Read - 2 minutes
ಬೆಂಗಳೂರು, ಆ.31: ಭೂ ಕಬಳಿಕೆದಾರರ ವಿರುದ್ಧ ಜಾಮೀನು ರಹಿತ ಪ್ರಕರಣಗಳು ದಾಖಲಾಗಬೇಕು, ಕಠಿಣ ಶಿಕ್ಷೆಯಾಗುವಂತಾಗಬೇಕು, ಭೂ ಕಬಳಿಕೆ ಕೇವಲ ಕಬಳಿಕೆದಾರರಿಂದಷ್ಟೇ ಆಗಿಲ್ಲ, ಸರ್ಕಾರಿ ಅಧಿಕಾರಿಗಳೂ ಇದಕ್ಕೆ ನೆರವು ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಂದಾಯ ಭವನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011ರ ಅನ್ವಯ ಸ್ಥಾಪನೆಯಾದ ವಿಶೇಷ ನ್ಯಾಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸದನ ಜಂಟಿ ಸಮಿತಿ ವರದಿ ಪ್ರಕಾರ ಬೆಂಗಳೂರು ಒಂದರಲ್ಲೇ 1.22 ಲಕ್ಷ ಸಾವಿರ ಎಕರೆ ಜಾಗ ಒತ್ತುವರಿಯಾಗಿದೆ. 34 ಸಾವಿರ ಒತ್ತುವರಿ ಪ್ರಕರಣಗಳಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಭೂಮಿಗೆ ಬೆಲೆ ಹೆಚ್ಚಾಗಿರುವುದರಿಂದ ಭೂ ಅಕ್ರಮ ಹೆಚ್ಚಾಗಿದೆ. ಕಬಳಿಕೆ ಕೇವಲ ಕಬಳಿಕೆದಾರರಿಂದಷ್ಟೇ ಆಗಿಲ್ಲ, ಸರ್ಕಾರಿ ಅಧಿಕಾರಿಗಳು ಇದಕ್ಕೆ ನೆರವು ನೀಡಿದ್ದಾರೆ ಅಲ್ವೇನ್ರೀ ಎಂದು ಕಂದಾಯ ಇಲಾಖೆ ಅಧಿಕಾರಿಗಳನ್ನು ಕೇಳಿದರು. ಇಲಾಖೆ ಅಧಿಕಾರಿಗಳು ಮೌನ ವಹಿಸಿದಾಗ, ಮಾತಾಡ್ರೀ ನೀವು ಎಂದು ಹೇಳಿದರು.
ಭೂ ಕಬಳಿಕೆದಾರರು ಹಣದಿಂದ ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಭೂ ಕಬಳಿಕೆ ಮಾಡಿ ದುಡ್ಡು ಮಾಡಿದವರು ಏನನ್ನು ಬೇಕಾದರೂ ಖರೀದಿ ಮಾಡಬಹುದು ಎಂದುಕೊಂಡಿದ್ದಾರೆ. ಸಚಿವರನ್ನು, ಮುಖ್ಯಮಂತ್ರಿಯನ್ನು ಕೊಂಡುಕೊಳ್ಳಬಹುದು, ನ್ಯಾಯಾಧೀಶರನ್ನು ಬೇಕಾದರೂ ಕೊಂಡುಕೊಳ್ಳಬಹುದು ಎಂದುಕೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿದರು.
ಭೂ ಕಬಳಿಕೆದಾರರ ವಿರುದ್ಧ ಜಾಮೀನು ರಹಿತ ಪ್ರಕರಣಗಳು ದಾಖಲಾಗಬೇಕು, ಕೆಲವರು ವಿಶೇಷ ಕೋರ್ಟ್ ಸ್ಥಾಪನೆಯಾಗದಂತೆ ತಡೆಯುವ ಯತ್ನ ಮಾಡಿದ್ದರು. ಅವರಿಗೆಲ್ಲ ಈಗ ನಡುಕ ಶುರುವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ವಿಶೇಷ ನ್ಯಾಯಾಲಯದಲ್ಲಿ ದಾಖಲಾಗುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿ ಶಿಕ್ಷೆ ವಿಧಿಸುವಂತಾಗಲು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ಐವರ ಸಮಿತಿ ರಚಿಸಲಾಗಿದೆ ಎಂದರು.
