Read - 3 minutes
ಭಾರತ ಹಾಗೂ ಪಾಕಿಸ್ಥಾನ ನಡುವಿನ ಗುದ್ದಾಟ ಈಗ ತಾರಕಕ್ಕೆ ಏರಿದ್ದು, ಎರಡೂ ರಾಷ್ಟ್ರಗಳ ನಡುವೆ ಯುದ್ಧ ನಡೆಯಬಹುದೇ ಎಂಬ ಚರ್ಚೆ ಎಲ್ಲೆಡೆ ಆರಂಭವಾಗಿದೆ. ಎಂದಿಗೂ ಮೋಸದಿಂದಲೇ ಹೋರಾಡುವ ಪಾಪಿ ಪಾಕಿಸ್ಥಾನ ನೇರವಾಗಿ ಯುದ್ಧ ಮಾಡಿ ಗೆಲ್ಲುವ ಸಾಮರ್ಥ್ಯವನ್ನು ಹೊಂದದೇ, ವಾಮಮಾರ್ಗಗಳ ಮೂಲಕವೇ ಆಕ್ರಮಣ ಮಾಡುತ್ತದೆ. ಈಗ ಈ ವಿಚಾರ ತೀವ್ರತೆಯನ್ನು ಪಡೆದುಕೊಂಡಿದ್ದು, ಭಾರತದ ಸಾಂಪ್ರದಾಯಿಕ ಶತ್ರು ರಾಷ್ಟ್ರ ಪಾಕಿಸ್ಥಾನದ ಹೆಡೆಮುರಿ ಕಟ್ಟಲು ಭಾರತದ ಸರ್ಕಾರಕ್ಕೆ ಸಲಹೆ ಎನ್ನಬಹುದಾದ ಸಪ್ತ ಸೂತ್ರಗಳ ಲೇಖನವನ್ನು ಓದುಗರ ಆವಗಾಹನೆಗಾಗಿ ಪ್ರಕಟಿಸುತ್ತಿದ್ದೇವೆ.
ಭಾರತದ ಮೇಲೆ ಪಾಕಿಸ್ಥಾನದ ಕುತಂತ್ರ ಇಂದು ನಿನ್ನೆಯದಲ್ಲ. ಸ್ವಾತಂತ್ರ ಸಿಕ್ಕ ದಿನದಿಂದ ಇದು ಆರಂಭಿವಾಗಿದ್ದು ಇಂದಿನ ವರೆಗೂ ಮುಂದುವರಿದಿದೆ. ಕೇವಲ ಯುದ್ಧ ಇದಕ್ಕೆ ಉತ್ತರ ನೀಡಲಾರದು. ಭಾರತ ಇಂದು ಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲೊಂದು. ಇದನ್ನು ಸರಿಯಾಗಿ ಅರಿತು ಸದುಪಯೋಗಪಡಿಸಿಕೊಳ್ಳಬೇಕು. ಸ್ವತಾಸಕ್ತಿಗಿಂತ ದೇಶ ಕೇವಲ ಮಾತಿನಲ್ಲಲ್ಲದೇ ಕೃತಿಯಲ್ಲೂ ಇದಾಗಬೇಕು. ಈ ಕೆಳಗಿನ ಕೆಲವು ತಂತ್ರಗಳು ಈ ಸಮಸ್ಯೆಯನ್ನು ಶಾಶ್ವತವಗಿ ಪರಿಹರಿಸುವುದರಲ್ಲಿ ಸಹಾಯ ಮಾಡಬಲ್ಲವು.
