ಸಿದ್ಧರಾಮಯ್ಯನವರಿಗೆ ಇನ್ನಾದರೂ ಸದ್ಬುದ್ದಿ ಬರಬಹುದು: ಯಡಿಯೂರಪ್ಪ
ಬೆಳಗಾವಿ, ಅ.3: ಕಾವೇರಿ ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕಡೆಗೆ ಬೊಟ್ಟು ಮಾಡುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇನ್ನಾದರು ಸದ್ಬುದ್ದಿ ಬರಬಹುದು ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಧರ್ಮನಾಥ ಭವನದಲ್ಲಿ ಭಾರತೀಯ ಜನಾತಾ ಪಾರ್ಟಿಯ ರಾಜ್ಯ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹದಾಯಿ ಹಾಗೂ ಕಾವೇರಿ ವಿಷಯವಾಗಿ ಕೇವಲ ಕೇಂದ್ರ ಸರಕಾರವನ್ನು ಮುಖ್ಯಮಂತ್ರಿಗಳು ದೂರುತ್ತಿದ್ದರು. ಈಗ ಕೇಂದ್ರ ಸರಕಾರ ಕಾವೇರಿ ನಿರ್ವಹಣಾ ಮಂಡಳಿ ಮಾಡುವುದಿಲ್ಲ ಎಂದು ಕೋರ್ಟಿನಲ್ಲಿ ವಿನಂತಿಸಿಕೊಂಡಿದ್ದರಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಮಂಡಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂಧನೆ ಸಲ್ಲಿಸಿದ್ದಾರೆ. ಇದರಿಂದ ಬಿಜೆಪಿ ನಿಲುವು ಎನ್ನೆನುವುದು ಎಲ್ಲರಿಗೂ ಗೊತ್ತಾಗಿದೆ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹೆಚ್ಚಿಗೆ ಮಾತನಾಡುವುದಿಲ್ಲ. ಕೆಲಸ ಜಾಸ್ತಿ ಮಾಡುತ್ತಾರೆ. ದೇಶದ ಎಲ್ಲ ರಾಜ್ಯಗಳಿಗೆ ಸಮಾನ ಪಾಲು ಹಾಗೂ ಹಕ್ಕುಗಳನ್ನು ನೀಡುತ್ತಿದ್ದಾರೆ. ಮೋದಿ ಅವರ ಆಡಳಿತ ಅವದಿಯಲ್ಲಿ ದೇಶದ ರಾಜ್ಯಗಳಲ್ಲಿ ಬಿಜೆಪಿ ಪರ ವಾತಾವರಣ ನಿರ್ಮಾಣವಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ಕಾವೇರಿ ವಿಷಯವಾಗಿ ಕಾಂಗ್ರೆಸ್ ಸರಕಾರ ವಿಧಾನ ಮಂಡಳದಲ್ಲಿ ನಿರ್ಣಯ ಮಾಡಿದ ನಿಲುವಿನ ಮೇಲೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಮುಂದೆ ರಾಜ್ಯದ ಪರವಾಗಿ ವಕಾಲತು ನಡೆಸುತ್ತಿದ್ದ ಫಾಲಿ ನಾರಿಮನ್ ನಮ್ಮ ರಾಜ್ಯಕ್ಕೆ ತಿರುಗಿಬಿದ್ದರು. ಈ ಹಿಂದೆ ಬಿಜೆಪಿ ಪಕ್ಷ ಹಲವು ಹೋರಾಟ ನಡೆಸಿ ನಾರಿಮನ ಬದಲಾವಣೆ ಮಾಡಬೇಕೆಂದು ವಿನಂತಿಸಿಕೊಂಡರೂ ಕ್ರಮ ಕೈಗೊಂಡಿರಲಿಲ್ಲ. ಈ ನಿಟ್ಟಿನಲ್ಲಿ ಕಾವೇರಿ ವಿಷಯವಾಗಿ ಸರ್ವಪಕ್ಷಗಳ ಸಭೆಯಿಂದ ಬಿಜೆಪಿ ದೂರ ಉಳಿಯಬೇಕಾಗಿತ್ತು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಬಿಜೆಪಿ ಸಂಸದರು ಸೇರಿಕೊಂಡು ಕಾವೇರಿ ನಿರ್ವಹಣಾ ಸಮಿತಿ ರಚನೆ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದೆವು ಅದರಂತೆ ಪ್ರಧಾನಿ ನ್ಯಾಯಾಲಯದಲ್ಲಿ ವಿನಂತಿಸಿಕೊಂಡಿದ್ದಾರೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಕೇಂದ್ರ ಸರ್ಕಾರದ ಮೇಲೆ ಬೊಟ್ಟು ಮಾಡಿ ತೋರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಧಾನಿ ಸರಿಯಾದ ಉತ್ತರ ನೀಡಿದ್ದಾರೆ. ಈ ಹಿಂದೆ ಕಾವೇರಿ ವಿವಾದ ರಾಜ್ಯ ಸರಕಾರದ ಬೇಜವಾಬ್ದಾರಿಯೇ ಕಾರಣವಾಗಿದೆ. ಬಿಜೆಪಿಯ ಸಲಹೆಯನ್ನು ಮುಖ್ಯಮಂತ್ರಿ ಪರಿಗಣಿಸಲಿಲ್ಲ. ಸುಪ್ರೀಂ ಕೊರ್ಟಿನಲ್ಲಿ ಸರಿಯಾಗಿ ವಾದ ಮಂಡಿಸಲು ಸಾಧ್ಯವಾಗದ ಸರ್ಕಾರಕ್ಕೆ ಸದಾನಂದ ಗೌಡ, ರಮೇಶ ಜಿಗಜಿಣಗಿ ಹಾಗೂ ತಾವು ಸೇರಿಕೊಂಡು ಕೇಂದ್ರ ಸಚಿವೆ ಉಮಾ ಭಾರತಿ ಅವರಿಗೆ ಕಾವೇರಿ ಸಂಕಷ್ಟ ತಿಳಿಸಿದೆವು ಅದಾದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಕಾವೇರಿ ನಿರ್ವಹಣಾ ಮಂಡಳಿಯ ರಚನೆ ಬೇಡ ಎಂದು ಸುಪ್ರಿಂ ಕೋರ್ಟ್ ಗೆ ತಿಳಿಸಿದ್ದಾರೆ ಎಂದರು.
ಮುಂದಿನ ಉತ್ತರ ಪ್ರದೇಶ, ಗೋವಾ, ಗುಜರಾತ, ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ಬಹುಮತಗಳಿಂದ ಗೆಲ್ಲುವು ಸಾಧಿಸಲಿದೆ. ಆಗ ದೇಶದಲ್ಲಿ ಕಾಂಗ್ರೆಸ್ ಪಕ್ಷ ದೂಳಿಪಟವಾಗಲಿದೆ. ಕೇವಲ 400 ದಿನಗಳಲ್ಲಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿಯೂ ಚುನಾವಣೆ ಹತ್ತಿರವಾಗುತ್ತಿದೆ. ಈಗಿನಿಂದಲೇ ಕಾರ್ಯಕರ್ತರು ದುಡಿಯಬೇಕಿದೆ. ಪ್ರತಿಯೊಂದು ಬೂತ್ ನಲ್ಲಿ ಪಕ್ಷ ಬಲಪಡಿಸಿ ಬೆಳೆಸಬೇಕಲ್ಲದೆ, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ವಿಷಯವನ್ನು ಜನತೆಗೆ ಮನವರಿಕೆ ಮಾಡಿಕೊಡಬೇಕಿದೆ. ಕಾಂಗ್ರೆಸ್ ಆಡಳಿತದ ಬಗ್ಗೆ ಜನರು ಹಾಗೂ ಸರ್ಕಾರಿ ಅಧಿಕಾರಿಗಳು ಬೇಸತ್ತು ಹೋಗಿದ್ದಾರೆ. ಸಾಕಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ನೂರರಲ್ಲಿ ಶೇ. 50 ಸಹ ಸರಕಾರದ ಹಣ ಖರ್ಚಾಗುತ್ತಿಲ್ಲ. ಸರ್ಕಾರ ಮತ್ತು ಅಧಿಕಾರಿಗಳು ಸರ್ಕಾರದ ಬೊಕ್ಕಸ ತಿಂದು ಹಾಕುತ್ತಿದ್ದಾರೆ. ಬೃಹತ ಮೊತ್ತದ ಸರ್ಕಾರದ ಹಣ ಏನಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳು ಜಾರಿಯಾಗುತ್ತಿಲ್ಲ ಎಂದು ಯಡಿಯೂರಪ್ಪ ಹೇಳಿದರು.