ಭೂಕಬಳಿಕೆದಾರರಿಗೆ ಶಿಕ್ಷೆ ವಿಧಿಸುವುದರ ಜೊತೆಗೆ ನಿರಪರಾಧಿಗಳಿಗೆ ಶಿಕ್ಷೆಯಾಗದಂತೆ ನೋಡಿಕೊಳ್ಳುವ ಅಗತ್ಯವಿದೆ. ಭೂ ಕಬಳಿಕೆ ದೊಡ್ಡ ಮಾಫಿಯಾವಾಗಿ ಬೆಳೆದಿದ್ದು, ಬಿಲ್ಡರ್ ಗಳಿರಲಿ, ಸಮಾಜದ ಎಷ್ಟೇ ಪ್ರತಿಷ್ಠಿತರಿರಲಿ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಭಾರತೀಯ ದಂಡ ಸಂಹಿತೆಯಲ್ಲಿ ಅನೇಕ ಕಾನೂನುಗಳಿವೆ. ಆದರೂ ಅವುಗಳ ಅನುಷ್ಠಾನದ ಕೊರತೆಯಿಂದ ಕಬಳಿಕೆದಾರರಿಗೆ ಅನುಕೂಲವಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾವಿರಾರು ಎಕರೆ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವು ಮಾಡಲಾಗಿದೆ ಎಂದು ತಿಳಿಸಿದರು.
ಕಾನೂನು ಸಚಿವ ಜಯಚಂದ್ರ ಮಾತನಾಡಿ, ಭೂಮಿಯನ್ನು ಕಬಳಿಸಿ ಸೊಕ್ಕಿನಿಂದ ಮೆರೆಯುವ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವವರ ಅಟ್ಟಹಾಸವನ್ನು ನಿಯಂತ್ರಿಸಬೇಕಿದೆ ಎಂದು ಹೇಳಿದರು.
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ಇರುವ ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ ಒತ್ತುವರಿ ತೆರವಿಗೆ ಮುಂದಾಗಿ ಎಂದು ಹೇಳಿದರು.
ನಗರ ಜಿಲ್ಲಾಧಿಕಾರಿ ವಿ. ಶಂಕರ್, ಅಧಿಕಾರಿಗಳಾದ ಎಂ.ವೈ. ಜಯಂತಿ, ರಮಣರೆಡ್ಡಿ, ಎಚ್.ಕೆ. ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಕಾನೂನಿನ ಅನುಷ್ಠಾನ ಪರಿಣಾಮಕಾರಿಯಾಗಿರಲಿ: ಸಿಎಂ
ರಾಜ್ಯದಲ್ಲಿ ಇದೊಂದು ಸ್ಮರಣೀಯ ಮತ್ತು ಐತಿಹಾಸಿಕ ದಿನವಾಗಿದ್ದು, ಕಾನೂನು ಜಾರಿಗೆ ತರುವುದಕ್ಕಿಂತ ಮುಖ್ಯವಾಗಿ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಅತಿ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಬೆಂಗಳೂರಿನ ಕಂದಾಯ ಭವನದಲ್ಲಿ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮದಡಿಯಲ್ಲಿ ನೂತನವಾಗಿ ಸ್ಥಾಪಿಸಿರುವ ವಿಶೇಷ ನ್ಯಾಯಾಲಯ ಉದ್ಘಾಟಿಸಿ ಮಾತನಾಡಿದರು. .