1. ಒಣಪ್ರತಿಷ್ಠೆಯ ಆಡಂಬರದ ದೇಶಭಕ್ತಿಯನ್ನು ಬಿಡಬೇಕು:
ಗೂಢ ಕಾರ್ಯಾಚರಣೆಗಳು ಕ್ರಿಕೆಟ್ ಮ್ಯಾಚ್‌ಗಳಂತೆ, ಟಿವಿ ಕಾರ್ಯಕ್ರಮಗಳಂತೆ ಮೊದಲೇ ಘೋಷಣೆಯಾಗುವುದಿಲ್ಲ, ಆದ್ದರಿಂದ ಪ್ರತಿ ಚಾನೆಲ್‌ಗಳೂ ಇಂತಹ ಗೂಢಾಕ್ರಮಣಗಳನ್ನು ಮೊದಲು ಬಹಿರಂಗಪಡಿಸಲು ಇಚ್ಛಿಸುವುದರಲ್ಲಿ ಯಾವುದೇ ಅನುಮಾನಲ್ಲ. ಇಂತಹ ಕಾರ್ಯಕ್ರಮಗಳು ಕೇವಲ ಸ್ವಪ್ರತಿಷ್ಥೆಗಾಗಿ, ಟಿಆರ್‌ಪಿಗಾಗಿ, ಚಾನೆಲ್‌ನ ರೇಟಿಂಗ್‌ಗಾಗಿ ಪ್ರಸಾರವಾಗುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನಲ್ಲ. ಇನ್ನು ಕೆಲವು ನಿರೂಪಕರು, ರಾಜಕಾರಣಿಗಳು, ಬುದ್ಧಿಜೀಗಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಾವೇ ರಕ್ತಹರಿಸುತ್ತಿರುವ ಮಟ್ಟಿಗೆ ಚರ್ಚಾಕಾರ್ಯಕ್ರಮಗಳಲ್ಲಿ ಕಿತ್ತಾಡುತ್ತಾರೆ. ಆದರೆ ಇವು ಸಾಂಖ್ಯಿಕವಾಗಿಯಾಗಲೀ, ತಾಂತ್ರಿಕವಾಗಿಯಾಗಲೀ ಯಾವುದೇ ರೀತಿಯಲ್ಲೂ ಸಹಾಯಕವಲ್ಲ.
ಶತ್ರುವನ್ನು ಅಡಗತ್ತರಿಯ ನಡುವೆ ಸಿಲುಕಿಸುವುದು (ವರದಿಗಳ ಮೂಲಕ ಒತ್ತಡವನ್ನು ತರುವುದು) ಈ ತರಹದ ಕೆಲವು ಜಟಾಪಟಿಗಳನ್ನು ನಡೆಸುವುದಕ್ಕಿಂತ ಎಷ್ಟೋ ಒಳ್ಳೆಯದು. ಇದು ಪಾಕಿಸ್ಥಾನಿ ಸೈನ್ಯ ಯಾವಾಗಲೂ ಜಾಗ್ರತೆಯಾಗಿರುವಂತೆ ಒತ್ತಡಕ್ಕೆ ದೂಡುತ್ತದೆ ಮತ್ತು ಹೆಚ್ಚಿನ ಹಣದ ಅಪವ್ಯಯಕ್ಕೆ ದಾರಿಯಾಗುತ್ತದೆ. ಭಾರತೀಯ ಗಡಿಯಲ್ಲಿ ಸೈನ್ಯದ ಬಲ ಹೆಚ್ಚಳ ಅಫ್ಘಾನಿಸ್ತಾನದ ಗಡಿಭಾಗದಲ್ಲಿ ಪಾಕಿಸ್ಥಾನಿ ಸೈನ್ಯದ ಶಕ್ತಿಗುಂದಿಸುತ್ತದೆ ಹಾಗೂ ಅಫ್ಘಾನಿಸಾನದಲ್ಲಿ ಭಾರತದ ಕುರಿತಾಗಿ ಬೆಳೆಯುತ್ತಿರುವ ಸ್ವಪಕ್ಷೀಯ ಭಾವನೆ ಭಾರತ ತನ್ನ ಶಕ್ತಿಯನ್ನು ಗಳಿಸುವ ವೇಗವನ್ನು ಹೆಚ್ಚಿಸಲು ಸಹಕಾರಿ.
2. ಪಾಕಿಸ್ಥಾನದಲ್ಲಿನ ಮೂರು ಒಡಕುಗಳನ್ನು ಅರಿತು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು :
(1.ಪಾಕಿಸ್ಥಾನಿ ಸೈನ್ಯ 2.ಪಾಕಿಸ್ಥಾನಿ ರಾಜಕಾರಣ 3.ಪಾಕಿಸ್ಥಾನಿ ಜನತೆ).
