Read - < 1 minute
ಬೆಂಗಳೂರು, ಸೆ.8: ರಾಜ್ಯ ಪೊಲೀಸ್ ಸೇವೆಯ ನೇಮಕಾತಿ ನಿಯಮಗಳಿಗೆ ಬದಲಾವಣೆ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇತರೆ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿ ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಈಗಿರುವ 26 ರಿಂದ 28ಕ್ಕೆ ಹೆಚ್ಚಿಸಲಾಗಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ನೇಮಕಾತಿ ವಯೋಮಿತಿಯನ್ನು 28 ರಿಂದ 30ಕ್ಕೆ ಹೆಚ್ಚಿಸಲಾಗಿದೆ ಎಂದು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಟಿ.ಬಿ. ಜಯಚಂದ್ರ ಸಂಪುಟ ಸಭೆಯ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದರು. ಬೇರೆ ಬೇರೆ ರಾಜ್ಯಗಳಲ್ಲಿರುವ ನೇಮಕಾತಿ ನಿಯಮದಂತೆ ರಾಜ್ಯದಲ್ಲಿಯೂ ವಯೋಮಿತಿ ಏರಿಕೆ ಮಾಡಲಾಯಿತು ಎಂದು ಸಚಿವರು ವಿವರಣೆ ನೀಡಿದರು.
ರಾಜ್ಯದಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸುಮಾರು 600ಕ್ಕೂ ಹೆಚ್ಚು ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳನ್ನು ನೇರ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ವಿದ್ಯಾರ್ಥಿಗಳ ಅರ್ಹತೆ ಅಂಕ ಮತ್ತು ಪರೀಕ್ಷಾ ಪ್ರಾಧಿಕಾರದ ಪರೀಕ್ಷಾ ಅಂಕಗಳನ್ನು ಪರಿಗಣಿಸಿ, ಸಂದರ್ಶನವಿಲ್ಲದೆ ನೇರ ನೇಮಕಾತಿ ಮಾಡಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿತು ಎಂದು ಅವರು ಹೇಳಿದರು. ಸುಮಾರು 66 ಸಹಾಯಕ ನಿರ್ದೇಶಕರು, 376 ಕೃಷಿ ಅಧಿಕಾರಿ ಹಾಗೂ 172 ಸಹಾಯಕ ಕೃಷಿ ಅಧಿಕಾರಿಗಳ ನೇಮಕಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಬೀದರ್ ಗದಗ್ ಸೇರಿದಂತೆ ರಾಜ್ಯದಲ್ಲಿ ಹೆಸರು ಬೆಳೆಯುವ ಪ್ರದೇಶಗಳಲ್ಲಿ ಈ ಬಾರಿ ಬಂಪರ್ ಬೆಳೆ ಬಂದಿದ್ದು, ಮಾರುಕಟ್ಟೆಯಲ್ಲಿ ದರ ಕುಸಿತವುಂಟಾಗಿರುವುದರಿಂದ ನ್ಯಾಪೇಡ್ ಮೂಲಕ ಪ್ರತಿ ಕ್ವಿಂಟಾಲ್ ಗೆ 5225 ರೂ.ನಂತೆ ಖರೀದಿಸಲು ಸಂಪುಟ ಸಭೆ ಒಪ್ಪಿಗೆ ನೀಡಿತು.
ನ್ಯಾಪೇಡ್ ತಕ್ಷಣದಿಂದಲೇ ಬೆಂಬಲ ಬೆಲೆ ಯೋಜನೆಯಡಿ ಹೆಸರನ್ನು ಖರೀದಿಸಲು ಮುಂದಾಗಲಿದ್ದು, 45 ದಿನಗಳ ಕಾಲ ಕೇಂದ್ರ ಸಕರ್ಾರದ ಮಾರ್ಗಸೂಚಿಯಂತೆ ಖರೀದಿ ಕೇಂದ್ರಗಳು ಆರಂಭವಾಗಲಿದೆ ಎಂದು ಅವರು ವಿವರಣೆ ನೀಡಿದರು.
ರಾಜ್ಯದಲ್ಲಿ ನೀರಾವರಿ ಯೋಜನೆಗಳಿಗೆ ಅನುಕೂಲವಾಗುವಂತೆ ರಾಜ್ಯ ನೀರಾವರಿ ನಿಗಮ, 1100 ಕೋಟಿ ರೂ. ಸಾಲ ಎತ್ತಲು ಸಂಪುಟ ಸಭೆ ಅನುಮೋದನೆ ನೀಡಿದೆ.
ರಾಜ್ಯ ಸಚಿವ ಸಂಪುಟದ ಕೆಲವು ಸಚಿವರನ್ನು ಸೇರ್ಪಡೆ ಮಾಡಿಕೊಂಡ ಹಿನ್ನೆಲೆಯಲ್ಲಿ 22 ಸಂಪುಟ ಉಪಸಮಿತಿಯನ್ನು ಪುನಾರಚಿಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಜಯಚಂದ್ರ ಹೇಳಿದರು.
ಹೆಬ್ಬಾಳ ರಸ್ತೆಯ ಹೃದಯ ಭಾಗದಲ್ಲಿರುವ ಕೇಂದ್ರ ಸರ್ಕಾರದ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಗೆ ನೀಡಿದ್ದ ಐದು ಎಕರೆ ಜಾಗವನ್ನು ವಾಪಸ್ಸು ಪಡೆದು ಮಾಹಿತಿ ತಂತ್ರಜ್ಞಾನ ಇಲಾಖೆ ಮೂಲಕ ನೂತನ ವಿಜ್ಞಾನ ಗ್ಯಾಲರಿಯನ್ನು 1.26 ಎಕರೆಯಲ್ಲಿ ಆರಂಭಿಸಲು ಒಪ್ಪಿಗೆ ನೀಡಿದೆ. ಐರ್ಲೆಂಡ್ ದೇಶದ ಡಬ್ಲಿಂಗ್ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ಇ-ವಿಜ್ಞಾನ ಗ್ಯಾಲರಿ ಅಸ್ಥಿತ್ವಕ್ಕೆ ಬರಲಿದೆ. ರಾಜ್ಯ ಸರ್ಕಾರ ಕೇಂದ್ರದ ಐವಿಎಆರ್ ಸಂಸ್ಥೆ ರಾಜನಕುಂಟೆ ಬಳಿ 110 ಎಕರೆ ಜಾಗವನ್ನು ನೀಡಿದ್ದು, ಅಲ್ಲಿ ಸಂಶೋಧನಾ ಸಂಸ್ಥೆ ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.
ಬರುವ 14 ರಂದು ಒಂದು ದಿನದ ವಿಧಾನ ಮಂಡಲದ ಅಧಿವೇಶನದಲ್ಲಿ ಸಂಸತ್ನಲ್ಲಿ ಅಂಗೀಕರವಾದ ಸರಕು ಮತ್ತು ಸೇವಾ ತೆರಿಗೆ ಮಸೂದೆಗೆ ಚರ್ಚೆ ಇಲ್ಲದೆ ಅಂಗೀಕಾರ ನೀಡಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು.
Discussion about this post