ಬೆಂಗಳೂರಿನಲ್ಲಿ ಒಟ್ಟು 1.23 ಲಕ್ಷ ಎಕರೆ ಸರಕಾರಿ ಜಮೀನಿದ್ದು ಅದರಲ್ಲಿ 34,111 ಎಕರೆ ಜಮೀನು ಒತ್ತುವರಿಯಾಗಿದೆ ಎಂದು 2007ರ ವರದಿಯಲ್ಲಿ ತಿಳಿಸಲಾಗಿತ್ತು, ಇದರಲ್ಲಿ ಉದ್ಯಾನವನ ಮತ್ತು ಸಾರ್ವಜನಿಕ ಉಪಯೋಗಿ ಸ್ಥಳಗಳು ಸೇರಿದಂತೆ 16,596 ಎಕರೆ ಭೂಮಿಯನ್ನು ತೆರವುಗೊಳಿಸಲು ಸಾದ್ಯವಿಲ್ಲ. ಉಳಿದ 17515 ಎಕರೆ ಅತಿಕ್ರಮಣವಾಗಿತ್ತು ಅದರಲ್ಲಿ 15641 ಎಕರೆ ಭೂಮಿಯನ್ನು ಒತ್ತುವರಿಯಿಂದ ತೆರವುಗೊಳಿಸಲಾಗಿದೆ, ಅದರಲ್ಲಿ ವಿಶೇಷವಾಗಿ ತಮ್ಮ ಅಧಿಕಾರಾವಧಿಯಲ್ಲಿ 6,000 ಎಕರೆ ಸರಕಾರಿ ಭೂಮಿಯನ್ನು ತೆರವುಗೊಳಿಸಿದ ತೃಪ್ತಿ ತಮಗಿದೆ ಎಂದರು.ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಅವರು ಕಾನೂನು ಸಚಿವನಾಗಿ ಇಂದು ನಾನು ಅತ್ಯಂತ ಸಂಭ್ರಮ ಪಡುವ ಕ್ಷಣ, ಇವತ್ತಿನಿಂದ ಹೊಸ ಕಾನೂನು ಜಾರಿಯಾಗಿದೆ, ಅಕ್ರಮ ಆಸ್ತಿವಂತರ ಅಟ್ಟಹಾಸ ಹೆಚ್ಚಾಗಿದೆ, ಸಾವಿರಾರು ಎಕ್ಕರೆ ಸರಕಾರಿ ಭೂಮಿಯನ್ನು ಮರಳಿ ಪಡೆಯಲು ಮುಖ್ಯಮಂತ್ರಿಯವರು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದರ ಮೂಲಕ ದಿಟ್ಟತನ ಮೆರೆದಿದ್ದಾರೆ, ಹಿಂದಿನ ಯಾವ ಮುಖ್ಯಮಂತ್ರಿ ಮಾಡಲಾರದ್ದನ್ನು ಸಿದ್ದರಾಮಯ್ಯ ಸಾಧಿಸಿ ತೋರಿಸಿದ್ದಾರೆ ಎಂದು ಹೇಳಿದರು.
ನ್ಯಾಯಾಲಯದ ವ್ಯಾಪ್ತಿ ರಾಜ್ಯಮಟ್ಟಕ್ಕಿದ್ದು ಅದರಲ್ಲಿ ಮುಖ್ಯವಾಗಿ ನಗರ ಸ್ಥಾನಗಳಲ್ಲಿ ನಡೆದಿರುವ ಅತಿಕ್ರಮಣಗಳ ಒತ್ತನ್ನು ನೀಡಬೇಕು, ಮುಂದಿನ 3 ತಿಂಗಳಲ್ಲಿ ಈ ನ್ಯಾಯಾಲಯದ ಮುಖಾಂತರ 500ಕ್ಕೂ ಹೆಚ್ಚು ಕೇಸುಗಳನ್ನು ಬಗೆಹರಿಸುವಂತಾಗಬೇಕು ಎಂದರು.
Discussion about this post