ಕುಪ್ವಾರ, ಅ.6: ಉರಿ ಸೆಕ್ಟರ್ ಮೇಲಿನ ದಾಳಿ ಹಿನ್ನೆಲೆಯಲ್ಲಿ ಎಲ್‌ಒಸಿ ಪ್ರದೇಶದಲ್ಲಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಬೆನ್ನಲ್ಲೇ, ಇಂದು ಮುಂಜಾನೆ ಪಾಕ್ ಪ್ರಾಯೋಜಿತ ಉಗ್ರರ ಮತ್ತೆ ದಾಳಿ ನಡೆಸಿದ್ದು, ಈ ವೇಳೆ ಇಬ್ಬರು ಉಗ್ರರನ್ನು ಹೊಡೆದುರುಳಿಸಲಾಗಿದೆ.
ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಉಗ್ರರು ಸೇನಾ ಕ್ಯಾಂಪನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದು, ಇಂದು ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ಘಟನೆ ನಡೆದಿದೆ.
ಈ ಕುರಿತಂತೆ ಪಿಟಿಐ ವರದಿ ಮಾಡಿದ್ದು, ಸೇನಾಧಿಕಾರಿಗಳ ಮಾಹಿತಿಯಂತೆ ಉಗ್ರರ ಅಡಗುದಾಣಗಳನ್ನು ಶೋಧಿಸುತ್ತಿದ್ದ ಸೇನಾಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಉಗ್ರರ ದಾಳಿಯನ್ನು ಸೇನಾಪಡೆ ಸಮರ್ಥವಾಗಿ ಎದುರಿಸಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ.
ಬೆಳಿಗ್ಗೆ 5 ಗಂಟೆ ವೇಳೆಯಲ್ಲಿ ಮೊದಲ ಬಾರಿ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರನ್ನು ಪತ್ತೆ ಮಾಡುವುದಕ್ಕಾಗಿ ಸೇನಾ ಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ 6:30 ಕ್ಕೆ ಮತ್ತೊಮ್ಮೆ ಉಗ್ರರು ದಾಳಿ ನಡೆಸಿದ್ದಾರೆ. ಸೇನಾ ಕ್ಯಾಂಪನ್ನು ಗುರಿಯಾಗಿರಿಸಿಕೊಂಡು ಉಗ್ರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳಿಸಲಾಗಿದೆ ಎಂದು ಸೇನಾ ಅಧಿಕಾರಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಇದೆ ವೇಳೆ ನೌಗಾಮ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಹಾಗು ರಾಮ್‌ಪುರ ಬಳಿ ಭಾರತದ ಗಡಿಯೊಳಗೆ ನುಸುಳುವ ಪಾಕ್ ಬೆಂಬಲಿತ ಮೂವರು ಭಯೋತ್ಪಾದಕರ ಯತ್ನವನ್ನು ಸೇನೆ ವಿಫಲಗೊಳಿಸಿದೆ. ಭಾರತದ ಗಡಿಯೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದವರಿಗೆ ಪಾಕಿಸ್ಥಾನದ ಬೆಂಬಲವಿತ್ತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತೀಯ ಯೋಧರು ಪಿಒಕೆಯಲ್ಲಿ ನುಗ್ಗಿ ಉಗ್ರರನ್ನು ಸದೆ ಬಡಿದ ನಂತರ ನಡೆದ ಮೂರನೆಯ ದಾಳಿ ಯತ್ನ ಇದಾಗಿದ್ದು, ಸೇನಾ ಪಡೆಗಳು ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿವೆ. ಮೂರೂ ದಿನಗಳ ಹಿಂದೆ ಉಗ್ರರು ಕಾಶ್ಮೀರದ ಬಾರಾಮುಲ್ಲಾದಲ್ಲಿ ಸೇನಾ ಕ್ಯಾಂಪನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಬಿಎಸ್‌ಎಫ್ ಯೋಧ ಹುತಾತ್ಮನಾಗಿದ್ದರು.