ರಾಜ್ಯಕ್ಕೆ ಕವಿದ ಕಾರ್ಮೋಡ ಸರಿಯುತ್ತಿದೆ:ಡಿ.ವಿ. ಸದಾನಂದಗೌಡ
ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟಿಗೆ ನಾಲ್ಕು ಅಂಶದ ಆಧಾರದ ಮೇಲೆ ಅಫಿಡವಿಟ್ ಸಲ್ಲಿಸಿದ್ದು, ಇದನ್ನು ನ್ಯಾಯಾಲಯ ಸ್ವೀಕರಿಸಿ ನಾಳೆ ವಿಚಾರಣೆಗೆ ತೆಗೆದುಕೊಳ್ಳಲಿದೆ. ಇದರಿಂದಾಗಿ ರಾಜ್ಯಕ್ಕೆ ಕವಿದ ಕಾರ್ಮೋಡ ಸರಿದಂತಾಗಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಸಭೆಗೆ ಆಗಮಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳು ಸುಪ್ರೀಂ ನಿರ್ಣಯಕ್ಕೆ ಅಫಿಡವಿಟ್ ಸಲ್ಲಿಸುತ್ತಿದ್ದು, ನರೇಂದ್ರ ಮೋದಿಯವರು ಕರ್ನಾಟಕದ ಆರು ಕೋಟಿ ಕನ್ನಡಿಗರ ಮನದಾಳವನ್ನು ಅರಿತು ಕೇಂದ್ರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರಿಂದ ನಾಲ್ಕಂಶದ ಅಫಿಡವಿಟ್ ಸಲ್ಲಿಸಲು ಮುಂದಾಗಿದ್ದಾರೆ ಎಂದು ಸದಾನಂದ ಗೌಡ ಹೇಳಿದರು.
ಅಫಿಟವಿಟ್ ನಲ್ಲಿರುವ ನಾಲ್ಕಂಶಗಳಲ್ಲಿರುವ ವಿಚಾರಗಳ ವಿವರಣೆ ನೀಡಿ ಮಾತನಾಡಿದ ಅವರು, ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರದಲ್ಲಿ ನ್ಯಾಯಾಂಗ ಮಧ್ಯಪ್ರವೇಶ ಸರಿಯಲ್ಲ. ಸಂಸತ್ತಿನ ಎರಡೂ ಸದನಗಳಲ್ಲಿ ಈ ಬಗ್ಗೆ ವಿಧೇಯಕ ಮಂಡಿಸಿ ಅನುಮೋದನೆ ಪಡೆದ ಬಳಿಕವೇ ಮಂಡಳಿ ರಚಿಸಲು ಸಾಧ್ಯ. ಇನ್ನು ಇದು ಕೇವಲ ಕರ್ನಟಕ ಕೇರಳ ರಾಜ್ಯಗಳಿಗೆ ಮಾತ್ರ ಸೀಮಿತವಾಗದೆ ಕೇರಳ ಹಾಗೂ ಪುದುಚೇರಿಯೂ ಇದರಲ್ಲಿ ಸೇರಬೇಕು. 2007ರಿಂದಲೇ ಸುಪ್ರೀಂ ಕೋರ್ಟಿನಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚನೆ ಬಗ್ಗೆ ಮನವಿ ಇದ್ದು, ಅದನ್ನು ಬದಿಗೊತ್ತಿ 4ನೇ ಮನವಿಯನ್ನು ಪುರಸ್ಕರಿಸುವುದು ಸರಿಯಾದ ಕ್ರಮವಲ್ಲ, ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಈಗಾಗಲೇ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಸಿವಿಲ್ ದಾವೆ ದಾಖಲಿಸಿದ್ದು, ಅವರು ಇತ್ಯರ್ಥವಾಗುವ ಮೊದಲೇ ತರಾತುರಿಯಲ್ಲಿ ಮಂಡಳಿ ರಚನೆ ಮಾಡುವ ನಿರ್ಧಾರ ಸರಿಯಾದ ಕ್ರಮವಲ್ಲ ಎಂದು ಅಫಿಟವಿಟ್ ನಲ್ಲಿ ವಿವರಿಸಲಾಗಿದ್ದು, ಇದನ್ನು ನ್ಯಾಯಾಲಯ ಪುರಸ್ಕರಿಸುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಲಕ್ಷ್ಮಣ ಸವದಿ ಅವರಿದ್ದರು.
