ಶ್ರೀನಗರ, ಅ.30: ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ, ಭಾರತೀಯ ಯೋಧನ ದೇಹ ತುಂಡರಿಸಿ ವಿಕೃತಿ ಹಾಗೂ ಅಟ್ಟಹಾಸ ಮೆರೆದ ಪಾಕಿಸ್ಥಾನದ ವಿರುದ್ಧ ಭಾರತೀಯ ಯೋಧರು ಸಿಡಿದೆದ್ದಿದ್ದು, ಪಾಕ್ ಗೆ ಸೇರಿದ ನಾಲ್ಕು ಕ್ಯಾಂಪ್ ಗಳನ್ನು ಧ್ವಂಸ ಮಾಡಿದ್ದಾರೆ. ಈ ಘಟನೆಯಲ್ಲಿ ಪಾಕಿಸ್ಥಾನದ ಹಲವು ಉಗ್ರರು ಹತರಾಗಿರುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಈ ಕುರಿತಂತೆ ಮಾತನಾಡಿರುವ ಭಾರತೀಯ ಸೇನಾ ಕಮಾಂಡರ್ ಒಬ್ಬರು, ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೆರಣ್ ಸೆಕ್ಟರ್ ನಲ್ಲಿ ಭಾರೀ ಗುಂಡಿನ ದಾಳಿ ನಡೆದಿದೆ. ಪಾಕ್ ಯೋಧರ ದಾಳಿ ನಮ್ಮ ಸೈನಿಕರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಈ ದಾಳಿಯಲ್ಲಿ ಪಾಕ್ ನ ಹಲವು ಸೈನಿಕರು ಮೃತರಾಗಿದ್ದಾರೆ ಎಂಬ ಮಾಹಿತಿ ಬಂದಿದ್ದು, ಈ ಕುರಿತು ಅಧಿಕೃತ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
ಆದರೆ, ಒಂದು ಮೂಲಗಳ ಪ್ರಕಾರ, ಭಾರತೀಯ ಸೇನೆಯ ದಿಟ್ಟ ಪ್ರತ್ಯುತ್ತರಕ್ಕೆ ಪಾಕ್ ನ ಸುಮಾರು 20ಕ್ಕೂ ಅಧಿಕ ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗಿದೆ.
ಸೀಮಿತ ದಾಳಿ ಬಳಿಕ ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡಿರುವ ಪಾಕಿಸ್ತಾನ ಸೇನೆ, ಗಡಿಯಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ನಿನ್ನೆ ನಡೆದ ಗುಂಡಿನ ದಾಳಿಯಲ್ಲಿಯೂ ಭಾರತೀಯ ಯೋಧನನ್ನು ಪಾಕಿಸ್ಥಾನದ ಉಗ್ರರು ಭೀಕರವಾಗಿ ಹತ್ಯೆ ಮಾಡಿದ್ದರು. ಯೋಧನ ದೇಹವನ್ನು ತುಂಡರಿಸಿದ್ದರು.
ಇದಕ್ಕೆ ಪ್ರತೀಕಾರ ಎಂಬಂತೆ ಪ್ರತಿದಾಳಿ ಆರಂಭಿಸಿರುವ ಭಾರತೀಯ ಸೇನೆ, ಉಗ್ರರಿಗೆ ದಿಟ್ಟ ಉತ್ತರ ನೀಡುತ್ತಿದೆ. ಪಾಕಿಸ್ಥಾನ ಸೇನೆ ಗಡಿಯಲ್ಲಿ ಭಾರೀ ಪ್ರಮಾಣದಲ್ಲಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ. ಅಲ್ಲದೆ ಕೆರಾಣ್ ಸೆಕ್ಟರ್ ಬಳಿ ಸಾಕಷ್ಟು ಬಾರಿ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಪಾಕಿಸ್ಥಾ ನ ಸೇನೆಯ ದಾಳಿಗೆ ಓರ್ವ ಯೋಧ, ನಾಗರೀಕರೊಬ್ಬರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೈನಿಕರ ದಾಳಿಗೆ ಭಾರತೀಯ ಸೇನೆ ಕೂಡ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.