ಈಗಾಗಲೇ ಈ ಮೂರು ಪಂಗಡಗಳ ನಡುವೆ ಇರುವ ಒಡಕನ್ನು ಸರಿಯಾಗಿ ಬಳಸಿಕೊಳ್ಳಬೇಕು. ಪಾಕಿಸ್ಥಾನಿ ಸೈನ್ಯಾಧಿಕಾರಿಗಳು ದೀರ್ಘಕಾಲ ತಮ್ಮ ಸರ್ವಾಧಿಕಾರತ್ವವನ್ನು ಎಲ್ಲೆಡೆ ಹೇರುವ ಇಚ್ಛೆ ಹೊಂದಿದ್ದಾರೆ. ಮೊಹಮ್ಮದ್ ಅಲಿ ಜಿನ್ನಾ ೧೯೪೮ರಲ್ಲಿ ಮರಣ ಹೊಂದಿದ ನಂತರ ತೆರವಾದ ಸ್ಥಾನದಲ್ಲಿ ದೀರ್ಘಕಾಲದ ಮಿಲಿಟರಿ ಆಡಳಿತವನ್ನು ಹೇರುವುದು ಸಾಧ್ಯವಾಗದಿದ್ದರೂ, ಸೈನ್ಯವು ಸ್ವಾರ್ಥಕ್ಕಾಗಿ ದೇಶವನ್ನು ಬಳಸಿಕೊಳ್ಳುತ್ತಿರುವ ಸ್ಥಿತಿ ಇಂದಿಗೂ ಮುಂದುವರಿದಿದೆ. ಪಾಕಿಸ್ಥಾದ ಪ್ರಧಾನಿ ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಸೈನ್ಯದ ಉನ್ನತಾಧಿಕಾರಿಯನ್ನು ತೆಗೆದು ಹಾಕಿದ್ದನ್ನೂ ಗಣನೆಗೆ ತೆಗೆದುಕೊಳ್ಳಬಹುದು.
ಮುಷ್ರಫ್ ವಿಮಾನ ಬಂದಿಳಿಯುವ ಮೊದಲೇ ನವಾಜ್ ಷರೀಫ್ ಅಧಿಕಾರ ಕಳೆದುಕೊಂಡರು ಹಾಗೂ ಮುಷ್ರಫ್ ರಾಷ್ಟ್ರಾಧ್ಯಕ್ಷರಾದರು. ಈ ಉಚ್ಛಾಟನೆಯ ಒಳಸಂಚು ಪ್ರಪಂಚದಾದ್ಯಂತ ತಿರಸ್ಕಾರಕ್ಕೆ ಕಾರಣವಾಯಿತು. ಮುಷ್ರಫ್ ಎಲ್ಲರ ಕಣ್ಣಿಗೆ ಮಣ್ಣೆರಚಲು ಕಾಶ್ಮೀರಕ್ಕೆ ಸಹ ಭೇಟಿ ನೀಡಿದರು. ಪಾಕಿಸ್ಥಾನದಲ್ಲಿನ ಅಧಿಕಾರದಾಹವನ್ನರಿಯಲು ಇದಕ್ಕಿಂತ ಹೆಚ್ಚಿನ ಉದಾಹರಣೆಯ ಅವಶ್ಯಕತೆಯಿಲ್ಲ ಎಂದೆನಿಸುತ್ತದೆ.
