Read - < 1 minute
ಮೈಸೂರು, ಅ.7: ದಸರಾ ನಂತರ ನಿಗಮ-ಮಂಡಳಿಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರನ್ನು ನೇಮಕ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ನಂತರ ದೆಹಲಿಗೆ ತೆರಳಿ ಹೈಕಮಾಂಡ್ ಅನುಮತಿ ಪಡೆದು ನಿಗಮ-ಮಂಡಳಿಗಳ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿಯನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನಿಗಮ-ಮಂಡಳಿಗಳಿಗೆ ನೇಮಕಾತಿ ಬಗ್ಗೆ ಈಗಾಗಲೇ ಎಲ್ಲರೊಂದಿಗೆ ಚರ್ಚೆ ನಡೆಸಿದ್ದು, ಹೈಕಮಾಂಡ್ ಅನುಮತಿ ನೀಡಬೇಕಾಗಿದೆ. ಹೈಕಮಾಂಡ್ ವರಿಷ್ಠರೊಂದಿಗೆ ಚರ್ಚಿಸಿ ನೇಮಕಾತಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಾವೇರಿ ವಸ್ತುಸ್ಥಿತಿ ಅಧ್ಯಯನ ನಡೆಸಲು ಇಂದು ಸುಪ್ರೀಂಕೋರ್ಟ್ ಸೂಚನೆಯಂತೆ ತಾಂತ್ರಿಕ ತಂಡ ಆಗಮಿಸಿದೆ. ಡ್ಯಾಮ್ನಲ್ಲಿರುವ ನೀರಿನ ಮಟ್ಟ, ಬೆಳೆ, ಜಲಾನಯನ ಮಟ್ಟವನ್ನು ಪರಿಶೀಲನೆ ನಡೆಸಲಿದೆ. ನಮ್ಮ ವತಿಯಿಂದ ಎಲ್ಲ ಮಾಹಿತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ನನ್ನ ಮಗ ಡಾ.ಯತೀಂದ್ರನನ್ನು ಬಲವಂತವಾಗಿ ರಾಜಕೀಯಕ್ಕೆ ಕರೆತರುವುದಿಲ್ಲ. ರಾಕೇಶ್ ನಿಧನದ ನಂತರ ವರುಣಾ ಕ್ಷೇತ್ರ ನೋಡಿಕೊಳ್ಳುತ್ತಿದ್ದಾನೆ. ಮುಖ್ಯಮಂತ್ರಿಯಾದ ಕಾರಣ ಕ್ಷೇತ್ರದ ಕಡೆ ಹೆಚ್ಚು ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ನನ್ನ ಬಹುತೇಕ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾನೆ. ಎಲ್ಲರೂ ಸಹಕರಿಸಿದರೆ ಅವನೂ ಒಪ್ಪಿದರೆ ರಾಜಕೀಯಕ್ಕೆ ಬರಬಹುದು ಎಂದು ಸಿಎಂ ಹೇಳಿದರು.
Discussion about this post