ಚೆನ್ನೈ, ಅ.29: ನವೆಂಬರ್ ೧೯ರಂದು ತಮಿಳುನಾಡಿನಲ್ಲಿ ಉಪಚುನಾವಣೆ ನಡೆಯಲಿದ್ದು, ತಮ್ಮ ಪಕ್ಷದ ಅಭ್ಯರ್ಥಿಯೊಬ್ಬರ ಬಿ ಫಾರಂ ಹಾಗೂ ದಾಖಲೆ ಪತ್ರಗಳಿಗೆ ಜಯಲಲಿತಾ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ವರದಿಯಾಗಿದೆ.
ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ತಿಂಗಳಿನಿಂದ ಆಸ್ಪತ್ರೆಗೆ ದಾಖಲಾಗಿರುವ ಜಯಲಲಿತಾ ಆರೋಗ್ಯದ ಕುರಿತಾಗಿ ಈಕ್ಷಣದವರೆಗೂ ಸ್ಪಷ್ಟ ಚಿತ್ರಣ ಹೊರಬಂದಿಲ್ಲ. ಇದರ ನಡುವೆಯೇ ತಮಿಳುನಾಡಿನಲ್ಲಿ ಉಪಚುನಾವಣೆ ಎದುರಾಗಿದೆ.
ನವೆಂಬರ್ ೧೯ರಂದು ತಿರುಪುರನಾಗುಂಡ್ರಂ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಎಐಡಿಡಿಎಂಕೆ ಪಕ್ಷದಿಂದ ಎ.ಕೆ. ಬೋಸ್ ಸ್ಪರ್ಧಿಸುತ್ತಿದ್ದಾರೆ. ಜಯಾ ಎಐಡಿಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಅರ್ಭ್ಯರ್ಥಿಗಳ ಬಿ-ಫಾರಂಗೆ ಸಹಿ ಹಾಕುವುದು ಕಡ್ಡಾಯ. ಅಂತೆಯೇ ಅಸ್ವಸ್ಥರಾಗಿ ಸಹಿ ಹಾಕದ ಸ್ಥಿತಿಯಲ್ಲಿರೋ ಕಾರಣಕ್ಕೆ ಜಯಾ ಎ.ಕೆ. ಬೋಸ್ ಅವರ ಬಿ-ಪಾರಂ ಸೇರಿದಂತೆ ಹಲವು ಪತ್ರಗಳಿಗೆ ಎಡಗೈ ಹೆಬ್ಬೆರಳ ಮುದ್ರೆ ಹಾಕಿದ್ದಾರೆ.
ಒಟ್ಟು ಐದು ಕಡೆ ಜಯಾ ಎಡಗೈನ ಹೆಬ್ಬೆರಳಿನ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಹೇಳಲಾಗಿದ್ದು, ಜಯ ಹೆಬ್ಬೆರಳು ಮುದ್ರೆ ಹಾಕಿರುವ ದಾಖಲೆಗಳನ್ನು ಎಐಎಡಿಎಂಕೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಮದ್ರಾಸ್ ಮೆಡಿಕಲ್ ಕಾಲೇಜ್ ವೈದ್ಯರು ಜಯಾ ಹೆಬ್ಬೆಟ್ಟನ್ನು ದೃಢೀಕರಿಸಿರುವುದರಿಂದ ಚುನಾವಣಾ ಆಯೋಗ ಬೋಸ್ ಅವರ ನಾಮಪತ್ರವನ್ನು ಸ್ವೀಕರಿಸಿದೆ.