ಗಡಿ ಭಾಗದಲ್ಲಿ ತೀವ್ರಗೊಂಡ ಶೋಧ
ಗಡಿ ಭಾಗದಲ್ಲಿ ದಾಳಿ ಯತ್ನ ನಡೆದ ಬೆನ್ನಲ್ಲೇ ಪಾಕಿಸ್ಥಾನ ಹಾಗೂ ಚೀನಾ ಗಡಿಯಲ್ಲಿ ಹಲವು ಭಯೋತ್ಪಾದಕರು ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಯಲ್ಲಿ ಶೋಧ ಕಾರ್ಯ ತೀವ್ರಗೊಂಡಿದೆ.
ಪಾಕಿಸ್ಥಾನ ಹಾಗೂ ಚೀನಾ ಗಡಿಯಲ್ಲಿ ಭಾರತೀಯ ಸೇನೆ ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದು, ಇಡೀ ಪ್ರದೇಶದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ.
ಬಯಲಾದ ಪಾಕಿಸ್ಥಾನ ನಿಜಬಣ್ಣ
ಭಾರತೀಯ ಸೇನೆ ಪಿಒಕೆಯಲ್ಲಿ ನಡೆದ ದಾಳಿಯಿಂದ ಜಾಗತಿಕ ಮಟ್ಟದಲ್ಲಿ ಮಾನ ಕಳೆದುಕೊಂಡಿರುವ ಪಾಕಿಸ್ಥಾನದ ನಿಜಬಣ್ಣ ಈಗ ಮತ್ತೊಮ್ಮೆ ಬಯಲಾಗಿದೆ.
ಪಾಕಿಸ್ಥಾನ ಸೇನೆ ಉಗ್ರರಿಗೆ ಸಹಾಯ ಮಾಡುತ್ತಿರುವ ವಿಚಾರವನ್ನು ಈಗ ಬಹಿರಂಗವಾಗಿದ್ದು, ಪಾಕಿಸ್ಥಾನ ಸೇನೆ ಕೆಲವು ಭಯೋತ್ಪಾದಕರನ್ನು ಎಲ್‌ಒಸಿ ಬಳಿ ಕರೆತಂದು, ಗಡಿ ರೇಖೆ ದಾಟಲು ಅವರಿಗೆ ಸಹಾಯ ಮಾಡುತ್ತಾರೆಂದು ಮಾಧ್ಯಮವೊಂದು ವರದಿ ಮಾಡಿದೆ.
ಇದೇ ವೇಳೆ ಖಾಸಗಿ ಮಾಧ್ಯಮವೊಂದು ನಡೆಸಿರುವ ಸಂದರ್ಶನವೊಂದರಲ್ಲಿ ಪಾಕಿಸ್ಥಾನದ ಪೊಲೀಸ್ ಅಧಿಕಾರಿಯೊಬ್ಬರು ಭಾರತೀಯ ಸೇನೆ ಸೀಮಿತ ದಾಳಿ ನಡೆಸಿದ್ದು ಸತ್ಯ ಎಂದು ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. ಮಾತುಕತೆ ವೇಳೆ ಭಾರತೀಯ ಸೇನೆ ನಿರ್ದಿಷ್ಟ ದಾಳಿಯಲ್ಲಿ ೧೨ ಮಂದಿ ಸತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆಂದು ಉಲ್ಲೇಖಿಸಲಾಗಿದೆ. ದಾಳಿಯಲ್ಲಿ ಐವರು ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆಂದು ಅವರು ಹೇಳಿಕೊಂಡಿದ್ದಾರೆ. ಸೆ.೨೯ರ ರಾತ್ರಿ ಭಾರತೀಯ ಸೇನೆ ಭಿಂಬೇರ್‌ನಲ್ಲಿರುವ ಸಮಾನಾ, ನೀಲಂನಲ್ಲಿರುವ ಡುಧ್ನಿಯಾಲ್, ಪೂಂಚ್‌ನ ಹಜೀರಾ ಮತ್ತು ಹಥಿಯಾನ್ ಬಾಲಾದ ಕಯಾನಿ ಪ್ರದೇಶಗಳನ್ನು ನಾಶಪಡಿಸಿದ್ದಾರೆ. ದಾಳಿಯಲ್ಲಿ ಉಗ್ರರು ಹತ್ಯೆಯಾಗಿದ್ದಾರೆ ಎಂದವರು ತಿಳಿಸಿದ್ದಾರೆ.
Discussion about this post