3. ಪಾಕಿಸ್ಥಾನದಲ್ಲಿ ರಾಜಕಾರಣಿಗಳು ಕೇವಲ ತೋರಿಕೆಗೆ ಮಾತ್ರ, ನಿಜವಾಗಿ ಆಡಳಿತ ನಡೆಸುತ್ತಿರುವುದು ಸೈನ್ಯದ ಜನರಲ್‌ಗಳು ಎಂಬುದನ್ನು ಮೊದಲು ಅರಿತು ಅವರಿಗೆ ನೈತಿಕ ಹೊಡೆತ ನೀಡಬೇಕು:
ಮೊದಲಿಂದಲೂ ನಡೆದು ಬರುತ್ತಿರುವಂತೆ ಈಗಲೂ ಸೈನ್ಯಾಧಿಕಾರಿ ರಹೀಲ್ ನಿಯಂತ್ರಣದಲ್ಲಿ ಪ್ರಧಾನಿ ನವಾಜ್ ಇದ್ದಾರೆ. ಪಾಕಿಸ್ಥಾನಿ ಸೈನಿಕರು ತಾತ್ಕಾಲಿಕ ಸೈನಿಕರು ಹಾಗೂ ಒಂದು ರೀತಿಯಲ್ಲಿ ಸಂಪೂರ್ಣವಾಗಿ ವ್ಯವಹಾರಸ್ಥರು. ಅವರ ವ್ಯವಹಾರಗಳ ಆಸಕ್ತಿ ಮತ್ತು ಪಾಕಿಸ್ಥಾನದ ರಫ್ತಿನ ಮಾರುಕಟ್ಟೆಗಳನ್ನು ಅರಿತು ಅಲ್ಲಿ ಭಾರತೀಯ ವಸ್ತುಗಳಿಗೆ ಮಾರುಕಟ್ಟೆಯ ಸೃಷ್ಟಿಯಿಂದ ಪಾಕಿಗೆ ಬಹುದೊಡ್ಡ ಹೊಡೆತ ನೀಡಬಹುದು. ಇದರಿಂದ ಅಲ್ಲಿನ ಸ್ಥಳೀಯ ಉತ್ಪಾದಕತೆ ಕುಂಠಿತವಾಗುತ್ತದೆ, ಹಾಗೂ ಇದರ ಸಹಾಯದಿಂದ ಕೆಲವು ಯುದ್ಧಮಾನಗಳನ್ನು ಕೊಳ್ಳುವ ಮೌಲ್ಯದಲ್ಲಿ ಪಾಕಿಸ್ಥಾನದ ರಫ್ತಿನ ಮೇಲೆ ಆಧರಿತ ಆರ್ಥಿಕತೆಯ ಬಹುಪಾಲು ಭಾಗವನ್ನು ಹಾಳುಗೆಡವಬಹುದು.
ಭಾರತದ ಕೊಳ್ಳುವ ಶಕ್ತಿಯನ್ನು ಹೆಚ್ಚಾಗಿಸಿಕೊಂಡು ಭಾರತ ಮತ್ತು ಪಾಕ್‌ಗಳೆರಡರಿಂದಲೂ ವಸ್ತುಗಳನ್ನು ಕೊಳ್ಳಬಾರದು, ಎರಡರಲ್ಲಿ ಒಂದನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕೆಂದು ಭಾರತ ನಂತರ ಕೊಳ್ಳುಗ ರಾಷ್ಟ್ರಗಳ ಮೇಲೆ ಒತ್ತಡ ಹೇರಬಹುದು. ಭಾರತದಲ್ಲಿ ಕಾರ್ಯನಿರ್ವಸುತ್ತಿರುವ ಪ್ರತಿಯೊಂದು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ವಿದೇಶೀ ಬಂಡವಾಳ ಹೂಡಿಕಾದರರ ಮೇಲೂ ಇದೇ ತಂತ್ರವನ್ನು ಬಳಸಬಹುದು. ಆದರೆ ಇದು ಅಂತರ‌್ರಾಷ್ಟ್ರೀಯ ವ್ಯಾಪಾರ ಸಂಘದ ಮುಕ್ತ ವ್ಯಾಪಾರ ನೀತಿಗೆ ವಿರೋಧವಾಗಿರುವುದರಿಂದ ಇದನ್ನು ಜಾರಿಗೊಳಿಸುವಲ್ಲಿ ಭಾರತದ ಹಾದಿ ಸುಲಭವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ತೋರಿಕೆಯ ದೇಶಭಕ್ತಿಯ ಬದಲು ಜನತೆ ಒಣಪ್ರತಿಷ್ಠೆಯನ್ನು ಬಿಟ್ಟು ವಿದೇಶಿ ವಸ್ತುಗಳನ್ನು ತ್ಯಜಿಸಿದರೆ ಮಾತ್ರ ಈ ತಂತ್ರಗಾರಿಕೆ ಸಫಲವಾಗಲು ಸಾಧ್ಯ.
