Read - < 1 minute
ಆರ್‌ಎಸ್ ಪುರ, ಅ.28: ಭಾರತ-ಪಾಕ್ ಗಡಿಯಲ್ಲಿ ಗುಂಡಿನ ಸದ್ದು ಮುಂದುವರೆದಿದ್ದು, ಪಾಕಿಸ್ಥಾನ ಪಡೆಗಳು ಆರ್‌ಎಸ್ ಪುರದ ಅಂತರ‌್ರಾಷ್ಟ್ರೀಯ ಗಡಿಯಲ್ಲಿ ನಡೆಸಿದ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಹುತಾತ್ಮನಾಗಿದ್ದಾನೆ.
ಜಮ್ಮು ಜಿಲ್ಲೆಯ ಆರ್‌ಎಸ್ ಪುರ ಹಾಗೂ ಅರ್ನಿಯಾ ವಲಯದ ಜನವಸತಿ ಪ್ರದೇಶಗಳ ಮೇಲೆ ಪಾಕ್ ಸೈನಿಕರು ಶೆಲ್ ದಾಳಿ, ಮಾರ್ಟರ್ ಬಾಂಬ್, ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಓರ್ವ ಬಿಎಸ್‌ಎಫ್ ಮುಖ್ಯ ಪೇದೆ ಹುತಾತ್ಮರಾಗಿದ್ದು, ಆರು ಮಂದಿ ನಾಗರಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಿಹಾರದ ಮೋತಿಹಾರಿ ಜಿಲ್ಲೆಯ ಬಿಎಸ್‌ಎಫ್ ಯೋಧ ಜೀತೇಂದ್ರ ಕುಮಾರ್ ವೀರಮರಣವನ್ನಪ್ಪಿದ್ದಾರೆ. ಪಾಕ್ ದಾಳಿಗೆ ಬಿಎಸ್‌ಎಫ್ ಪಡೆಗಳು ಪ್ರತ್ಯುತ್ತರ ನೀಡಿವೆ.
ಉಗ್ರರ ಒಳನುಸುಳುವಿಕೆ ತಡೆಯಲು ಯತ್ನಿಸಿದ ಸೇನಾ ಯೋಧ ಗಡಿ ನಿಯಂತ್ರಣ ರೇಖೆಯ ತಂಗ್‌ಧಾರ್‌ನಲ್ಲಿ ಬಲಿಯಾಗಿದ್ದಾನೆ. ಇದಕ್ಕೆ ಪ್ರತಿಯಾಗಿ ಆರ್‌ಎಸ್ ಪುರದಲ್ಲಿ ಬಿಎಸ್‌ಎಫ್ ಯೋಧರು ಪ್ರತಿದಾಳಿ ನಡೆಸಿದಾಗ ಓರ್ವ ಪಾಕ್ ಅರೆಸೇನಾ ಯೋಧ ಸತ್ತಿದ್ದಾನೆ.
ಇದೇ ವೇಳೆ ಕದನ ವಿರಾಮ ಉಲ್ಲಂಘನೆ ಕುರಿತಾಗಿ ಮಾತನಾಡಿರುವ ಪಾಕ್ ಪ್ರಧಾನಿ ನವಾಜ್ ಷರೀಫ್, ಭಾರತವೇ ಕದನ ವಿರಾಮ ಉಲ್ಲಂಘಿಸುತ್ತಿದೆ. ಇಂತಹ ಪ್ರವೃತ್ತಿಯನ್ನು ನಿಲ್ಲಿಸಿದೇ ಇದ್ದರೆ, ಪಾಕ್ ನೀಡುವ ಶಿಕ್ಷೆಯಿಂದ ಭಾರತ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಉದ್ಧಟತನದ ಮಾತನ್ನಾಡಿದ್ದಾರೆ.
Discussion about this post