ರಾಜ್ಯ ಸರ್ಕಾರ ನೀರಿನ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ: ಮುರುಳೀಧರ ರಾವ್
ಕರ್ನಾಟಕ ರಾಜ್ಯದ ಕಾವೇರಿ ಹಾಗೂ ಮಹದಾಯಿ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಲು ಸಿದ್ದರಿದ್ದಾರೆ ಆದರೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ನೀರಿನ ವಿಷಯದಲ್ಲಿ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ಉಸ್ತುವಾರಿ ಮುರುಳಿಧರ ರಾವ್ ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಇಂದು ಮಾತನಾಡಿದರು. ಕೇಂದ್ರ ಸರ್ಕಾರ ರಾಜ್ಯದ ರೈತರ ಹಾಗೂ ಜನತೆಯ ಹಿತ ಸುಧಾರಿಸಲು ಪ್ರಯತ್ನಿಸುತ್ತಿದೆ. ರಾಜ್ಯದಲ್ಲಿ ಜನರು ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಇದನ್ನು ಮನಗಂಡ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಸ್ಥಿಕೆ ವಹಿಸಲು ಸಿದ್ದರಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀರಿನ ವಿಷಯದಲ್ಲಿ ವಿನಾಕಾರಣ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.
1887ರ ಸ್ವಾತಂತ್ರ್ಯ ಕ್ರಾಂತಿ ಮುಂಚೆ ಬೆಳಗಾವಿ ಜಿಲ್ಲೆಯಾಗಿದ್ದು ಇದು ಸ್ವಾಭಿಮಾನ ಮತ್ತು ಪರಾಕ್ರಮದ ನಾಡಾಗಿ ದೇಶದಲ್ಲಿ ಹೆಸರುವಾಸಿಯಾಗಿದೆ. ಕಾವೇರಿ ವಿಷಯದಲ್ಲಿ ಬೆಂಗಳೂರಿನಲ್ಲಿ ವಿಶೇಷ ಅಧಿವೇಶನದಲ್ಲಿ ರಾಜ್ಯದ ಬಿಜೆಪಿ ನಾಯಕರುಗಳು ಭಾಗವಹಿಸಿದ ಹಿನ್ನೆಲೆಯಲ್ಲಿ ಪ್ರಮುಖರು ಇಲ್ಲಿ ಬಂದಿಲ್ಲ ಎಂದರು. ಕರ್ನಾಟಕದಲ್ಲಿ ಜನರು ಉತ್ತಮವಾದ ಆಡಳಿತ, ಜೀವನವನ್ನು ಸುಧಾರಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದೆ. ಆದರೆ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ವಿನಾಕಾರಣ ಕುಡಿಯುವ ನೀರಿನ ವಿಚಾರ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಇದರಿಂದ ಆ ನೀರಿನ ವಿಷಯ ನ್ಯಾಯಾಂಗದಲ್ಲಿ ಉಳಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Discussion about this post