4. ಕೇವಲ ಅಸ್ತ್ರಗಳನ್ನು ಕೊಂಡು ವ್ಯರ್ಥಮಾಡುವುದನ್ನು ಬಿಡಬೇಕು:
ಪ್ರಪಂಚದ ೨೦೦ ರಾಷ್ಟ್ರಗಳಲ್ಲಿ ಭಾರತದಷ್ಟು ಇನ್ನಾವ ದೇಶವೂ ಶಸ್ತ್ರಾಸ್ತ್ರಗಳನ್ನು ಕೊಂಡುಕೊಳ್ಳುತ್ತಿಲ್ಲ. ಇದು ನಮ್ಮನ್ನು ಬಲಗೊಳಿಸಿಕೊಳ್ಳುವುದಕ್ಕಿಂತ ಅಧಿಕವಾಗಿ ಅವಧಿ ಮುಗಿದ ಶಸ್ತ್ರಾಸ್ತ್ರಗಳ ಬದಲಾವಣೆಗೆ ಮಾಡುತ್ತಿರುವ ವ್ಯಯ. ಭಾರತ ಅವುಗಳ ಕೊಳುವ್ಳಿಕೆಯನ್ನು ನಿಲ್ಲಿಸಿದರೆ ಬಹುತೇಕ ಉತ್ಪಾದಕ ಕಂಪನಿಗಳು ಮುಚ್ಚಲ್ಪಡುತ್ತವೆ. ಈ ಶಸ್ತ್ರಾಸ್ತ್ರ ಪೂರೈಕೆಯಲ್ಲಿರುವ ಕೆಲಸಗಾರರು ನಿರ್ಗತಿಕರಾಗುತ್ತಾರೆ. ಆ ದೇಶಗಳ ಬಿಲಿಯನ್‌ಗಟ್ಟಲೆ ಆದಾಯ ಹಾಗೂ ಆ ಲಕ್ಷಾಂತರ ಜನರ ಮತಗಳು ಭಾರತದ ಬೇಡಿಕೆಯ ಮೇಲೆ ನಿಂತಿವೆ.
ಪಾಕಿಸ್ಥಾನಕ್ಕೆ ಸಹಾಯ ಮಾಡುತ್ತಿರುವ ಎಲ್ಲಾ ದೇಶಗಳೊಂದಿಗೆ ವ್ಯವಹಾರವನ್ನು ತ್ಯಜಿಸಬೇಕು. ಉದಾಹರಣೆಗೆ ಚೈನಾದ ಎಲೆಕ್ಟ್ರಾನಿಕ್ ಉಪಕರಣಗಳು, ಅಮೆರಿಕಾದ ಯುದ್ಧೋಪಕರಣಗಳು ಮುಂತಾದವು.
5. ಪಾಕಿಸ್ಥಾನದ ಸಾಮಾನ್ಯ ಜನರನ್ನು ತಲುಪಬೇಕು:
ಪಾಕಿಸ್ಥಾನ ಜನರಲ್ಲಿ ಬೆಳೆಸುತ್ತಿರುವ ಒಣ ಆಡಂಬರದ ದೇಶಭಕ್ತಿಯನ್ನು, ಸೈನ್ಯದ ವ್ಯಯಗಳು ಕುಂಠಿತಗೊಳಿಸುತ್ತಿರುವ ಅವರ ಬೆಳವಣಿಗೆಯನ್ನು, ಪ್ರಜಾಪ್ರಭುತ್ವದ ಮುಖವಾಡದಲ್ಲಿ ಅಲ್ಲಿನ ಸೈನ್ಯಸ ಜನರಲ್‌ಗಳು ನಡೆಸುತ್ತಿರುವ ಸರ್ವಾಧಿಕಾರತ್ವವನ್ನು ಅಲ್ಲಿನ ಜನರಿಗೆ ಮನವರಿಕೆ ಮಾಡಿಕೊಡಬೇಕು.
