ನವದೆಹಲಿ, ಅ.15: ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿಯನ್ನು ಪ್ರಶ್ನಿಸಿ, ಪಾಕ್ ಮಾಧ್ಯಮಗಳಲ್ಲಿ ಜನಪ್ರಿಯರಾದ ಆಮ್ ಆದ್ಮಿ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ ರನ್ನು ಸೂರತ್ ನಲ್ಲಿ ಭಯೋತ್ಪಾದಕರ ಭಾವಚಿತ್ರಗಳಜತೆ ಕೇಜ್ರಿವಾಲ್ ಅವರ ಫೋಟೋವನ್ನು ಸೇರಿಸಿ, ಪೋಸ್ಟರ್ ಅಂಟಿಸಲಾಗಿದೆ.
ಅ.16ಕ್ಕೆ ಆಮ್ ಆದ್ಮಿ ಪಾರ್ಟಿ (ಆಪ್) ಸೂರತ್ ನಲ್ಲಿ ಬೃಹತ್ ಸಭೆ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸೂರತ್ ನಗರಾದ್ಯಂತ `ಪಾಕಿಸ್ಥಾನಿ ಹೀರೋಗಳು’ ಎಂಬ ಪೋಸ್ಟರ್ ಅಂಟಿಸಲಾಗಿದ್ದು, ಇದರಲ್ಲಿ ಉಗ್ರರಾದ ಹಫೀಜ್ ಸಯೀದ್, ಒಸಾಮ ಬಿನ್ ಲಾಡೆನ್, ಬುಹ್ರಾನ್ ವನಿ ಇವುಗಳ ಮಧ್ಯೆ ಕೇಜ್ರಿವಾಲ್ ಪೋಟೋವನ್ನೂ ಹಾಕಲಾಗಿದ್ದು, ಸೂರತ್ ನಗರಾಧ್ಯಂತ ಈ ಪೋಸ್ಟರ್ ಗಳು ರಾರಾಜಿಸುತ್ತಿವೆ.
ಪಾಕ್ ಭಯೋತ್ಪಾದಕರ ಜತೆಗೆ ಕೇಜ್ರಿವಾಲ್ ಸಹ ಈ ಪೋಸ್ಟರ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬೃಹದಾಕಾರದ ಈ ಪೋಸ್ಟರ್ ಗಳು ಇದೀಗ ವಿವಾದದ ಕೇಂದ್ರ ಬಿಂದುವಾಗಿದೆ. ಈ ಬ್ಯಾನರ್ ಗಳನ್ನು ಬಿಜೆಪಿ ಹಾಕಿದೆ ಎಂದು ಆಪ್ ಆರೋಪಿಸಿದೆ. ಆದರೆ ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ತಿಳಿಸಿದೆ.
ಕೆಲವು ಬ್ಯಾನರ್ ಗಳನ್ನು ಕಿತ್ತು ಹಾಕಿರುವ ಆಪ್ ಕಾರ್ಯಕರ್ತರು ಉಳಿದ ಬ್ಯಾನರ್ ಗಳನ್ನು ತೆಗೆಯಲಾಗುವುದು ಎಂದು ತಿಳಿಸಿದ್ದಾರೆ. ಆಪ್ ಮುಖಂಡ ಯೋಗೇಶ್ ಜಾಡ್ವಾನಿ ಪ್ರತಿಕ್ರಿಯಿಸಿ, ಈ ನೀಚ ಕೃತ್ಯವನ್ನು ಬಿಜೆಪಿಯೇ ಮಾಡಿದೆ. ಈಗಾಗಲೇ ಹಲವು ಬ್ಯಾನರ್ ಗಳನ್ನು ತೆಗೆಯಲಾಗಿದೆ. ಈ ಸ್ಥಳಗಳಲ್ಲಿ ಆಪ್ ಸಭೆ ನಡೆಸದಿರಲು ತೀರ್ಮಾನಿಸಿ, ಬೇರೆ ಸ್ಥಳವನ್ನು ಗೊತ್ತು ಮಾಡಿದೆ. ಅ.16ರಂದು ನಡೆಯಲಿರುವ ಸಭೆಯಲ್ಲಿ ಆಪ್ ಮುಖಂಡರಾದ ಕುಮಾರ್ ವಿಶ್ವಾಸ್ ಮತ್ತು ಸಂಜಯ್ ಸಿಂಗ್ ಸಹ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
Discussion about this post