ಉಡುಪಿ : ಸ.೬: ಮಲ್ಪೆ ತೀರದಿಂದ ಸುಮಾರು 4.5 ಲಾಟಿಕಲ್ ಮೈಲಿ ದೂರದಲ್ಲಿ ಗೋಪಿಸಾಗರ್ ಎಂಬ ಹೆಸರಿನ ಈ ಬೋಟಿನ ಸ್ಟೇರಿಂಗ್ ತುಂಡಾಗಿ ನಿಯಂತ್ರಣ ತಪ್ಪಿ ಸೋಮವಾರ ರಾತ್ರಿ ಸುಮಾರು 7.30ಕ್ಕೆ ಬಂಡೆಗಪ್ಪಳಿಸಿ ಒಡೆದು ಹೋಯಿತು.
ಬೋಟಿನಲ್ಲಿದ್ದ ತಾಂಡೇಲ (ಚಾಲಕ) ವಾಸುದೇವ ಭಟ್ಕಳ, ಪಾಂಡುರಂಗ ಭಟ್ಕಳ, ಸಂತೋಷ ಕೋಟ, ಮಂಜುನಾಥ ಭಟ್ಕಳ, ಸುಬ್ಬಯ್ಯ ಶಿರೂರು, ವಾಸು ನಾಯ್ಕ ಭಟ್ಕಳ ಮತ್ತು ಜಗದೀಶ ಭಟ್ಕಳ ಅವರು ತಕ್ಷಣ ಸಮುದ್ರಕ್ಕೆ ಜಿಗಿದು ಈಜಿಕೊಂಡು ಹೋಗಿ ಸುಮಾರು 20 – 25 ಅಡಿ ಎತ್ತರದ ಬಂಡೆಕಲ್ಲನ್ನೇರಿ ಕುಳಿದು ಜೀವ ಉಳಿಸಿಕೊಂಡಿದ್ದಾರೆ.
ಜೀವ ಉಳಿಸಿಕೊಳ್ಳುವುದಕ್ಕಾಗಿ ರಾತ್ರಿ ಬಂಡೆಯನ್ನೇರುವಾಗ ಕಾಲಿಗೆ ಚಿಪ್ಪುಮೀನು ತಾಗಿ ತೀವ್ರತರದ ಗಾಯಗಳಾಗಿದ್ದು, ಮಂಗಳವಾರ ಮುಂಜಾನೆ ಅವರನ್ನು ಕರಾವಳಿ ಕಾವಲು ಪಡೆಯ ಪೊಲೀಸರು ರಕ್ಷಣಾ ಬೋಟುಗಳಲ್ಲಿ ದಡಕ್ಕೆ ಕರೆತಂದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಮಂಗಳವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ, ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು.
50 ಲಕ್ಷ ರು. ನಷ್ಟ
ಮಲ್ಪೆಯ ಕೇಶವ ಕುಂದರ್ ಎಂಬವರಿಗೆ ಸೇರಿದ ಈ ಬೋಟು ಅ.29ರಂದು ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ಹೋಗಿದ್ದರು. ಸುಮಾರು 8 ದಿನಗಳ ಕಾಲ ಮೀನುಗಾರಿಕೆ ನಡೆಸಿ, ಬೋಟು ತುಂಬಾ ಮೀನು ಹಿಡಿದು ಸೋಮವಾರ ಸಂಜೆ ರಾತ್ರಿ ಹಿಂದಕ್ಕೆ ಬರುತ್ತಿದ್ದರು.
ಬೋಟಿನಲ್ಲಿ ಸುಮಾರು 7 – 8 ಲಕ್ಷ ರು. ಮೌಲ್ಯದ ರಾಣಿಮೀನು ಮತ್ತು ಬೊಂಡಾಸ್ ಮೀನಿತ್ತು, ಲಕ್ಷಾಂತರ ರು. ಬೆಲೆ ಬಾಳುವ ಬಲೆಗಳಿದ್ದವು. ಬೋಟು ಸಂಪೂರ್ಣ ಛಿದ್ರವಾಗಿದ್ದು, ಮೋಟಾರ್ ಸಹಿತ ನೀರಲ್ಲಿ ಮುಳುಗಿದೆ. ಒಟ್ಟು ಸುಮಾರು 50 ಲಕ್ಷ ರು. ನಷ್ಟ ಅಂದಾಜಿಸಲಾಗಿದೆ.
Discussion about this post