ರಿಯೋ ಡಿ ಜನೈರೋ, ಸೆ.೧೪: ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೀಟ್‌ಗಳ ಪಾರುಪತ್ಯ ಮುಂದುವರೆದಿದ್ದು, ಜಾವಲಿನ್ ಥ್ರೋನಲ್ಲಿ ದೇವೇಂದ್ರ ಜಜಾರಿಯಾ ಚಿನ್ನದ ಪದಕ ಗಳಿಸಿದ್ದಾರೆ.
ರಿಯೋ ಡಿ ಜನೈರೋದಲ್ಲಿರುವ ಕ್ರೀಡಾಗ್ರಾಮದಲ್ಲಿ ನಡೆದ ಜಾವಲಿನ್ ಥ್ರೋ ಪಂದ್ಯದಲ್ಲಿ ದೇವೇಂದ್ರ ಅವರು, ೬೩.೯೭ ಮೀಟರ್ ದೂರಕ್ಕೆ ಜಾವಲಿನ್ ಎಸೆಯುವ ಮೂಲಕ ಇತಿಹಾಸ ಬರೆದಿದ್ದಾರೆ. ಆ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದಿತ್ತಿದ್ದಾರೆ. ಈ ಹಿಂದೆ ೨೦೦೪ರಲ್ಲಿ ಅಥೆನ್ಸ್‌ನಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ನಲ್ಲಿ ಇದೇ ದೇವೇಂದ್ರ ಅವರು ೬೨.೧೫ ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ದಾಖಲೆ ಬರೆದಿದ್ದರು.
ವಿಶ್ವ ರ‌್ಯಾಂಕಿಂಗ್ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿರುವ ದೇವೇಂದ್ರ ಇದೀಗ ತಮ್ಮದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಇದೇ ವಿಭಾಗದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇತರೆ ಭಾರತೀಯ ಆಟಗಾರರಾದ ರಿಂಕೂ ಹೂಡಾ ಐದನೇ ಸ್ಥಾನಗಳಿಸಿದರು. ದೇವೇಂದ್ರ ಜಾರಿಯಾ ಅವರ ಈ ಚಿನ್ನದ ಪದಕದ ಮೂಲಕ ಪದಕ ಪಟ್ಟಿಯಲ್ಲಿ ಭಾರತದ ಪದಕಗಳ ಸಂಖ್ಯೆ ೪ಕ್ಕೇರಿದ್ದು, ನಿನ್ನೆ ದೀಪಾ ಮಲ್ಲಿಕ್ ಅವರ ಬೆಳ್ಳಿ ಪದಕ ಸೇರಿದಂತೆ ಭಾರತದ ಬಳಿ ಇದೀಗ ೨ ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳಿವೆ.
ರಾಜಸ್ತಾನದ ಚುರು ಜಿಲ್ಲೆಯ ೩೬ ರ ಹರೆಯದ ದೇವೇಂದ್ರ ಝಝಾರಿಯಾ ಬಾಲ್ಯದಲ್ಲಿ ಹಣ್ಣು ಕೀಳಲು ಮರವೇರಿದ್ದ ವೇಳೆ ವಿದ್ಯುತ್ ತಂತಿ ದಗುಲಿ ಎಡಗೈ ಸಂಪೂರ್ಣ ಸುಟ್ಟಿತ್ತು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ವೈದ್ಯರು ಕೈಯನ್ನು ಕತ್ತರಿಸಬೇಕಾದ ಅನಿವಾರ್ಯತೆ ಎದುರಾಯಿತು.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಆರ್.ಡಿ. ಸಿಂಗ್ ಅವರ ತರಬೇತಿ ದೇವೇಂದ್ರ ಅವರ ಸಾಧನೆಗೆ ನೆರವಾಗಿದೆ.
ಈಗಾಗಲೇ ದೇವೇಂದ್ರ ಜಜಾರಿಯಾ ಪದ್ಮಶ್ರೀ, ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
Discussion about this post