ಪಾಕಿಸ್ಥಾನಿ ಜನತೆಯಲ್ಲಿ ಅಲ್ಲಿನ ನಾಯಕರ ಕಪಟ ಮತಾಂಧ ಒಣವಾದಗಳನ್ನು, ಅವರ ಮಕ್ಕಳನ್ನು ದೇಶದಲ್ಲಿ ಬೆಳಿಸಿ ಸಾಮಾನ್ಯ ಜನರಲ್ಲಿ ದೇಶಕ್ಕಾಗಿ ಹುತಾತ್ಮರಾಗಿ ಕಾಶ್ಮೀರ ನಮ್ಮದೆಂದು ತೋರುತ್ತಿರುವ ಹುಸಿ ದೇಶಭಕ್ತಿಯನ್ನು ಪ್ರಶ್ನಿಸಲು ಪ್ರೇರೇಪಿಸಬೇಕು. ಹಾಗೇ ಅವರ ಭವಿಷ್ಯವನ್ನು ಹಾಳು ಮಾಡುತ್ತಿರುವುದು ಅಲ್ಲಿನ ನಾಯಕರೇ ಹೊರತು ಭಾರತವಲ್ಲ ಎಂಬುದನ್ನು ಜನತೆಗೆ ತಿಳಿಸಬೇಕು.
6. ಸ್ವಂತ ಯುದ್ಧೋಪಕರಣಗಳನ್ನು ತಯಾರಿಸಬಲ್ಲ ಶಕ್ತಿಯನ್ನು ಬೆಳೆಸಿಕೊಳ್ಳಬೇಕು:
ಇಂದು ಜಗತ್ತಿನಾದ್ಯಂತ ಹಲವಾರು ವಿಜ್ಞಾನಿಗಳು, ತಂತ್ರಜ್ಞರ ಮೂಲ ಭಾರತ. ಚಂದ್ರ-ಮಂಗಳನನ್ನು ತಲುಪಿದ ಭಾರತೀಯ ಜ್ಞಾನಿಗಳಲ್ಲಿ ಭಾರತದಲ್ಲೇ ಶಸ್ತ್ರಾಸ್ತ್ರಗಳನ್ನು ತಯಾರಿಸಬಲ್ಲ ಶಕ್ತಿಯಿದೆ. ಆದಷ್ಟು ಅದಕ್ಕೆ ಪೂರಕವಾದ ವಾತಾವರಣವನ್ನು ಭಾರತ ಸರ್ಕಾರ ಕಲ್ಪಿಸಿಕೊಡಬೇಕು. ಆಧುನಿಕ ತಂತ್ರಜ್ಞಾನವನ್ನು ಸೈನ್ಯದಲ್ಲಿ ಅಳವಡಿಸಿಕೊಂಡು ಆದಷ್ಟು ರಕ್ಷಣಾ ವ್ಯವಸ್ಥೆಯಲ್ಲಿ ದೇಶವನ್ನು ಅವಲಂಭಿಸುವುದನ್ನು ಬಿಡಬೇಕು. ಭಾರತದ ಡಿಫೆನ್ಸ್ ರಿಸರ್ಚ್ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು.
