ನವದೆಹಲಿ, ಅ.30: ಹಿಮಾಚಲ ಪ್ರದೇಶದ ವ್ಯೂಹಾತ್ಮಕ ಮತ್ತು ದುರ್ಗಮವಾದ ಭಾರತ-ಚೀನಾ ಗಡಿಗೆ ತೆರಳಿ ಅಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ ಯೋಧರಲ್ಲಿ ನೈತಿಕ ಸೂರ್ತಿ ತುಂಬಿದರು. ಈ ಪ್ರದೇಶವನ್ನು ಇಂಡೋ ಟಿಬೆಟಿಯನ್ ಗಡಿಭದ್ರತಾ ಪಡೆ ಯೋಧರು ಕಾಯುತ್ತಿದ್ದಾರೆ.
ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದ ಭಾರತ-ಚೀನಾಗಡಿಯಲ್ಲಿರುವ ಮಾಣಾ ಎಂಬ ಕುಗ್ರಾಮಕ್ಕೆ ಪ್ರಧಾನಿಯವರು ಭೇಟಿ ನೀಡಿದರು. ಈ ವೇಳೆ ಯೋಧರಿಗೆ ಸಿಹಿ ಹಂಚಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.ಈ ಸಂದರ್ಭ ಸುಮ್ಧೋದಡೋಗ್ರಾ ಸ್ಕೌಟ್ಸ್ ಮತ್ತು ಸೇನಾ ಯೋಧರ ಜೊತೆ ಸಂವಾದ ನಡೆಸಿದರು. ಇದು ಕಿನ್ನೌರ್ ಮತ್ತು ಲಾಹೌಲ್ ಸ್ಪಿಟಿ ಜಿಲ್ಲೆಗಳ ಗಡಿಯಲ್ಲಿದೆ. ಅಲ್ಲದೆ ಗಡಿ ರಸ್ತೆಗಳ ಸಂಘಟನೆ(ಬಿಆರ್ ಒ)ಯ ವಿಭಾಗವಾದ ಜನರಲ್ ಸರ್ವ್ ಇಂಜಿನಿಯರಿಂಗ್ ಫೋರ್ಸ್(ಜಿಆರ್ ಇಎಫ್)ನ ಸಿಬ್ಬಂದಿ ಜೊತೆಗೂ ಮೋದಿ ಮಾತುಕತೆ ನಡೆಸಿದರು. ಹಾಗೆಯೇ ಸ್ಥಳೀಯ ಛಾಂಗೋಕ್ರಾಮದ ಜನರನ್ನೂ ಮೋದಿ ಭೇಟಿ ಮಾಡಿ ತಾಯಂದಿರು, ಮಕ್ಕಳ ಜೊತೆ ಆ್ಯಪಲ್ ಸವಿದರು. ದೇಶದ ಪ್ರಧಾನಿಯವರು ತಮ್ಮ ಈ ಕುಗ್ರಾಮಕ್ಕೆ ಆಗಮಿಸಿದ್ದನ್ನು ಕಂಡು ಇಡಿ ಗ್ರಾಮಸ್ಥರು ಸಂಭ್ರಮಿಸಿದರು. ತೀವ್ರ ಚಳಿಯ ಈ ಪ್ರದೇಶದಲ್ಲಿ ಜನರು ಮೋದಿಗೆ ಬೆಚ್ಚನೆ ದಿರಿಸನ್ನು ನೀಡಿದರು.
ಪ್ರಧಾನಿ ಮೋದಿಯವರು ಅತ್ಯಂತ ಮುಕ್ತವಾಗಿ ನಮ್ಮ ಯೋಧರ ಜೊತೆ ಬೆರೆತರು. ಯೋಧನೊಬ್ಬ ಅವರಿಗೆ ಸಿಹಿಯನ್ನು ಕೊಡುಗೆಯಾಗಿತ್ತಾಗ ಅದನ್ನು ಖುಷಿಯಲ್ಲಿ ಪ್ರಧಾನಿ ಸ್ವೀಕರಿಸಿದಾಗ ಅಲ್ಲಿದ್ದ ಯೋಧರು ಮತ್ತು ಪ್ರಧಾನಿಯವರು ಜೊತೆಯಾಗಿ ಸಂಭ್ರಮಿಸಿದರು. ಮಕ್ಕಳು, ನಾಗರಿಕರ ಜೊತೆ ಫೊಟೋವನ್ನು ಕೂಡಾ ತೆಗೆಸಿಕೊಂಡಾಗ ಇಂತಹ ಸರಳ ಪ್ರಧಾನಿಯನ್ನು ಪಡೆದ ಭಾರತ ಮಾತೆ ಧನ್ಯ ಎಂದು ತಾಯಂದಿರು ಉದ್ಗರಿಸಿದರು.
ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ಬಾರಿಯ ದೀಪಾವಳಿಯನ್ನು ವಿಶ್ವದ ಅತಿಎತ್ತರದ ಯುದ್ಧಭೂಮಿಯಾಗಿರುವ ಸಿಯಾಚಿನ್ ನಲ್ಲಿ ಯೋಧರೊಂದಿಗೆ ಆಚರಿಸಿದ್ದರು. ಎರಡನೆಯ ಬಾರಿಯ ದೀಪಾವಳಿಯನ್ನು ಪಂಜಾಬ್ ನ ಪಾಕ್ ಗಡಿಯಲ್ಲಿ ಆಚರಿಸಿದ್ದರು.
ಇದೀಗ ಚೀನಾ ಗಡಿಗೆ ಹೊಂದಿಕೊಂಡಿರುವ ದೇಶದ ಕೊನೆಯ ಗ್ರಾಮ ಮಾಣಾ ಎಂಬ ಕುಗ್ರಾಮದಲ್ಲಿ ಆಚರಿಸಿದ್ದಾರೆ. ಪ್ರಧಾನಿಯವರ ಜೊತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಮತ್ತು ಸೇನಾ ಮುಖ್ಯಸ್ಥ ಜ.ದಲ್ಬೀರ್ ಸಿಂಗ್ ಸುಹಾಗ್ ಸಾಥ್ ನೀಡಿದ್ದರು.
ದೇಶದ ಹೆಮ್ಮೆಯ ಯೋಧರೊಂದಿಗೆ ಹಂಚಿಕೊಂಡ ಸಂತಸದ ಕ್ಷಣಗಳನ್ನು ಪ್ರಧಾನಿಯವರು ಟ್ವಿಟರ್ ನಲ್ಲಿ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ. ಧೈರ್ಯಶಾಲಿ ಐಟಿಬಿಪಿ ಅಕಾರಿಗಳು ಹಾಗೂ ಯೋಧರೊಂದಿಗೆ ಸಮಯವನ್ನು ಕಳೆದ ಮೋದಿಯವರು, ಜೈಜವಾನ್! ಜೈಕಿಸಾನ್! ಎಂದು ಹೇಳಿದ್ದಾರೆ.














