ್ರಧಾನಿ ನವಾಜ್ ಷರೀಫ್ಗೆ ಸಲಹೆ ನೀಡಿದ್ದಾರೆ.
ಕಾಶ್ಮೀರ ಸೇರಿದಂತೆ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಪಾಕಿಸ್ತಾನ ಮತ್ತು ಭಾರತ ಹಾಗೂ ಏಷ್ಯಾ ಪ್ರಾಂತ್ಯದ ಹಿತಾಸಕ್ತಿ ದೃಷ್ಟಿಯಿಂದ ಉಭಯ ರಾಷ್ಟ್ರಗಳು ಚರ್ಚೆಗೆ ಮುಂದಾಗುವ ಅಗತ್ಯವನ್ನು ಮಹಾ ಪ್ರಧಾನ ಕಾರ್ಯದರ್ಶಿಯವರು ಪ್ರತಿಪಾದಿಸಿದ್ದಾರೆ ಎಂದು ಮೂನ್ ಅವರ ವಕ್ತಾರರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ನವಾಜ್ ಷರೀಫ್ ಆರೋಪಿಸಿದ ಬೆನ್ನಲ್ಲೇ ವಿಶ್ವಸಂಸ್ಥೆ ಮುಖ್ಯಸ್ಥರು ಈ ಹೇಳಿಕೆ ನೀಡಿದ್ದಾರೆ. ಈ ಮೂಲಕ ಕಾಶ್ಮೀರ ವಿವಾದವನ್ನು ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ ಅಂತರರಾಷ್ಟ್ರೀಯ ಸಮುದಾಯದ ಗಮನವನ್ನು ಸೆಳೆಯುವ ನವಾಜ್ ಷರೀಫ್ ಪ್ರಯತ್ನ ಫಲಪ್ರದವಾಗಿಲ್ಲ.
Discussion about this post