7. ದೇಶದ ಪ್ರತಿಯೊಬ್ಬನೂ ಸೈನಿಕನಾಗಬೇಕು:
ಕೆಣಕಿದಾಗ ಹರಿಹಾಯುವುದು ಮಾತ್ರ ದೇಶಭಕ್ತಿಯಲ್ಲವೆನ್ನುವುದನ್ನು ಮೊದಲು ಅರಿಯಬೇಕು. ಸೈನ್ಯವು ಪ್ರತೀಕಾರವನ್ನು ತೀರಿಸಿಕೊಳ್ಳುತ್ತಿಲ್ಲವೆನ್ನುವವರು ಅದು ಏಕೆ ಸಾಧ್ಯವಾಗುತ್ತಿಲ್ಲವೆನ್ನುವುದನ್ನು ಮೊದಲು ಅರಿಯಬೇಕು. ಪ್ರತೀಕಾರವನ್ನು ತೀರಿಸಿಕೊಳ್ಳಬೇಕೆನ್ನುವವರು ಅಲ್ಲಿರುವ ಸೈನಿಕರ ಬಗ್ಗೆಯೂ ಸ್ವಲ್ಪ ಆಲೋಚಿಸಬೇಕು. ಸೈನಿಕರು ತಮ್ಮ ಕೆಲಸಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎನ್ನುವ ಮೊದಲು ನಾವು ನಮ್ಮ ದೇಶಕ್ಕೇನು ನೀಡಿದ್ದೇವೆ, ನಮ್ಮ ಕರ್ತವ್ಯಗಳನ್ನೆಷ್ಟು ಪಾಲಿಸಿದ್ದೇವೆ ಎನ್ನುವುದನ್ನು ಮೊದಲು ಅರಿಯಬೇಕು.
ಎಲ್ಲಿಯವರೆಗೆ ನಾವು ನಮ್ಮ ಕರ್ತವ್ಯಗಳನ್ನರಿಯದೇ ಸ್ವತಾಸಕ್ತಿಯಲ್ಲಿ ಮುಳುಗಿರುತ್ತೇವೆಯೋ, ಅಲ್ಲಿಯವರೆಗೂ ದೇಶದ ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭವಲ್ಲ. ಕೇವಲ ಒಣಪ್ರತಿಷ್ಠೆಗಳ ಹಿಂದೆ, ಸ್ಟೇಟಸ್-ಬ್ರಾಂಡ್‌ಗಳ ಹಿಂದೆ, ಕೇವಲ ಹಣದ ಹಿಂದೆ ಬೀಳುವುದನ್ನು ಬಿಡಬೇಕು. ಪತ್ರಕರ್ತನಾಗಿರಲಿ, ರಾಜಕಾರಣಿಯಾಗಿರಲಿ, ನಿರುದ್ಯೋಗಿಯಾಗಿರಲಿ, ವ್ಯವಹಾರಸ್ಥನಾಗಿರಲಿ, ಪ್ರತಿಯೊಬ್ಬನೂ ತನ್ನ ಜೀವನದಲ್ಲಿ ಕೆಲವು ನೈಮಿತ್ತಿಕ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಸೈನಿಕನಾಗಬಹುದು. ಇಸ್ರೇಲ್ ನಂತಹ ಪುಟ್ಟ ಯಹೂದಿ ರಾಷ್ಟ್ರದಲ್ಲಿ ಪ್ರತಿಯೊಬ್ಬನೂ ದಿನದ ೪ ಗಂಟೆ ಸೈನಿಕನಾಗಿ ಕಾರ್ಯನಿರ್ವಹಿಸಬೇಕು. ಅದರಿಂದಲೇ ಆ ರಾಷ್ಟ್ರ ಸೂತ್ತಲೂ ಇರುವ ಮುಸಲ್ಮಾನಿ ರಾಷ್ಟ್ರಗಳ ನಡುವೆ ತಲೆಯೆತ್ತಿ ನಿಂತಿದೆ. ಇಂತಹ ಸ್ಥಿತಿ ನಮ್ಮ ದೇಶಕ್ಕಿಲ್ಲ. ಪ್ರತಿಯೊಬ್ಬನೂ ಗಡಿಕಾಯುವ ಅಗತ್ಯಲ್ಲ. ಆದರೆ ನಾವು ಇರುವಲ್ಲೇ ದೇಶದ ಸ್ವತಾಸಕ್ತಿ ರಕ್ಷಣೆಗೆ ಕೈಜೋಡಿಸಿ ಅಹಂನ್ನು ತ್ಯಜಿಸಿದರೆ ಭಾರತದಲ್ಲಿ ೧೨೦ ಕೋಟಿ ಜನ ಸೈನಿಕರಾಗುತ್ತಾರೆ. ಭಾರತದ ವಿಶ್ವಗುರುವಾಗಲು ಆಗ ಮಾತ್ರ ಸಾಧ್ಯ.
Discussion about this post