ಬೆಂಗಳೂರು: ಸೆ:25; ಈ ಬಾರಿಯ ಬಿಬಿಎಂಪಿ ಮೇಯರ್ ಚುನಾವಣೆ ಸಂದರ್ಭದಲ್ಲೂ ಕಾಂಗ್ರೆಸ್ನೊಂದಿಗಿನ ಮೈತ್ರಿ ಮುಂದುವರೆಸಲು ಜೆಡಿಎಸ್ ಸಮ್ಮತಿ ವ್ಯಕ್ತಪಡಿಸಿದೆ.
ನಿನ್ನೆ ತಡರಾತ್ರಿ ಯುಬಿ ಸಿಟಿಯಲ್ಲಿರುವ ಗೆಸ್ಟ್ಹೌಸ್ನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಜೆಡಿಎಸ್ ಮುಖಂಡರ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಬೆಂಗಳೂರು ಪ್ರತಿನಿಧಿಸುವ ಮೂವರು ಅಮಾನತು ಶಾಸಕರಾದ ಕೆ.ಗೋಪಾಲಯ್ಯ, ಜಮೀರ್ ಆಹ್ಮದ್ಖಾನ್ ಮತ್ತು ಅಖಂಡ ಶ್ರೀನಿವಾಸಮೂರ್ತಿ ಹಾಗೂ ಅವರ ಕೆಲ ಕಟ್ಟಾ ಬೆಂಬಲಿಗರು ಹೊರತುಪಡಿಸಿ 8 ರಿಂದ 9 ಮಂದಿ ಬಿಬಿಎಂಪಿ ಸದಸ್ಯರು ಪಾಲ್ಗೊಂಡಿದ್ದ ಸಭೆಯಲ್ಲಿ ಕಾಂಗ್ರೆಸ್ಗೆ ಬೆಂಬಲ ಮುಂದುವರೆಸುವ ತೀರ್ಮಾನ ಕೈಗೊಳ್ಳಲಾಯಿತು ಎನ್ನಲಾಗಿದೆ.
ಕಾಂಗ್ರೆಸ್ಗೆ ಬೆಂಬಲ ನೀಡಿದರೆ ಐದು ಸ್ಥಾಯಿ ಸಮಿತಿ ಹಾಗೂ ಉಪ ಮಹಾಪೌರರ ಸ್ಥಾನ ದೊರೆಯಲಿದೆ. ಹೀಗಾಗಿ ನಾಗಪುರ ವಾರ್ಡ್ ಪ್ರತಿನಿಧಿಸುವ ಭದ್ರೇಗೌಡ ಇಲ್ಲವೆ ಆನಂದ್ ಅವರಲ್ಲಿ ಒಬ್ಬರನ್ನು ಡೆಪ್ಯೂಟಿ ಮೇಯರ್ ಸ್ಥಾನಕ್ಕೆ ನಿಯೋಜಿಸುವ ಬಗ್ಗೆಯೂ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ.
ಜಮೀರ್ ಆಹ್ಮದ್ಖಾನ್ ಅವರ ಬೆಂಬಲಿಗೆ ಇಮ್ರಾನ್ ಪಾಷಾ, ಲಗ್ಗೆರೆ ವಾರ್ಡ್ ನ ಮಂಜುಳಾ ನಾರಾಯಣಸ್ವಾಮಿ, ಕಾವೇರಿಪುರ ವಾರ್ಡ್ ನ ರಮೀಳಾ ಉಮಾಶಂಕರ್, ದೇವದಾಸ್ ಮತ್ತು ಆನಂದ್ ಇಲ್ಲವೆ ಭದ್ರೇಗೌಡರಿಗೆ ಸಮಿತಿ ಅಧ್ಯಕ್ಷ ಸ್ಥಾನ ನೀಡುವುದು ಬಹುತೇಕ ಖಚಿತಪಟ್ಟಿದೆ.
ಆದರೂ ಸಭೆಯಲ್ಲಿ ಜೆಡಿಎಸ್ಗೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಕಾಂಗ್ರೆಸ್ ಮೇಲೆ ಒತ್ತಡ ತರುವ ಬಗ್ಗೆಯೂ ಪ್ರಸ್ತಾಪಿಸಲಾಯಿತು. ಒಂದು ವೇಳೆ ಮೇಯರ್ ಸ್ಥಾನ ದಕ್ಕಿದರೆ ಮೇಯರ್ ಗೌನು ತೊಡುವ ಭಾಗ್ಯ ಮಂಜುಳಾ ನಾರಾಯಣಸ್ವಾಮಿ ಅವರಿಗೆ ಅನಾಯಸವಾಗಿ ಒಲಿದು ಬರಲಿದೆ.
