Read - < 1 minute
ಕಾಝಿಕ್ಕೋಡ್:ಸೆ-25:ಪಾಕಿಸ್ತಾನ ಉಗ್ರವಾದಕ್ಕೆ ಪ್ರಚೋದನೆ ನೀಡಿ, ವಿಶ್ವಾದ್ಯಂತ ಭಯೋತ್ಪಾದನೆಯನ್ನು ಪಸರಿಸುತ್ತಿದೆ. ಭಯೋತ್ಪಾದನೆ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಜನತೆ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆ ನೀಡಿದ್ದಾರೆ.
ಕೇರಳದ ಕಾಝಿಕ್ಕೋಡ್ ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾದಿದ ಅವರು, ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದರು. ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಗಲಭೆ, ಹಿಂಸಾಚಾರದ ಹಿಂದೆ ಪಾಕಿಸ್ತಾನದ ಕೈವಾಡವಿದೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದ್ದು, ಅದನ್ನು ಭಾರತದಿಂದ ಬೇರ್ಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ 17 ಪ್ರಯತ್ನಗಳನ್ನು ರಕ್ಷಣಾ ಪಡೆ ವಿಫಲಗೊಳಿಸಿದೆ. ಒಂದು ವರ್ಷದಲ್ಲಿ ರಕ್ಷಣಾ ಪಡೆ ಸುಮಾರು 170 ಭಯೋತ್ಪಾದಕರನ್ನು ಹತ್ಯೆಮಾಡಿದೆ. ಈ ಉಗ್ರರೆಲ್ಲರನ್ನೂ ಪಾಕಿಸ್ತಾನವೇ ಕಳುಹಿಸಿತ್ತು. ಉರಿ ಭಯೋತ್ಪಾದಕ ದಾಳಿಯನ್ನು ಕೂಡ ಪಾಕಿಸ್ತಾನ ಹತಾಶೆಯಿಂದ ನಡೆಸಿದೆ ಕೃತ್ಯವಾಗಿದೆ ಎಂದು ಶಾ ತಿಳಿಸಿದ್ದಾರೆ.
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್, ಉಗ್ರ ಬುರ್ಹಾನ್ ವನಿ ಯುವ ನಾಯಕ ಎಂದು ಸಂಬೋದಿಸಿರುವುದು ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು. ಇದೇ ವೇಳೆ ಕಾಶ್ಮೀರದಲ್ಲಿನ ಹಿಂಸಾಚಾರದ ವಿಚಾರವಾಗಿ ಮಾತನಾಡಿದ ಶಾ, ಸಂವಿಧಾನದಲ್ಲಿ ನಂಬಿಕೆಯಿಟ್ಟವರೊಂದಿಗೆ ಮಾತನಾಡಲು ಸರ್ಕಾರ ಸಧಾ ಸಿದ್ಧವಿದೆ ಎಂದು ತಿಳಿಸಿದ್ದಾರೆ.
Discussion about this post