ನವದೆಹಲಿ, ಸೆ.1: ಸ್ವತಂತ್ರ್ಯ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಕುರಿತಾಗಿ ಕೊಟ್ಯಂತರ ಭಾರತೀಯರಲ್ಲಿ ಸಂಶಯ ಹಾಗೂ ಅನುಮಾನಗಳು ಉಳಿದಿರುವಂತೆಯೇ, ನೇತಾಜಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಜಪಾನ್ ಸರ್ಕಾರದ ತನಿಖಾ ವರದಿ ಹೇಳಿದೆ.
ಈ ಕುರಿತಂತೆ ವರದಿ ಸಿದ್ಧವಾಗಿದ್ದು, ಇದರ ಮಾಹಿತಿಗಳು ಬಹಿರಂಗಗೊಂಡಿವೆ. ಈ ವರದಿಯಂತೆ ನೇತಾಜಿ 1945ರ ಆಗಸ್ಟ್ 18ರಂದು ತಪೈನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ನೇತಾಜಿ ಸಾವಿನ ಕುರಿತ ಜಪಾನ್ ಸರ್ಕಾರ ತನಿಖೆ ನಡೆಸಿದ್ದು, ಈ ತಿಂಗಳಾಂತ್ಯಕ್ಕೆ ವರದಿಯನ್ನು ಬಹಿರಂಗಪಡಿಸುವ ಸಾಧ್ಯತೆಯಿದೆ. ಆದರೆ, ಈ ವರದಿಯ ಅಂಶಗಳು ಸೋರಿಕೆಯಾಗಿದ್ದು, ಈ ಅಂಶಗಳನ್ನು ಅಂತರ‌್ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
ಈ ಹಿನ್ನೆಲೆಯಲ್ಲಿ ಜರ್ಮನಿಯಲ್ಲಿ ನೆಲೆಸಿರುವ ನೇತಾಜಿ ಅವರ ಪುತ್ರಿ ಅನಿತಾ ಅವರು, ನೇತಾಜಿ ಅವರದ್ದು ಎಂದು ಹೇಳಲಾಗಿರುವ ಚಿತಾಭಸ್ಮವನ್ನು ಭಾರತಕೆಕ ತರಲು ಬಯಸಿದ್ದಾರೆ ಎಂದು ವರದಿಯಾಗಿದೆ.
ನೇತಾಜಿ ಸಾವಿನ ಕುರಿತು ದಿವಂಗತ ಸುಭಾಷ್‌ಚಂದ್ರ ಬೋಸ್ ಸಾವಿನ ಕಾರಣ ಹಾಗೂ ಸಂಬಂಧಿತ ವಿಚಾರಗಳ ತನಿಖೆ ಎಂಬ ಹೆಸರಿನಲ್ಲಿ ತನಿಖೆ ನಡೆಸಲಾಗಿದ್ದು, 7 ಪುಟಗಳ ವರದಿ ಜಪಾನಿ ಭಾಷೆಯಲ್ಲಿದ್ದು, 10 ಪುಟಗಳ ವರದಿ ಇಂಗ್ಲೀಷ್ ಭಾಷೆಯಲ್ಲಿದೆ.
ಈ ವರದಿಯಂತೆ 1945ರ ಆಗಸ್ಟ್ 18ರಂದು ತಪೈನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ನೇತಾಜಿ ತೀವ್ರವಾಗಿ ಗಾಯಗೊಂಡು, ಅಂದು ಸಂಜೆಯೇ ಅಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನರಾದರು ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ.
Discussion about this post