ಮೇಯರ್ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ನಿರಾಕರಿಸಿದರೆ ನಾವು ಹೇಳುವ ಅಭ್ಯರ್ಥಿಗೆ ಮೇಯರ್ ಸ್ಥಾನ ನೀಡುವಂತೆ ಪಟ್ಟು ಹಿಡಿಯಲು ಜೆಡಿಎಸ್ ತೀರ್ಮಾನಿಸಿದೆ.
ಇಂದು ಸಂಜೆ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಇಂದು ರಾತ್ರಿ ಮತ್ತೊಮ್ಮೆ ಜೆಡಿಎಸ್ ಮುಖಂಡರು ಅಂತಿಮ ಸುತ್ತಿನ ಮಾತುಕತೆ ನಡೆಸಿ ಕಾಂಗ್ರೆಸ್ಗೆ ಬೆಂಬಲ ನೀಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಲಗ್ಗೆರೆ ವಾರ್ಡ್ ನ ಮಂಜುಳಾ ನಾರಾಯಣಸ್ವಾಮಿ ಮತ್ತು ದೇವದಾಸ್ ಮಾತ್ರ ಬಿಜೆಪಿಗೆ ಬೆಂಬಲ ನೀಡುವಂತೆ ಸಲಹೆ ನೀಡಿದ್ದಾರೆ. ಆದರೆ, ಬಿಜೆಪಿಯವರು ಜೆಡಿಎಸ್ ಬೆಂಬಲ ನಿರಾಕರಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ನೊಂದಿಗಿನ ಮೈತ್ರಿ ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು ಎನ್ನಲಾಗಿದೆ.
269 ಮಂದಿ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. ಸಂಸದರು, ಶಾಸಕರು, ರಾಜ್ಯಸಭಾ ಸದಸ್ಯರು ಸೇರಿದಂತೆ ಕಾಂಗ್ರೆಸ್ 112 ಸದಸ್ಯರ ಸಂಖ್ಯಾಬಲ ಹೊಂದಿದ್ದು, ಜೆಡಿಎಸ್ನ 23 ಸದಸ್ಯರು ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿದರೆ 135 ಮತಗಳಾಗಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಅನಾಯಾಸವಾಗಿ ಮಹಾಪೌರರಾಗಿ ಆಯ್ಕೆಯಾಗುತ್ತಾರೆ.
127 ಸದಸ್ಯ ಬಲ ಹೊಂದಿರುವ ಬಿಜೆಪಿಗೆ 7 ಮಂದಿ ಪಕ್ಷೇತರರು ಬೆಂಬಲ ನೀಡಿದರೂ ಒಟ್ಟು ಸಂಖ್ಯಾಬಲ 134ಕ್ಕೆ ಸೀಮಿತಗೊಳ್ಳುವುದರಿಂದ ಬಿಜೆಪಿ ಆಸೆ ಈ ಬಾರಿಯೂ ಈಡೇರುವ ಲಕ್ಷಣಗಳು ಕಾಣುತ್ತಿಲ್ಲ.
ಕಳೆದ ಬಾರಿ ಅಧಿಕಾರ ಹಿಡಿಯುವುದು ನಾವೇ ಎಂಬ ಹಠದೊಂದಿಗೆ ಬಿಜೆಪಿ ಅಭ್ಯಥರ್ಿ ಮಂಜುನಾಥ್ ರಾಜು ಮೇಯರ್ ಚುನಾವಣೆಗೆ ಸ್ಪರ್ಧಿಸಿ ಮುಖಭಂಗ ಅನುಭವಿಸಿದ್ದರು. ಹೀಗಾಗಿ ಈ ಬಾರಿ 127 ಸದಸ್ಯ ಬಲ ಹೊಂದಿರುವ ಬಿಜೆಪಿ ಮೇಯರ್ ಚುನಾವಣೆಗೆ ತನ್ನ ಅಭ್ಯರ್ಥಿಯನ್ನು ನಿಲ್ಲಿಸುವುದೋ ಇಲ್ಲವೋ ಕಾದು ನೋಡಬೇಕು.
Discussion about this post