Read - < 1 minute
ಬೆಂಗಳೂರು, ಸೆ.1: ದೇಶದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಈಗಿರುವ ಉಪಗ್ರಹಗಳ ಸಂಖ್ಯೆ ಎರಡು ಪಟ್ಟು ಹೆಚ್ಚಾಗಬೇಕು ಎಂದು ಇಸ್ರೋ ಅಧ್ಯಕ್ಷ ಡಾ. ಎ.ಎಸ್. ಕಿರಣ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾದ ಬಾಹ್ಯಾಕಾಶ ವ್ಯವಹಾರ ಕುರಿತ 5 ನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇಸ್ರೋ ತನ್ನ ಕಾರ್ಯಕ್ಷೇತ್ರವನ್ನು ವಿಸ್ತಾರಗೊಳಿಸುತ್ತಿದೆ ಎಂದರು. ಕೇಂದ್ರ ಸರ್ಕಾರದ 20 ಇಲಾಖೆಗಳ ಜೊತೆ ಕೆಲಸ
ಮಾಡುತ್ತಿದ್ದ ಇಸ್ರೋ ಇದೀಗ ತನ್ನ ಕಾರ್ಯ ವ್ಯಾಪ್ತಿಯನ್ನು 60 ಇಲಾಖೆಗಳೊಂದಿಗೆ ವಿಸ್ತರಿಸಿಕೊಂಡಿದೆ ಭವಿಷ್ಯದಲ್ಲಿ ಗ್ರಹಗಳಲ್ಲಿರುವ ಖನಿಜ ನಿಕ್ಷೇಪ ಹಾಗೂ ಅಳ ಸಮುದ್ರದಲ್ಲಿರುವ ಅಮೂಲ ವಸ್ತುಗಳನ್ನು ಪತ್ತೆ ಹಚ್ಚುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಾಗತಿಕ ಬಾಹ್ಯಾಕಾಶ ವ್ಯಾಪಾರ ವ್ಯವಹಾರ ವಹಿವಾಟಿನಲ್ಲಿ ಇಸ್ರೋ ಮಹತ್ವದ ಸಾಧನೆ ಮಾಡುವ ನಿಟ್ಟಿನಲ್ಲಿ ಮಹತ್ವದ ದಾಪುಗಾಲು ಇರಿಸಿದೆ. ಮೀನುಗಾರಿಕೆಗೆ ಅನುಕೂಲವಾಗುವಂತಹ ಹಾಗೂ ಹವಾಮಾನ ಪರಿಸ್ಥಿತಿಗನುಗುಣವಾಗಿ ರೈತರು ಹೆಚ್ಚು ಬೆಳೆ ಬೆಳೆಯುವ ಕುರಿತು ಸಮರ್ಪಕ ಮಾಹಿತಿ ನೀಡಲಾಗುತ್ತಿದೆ ಎಂದರು. ಅಂಟ್ರಿಕ್ಸ್ ಕಾರ್ಪೊರೇಷನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಎಸ್. ರಾಕೇಶ್ ಮಾತನಾಡಿ, ಬಾಹ್ಯಾಕಾಶ ಕ್ಷೇತ್ರ ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಸ್ತಾರಗೊಳ್ಳುತ್ತಿದ್ದು, ವ್ಯಾಪಾರ, ವಹಿವಾಟಿಗೆ ವಿಪುಲ ಅವಕಾಶಗಳಿವೆ. ಇದನ್ನು ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ವಲಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮುಂದಿನ ಕೆಲ ದಿನಗಳಲ್ಲಿ 2500 ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಸಿಐಐ ಮುಖ್ಯಸ್ಥ
ರವಿ ರಾಘವನ್ ಮತ್ತಿತರರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
ಇದೇ 8 ರಂದು 3ಡಿ ಆರ್ ಉಪಗ್ರಹ ಉಡಾವಣೆ:
ಇಸ್ರೋ ನಿರ್ಮಿತ ಮಹತ್ವಕಾಂಕ್ಷೆಯ ಇನ್ಸಾಟ್ 3 ಡಿ ಆರ್ ಉಪಗ್ರಹ ಇದೇ 8 ರಂದು ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಡಾ. ಕಿರಣ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ಬಾಹ್ಯಾಕಾಶ ವ್ಯವಹಾರ ಕುರಿತ 5 ನೇ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಅಲ್ಜೀರಿಯಾದ ಉಪಗ್ರಹ, ಎರಡು ವಿಶ್ವವಿದ್ಯಾನಿಲಯಗಳ ಉಪಗ್ರಹಗಳೂ ಸೇರಿದಂತೆ ಇದೇ ತಿಂಗಳ 26 ರಂದು ಸ್ಕಾನ್ಸ್ಯಾಟ್ ಉಪಗ್ರಹವನ್ನು ಉಡಾವಣೆ ಮಾಡಲಾಗುವುದು ಎಂದು ಹೇಳಿದರು.
Discussion about this post