ಬೆಂಗಳೂರು, ಅ.13: ಮಹದಾಯಿ ಜಲವಿವಾದಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಇದೇ 19 ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ ಎಂದು ಕಾನೂನು ಸಚಿವ ಟಿಬಿ ಜಯಚಂದ್ರ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಲೋಕಸಭೆ ರಾಜ್ಯ ಸಭೆ, ಸಂಬಂಧಪಟ್ಟ ಶಾಸಕರು, ವಿಧಾನಪರಿಷತ್ ಸದಸ್ಯರು, ಪ್ರತಿಪಕ್ಷ ಮುಖಂಡರು ಭಾಗಿಯಾಗಲಿದ್ದಾರೆ.
ಹಿಂದೆ ಸರ್ವಪಕ್ಷ ನಿಯೋಗವನ್ನು ಪ್ರಧಾನಿ ಮೋದಿಯವರ ಬಳಿ ಕೊಂಡೊಯ್ಯಲಾಗಿತ್ತು, ಆ ವೇಳೆ ಮಹಾರಾಷ್ಟ್ರ,ಗೋವಾ ಸರ್ಕಾರದೊಂದಿಗೆ ಚರ್ಚಿಸಿ ಒಪ್ಪಿಸಿ ಎಂದಿದ್ದರು, ಇದೀಗ ಅಕ್ಟೋಬರ್ 21 ರ ನಂತರ ಮಹದಾಯಿ ವಿಚಾರ ಕೇಂದ್ರದ ಬಳಿಯೇ ಹೋಗಲಿದೆ ಎಂದು ಹೇಳಿದರು.
ಬರ ತಾಲೂಕುಗಳೆಂದು ಘೋಷಣೆ ಮಾಡಲು ಅನೇಕ ಮಾನದಂಡ ಅನುಸರಿಸಬೇಕಾಗುತ್ತದೆ, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದೇವೆ ಈಗಾಗಲೇ ನಮ್ಮ ಜಿಲ್ಲೆಯ ವರದಿಯನ್ನು ತಯಾರಿಸಿದ್ದೇನೆ, ತುಮಕೂರು ಜಿಲ್ಲೆಯಲ್ಲೇ 140 ಕೋಟಿ ಬೆಳೆಹಾನಿ ಉಂಟಾಗಿದೆ ಬೆಳೆಹಾನಿ ಬಗ್ಗೆ ಪ್ರತಿ ಜಿಲ್ಲೆಯಿಂದಲೂ ವರದಿ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಷ್ಟ್ರೀಯ ಜಲ ನೀತಿ ಇನ್ನೂ ಚರ್ಚೆಯ ಹಂತದಲ್ಲೇ ಇದೆ, ಹೇಮಾವತಿಗೆ ಕೇಂದ್ರದ ತಂಡ ಆಗಮಿಸದಾಗ ನಾನೂ ಹೋಗಿದ್ದೆ, ಸಮಸ್ಯೆ ಮನವರಿಕೆ ಮಾಡಿಕೊಟ್ಟೆ, ಕರ್ನಾಟಕಕ್ಕೆ ಕುಡಿಯೋ ನೀರಿನ ಸಮಸ್ಯೆ ಇದೆ ಎಂಬುದು ಕೇಂದ್ರದ ತಂಡಕ್ಕೆ ಮನವರಿಕೆ ಆಗಿದೆ ಎಂದು ಭಾವಿಸಿದ್ದೇನೆ, ಇನ್ನು ಕಾವೇರಿ ಜಲವಿವಾದ ವಿಚಾರ ಅಕ್ಟೋಬರ್ 18 ಕ್ಕೆ ಮುಖ್ಯ ಅರ್ಜಿ ವಿಚಾರಣೆಗೆ ಬರಲಿದೆ, ಸೋಮವಾರ ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು,
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಅಮಿತ್ ರಾಯ್ ಹಾಗೂ ಅಜಯ್ ಕನ್ವಿಕಾಂತ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ಕಾವೇರಿ ವಿವಾದ ವಿಚಾರಣೆಗೆ ಬರಲಿದೆ ಎಂದು ತಿಳಿಸಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ ತುಂಡುಗುತ್ತಿಗೆ ಅವ್ಯವಹಾರಕ್ಕೆ ಸಂಬಂಧಿಸಿದಂತೆ 26 ಅಧಿಕಾರಿಗಳು, 46 ಗುತ್ತಿಗೆದಾರರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದರು.
ನೈಸ್ ವಿಚಾರ ಮುಗಿಯುವ ಹಂತ ತಲುಪಿದೆ, ವರದಿ ಮುದ್ರಣವೊಂದೇ ಬಾಕಿ ಇದ್ದು, ವರದಿಯನ್ನು ಸ್ಪೀಕರ್ ಗೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.
ಸಚಿವ ಎ ಮಂಜು ಅಧಿಕಾರಿಗೆ ಧಮ್ಕಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರನ್ನು ಸಮರ್ಥಿಸಿಕೊಂಡ ಸಚಿವ ಟಿಬಿ ಜಯಚಂದ್ರ, ಕೆಲಸ ಆಗಬೇಕೆಂಬ ಹಿನ್ನಲೆಯಲ್ಲಿ ಏರುಧ್ವನಿಯಲ್ಲಿ ಮಾತಾಡಿರಬೇಕು, ಅದನ್ನು ಹೆದರಿಸಿದ್ದಾರೆ ಅನ್ನುವುದು ಸರಿಯಲ್ಲ, ಆಡಳಿತ ನಡೆಸೋ ಸಮಯದಲ್ಲಿ ಮಂಜು ಅಧಿಕಾರಿಯನ್ನು ಪ್ರಶ್ನಿಸಿರಬಹುದು, ಇಲ್ಲದಿದ್ದರೆ ಅಧಿಕಾರಿಗಳಿಂದ ಕೆಲಸ ಮಾಡಿಸೋದು ಹೇಗೆ ಎಂದು ಮರುಪ್ರಶ್ನಿಸಿದರು.
ಸ್ಟೀಲ್ ಬ್ರಿಡ್ಜ್ ಸಂಬಂಧಿಸಿದಂತೆ ವ್ಯಾಪಕ ಟೀಕೆಗಳು ಕೇಳಿಬರುತ್ತಿದ್ದು, ಈ ಕುರಿತು ಕಳೆದ ಸಂಪುಟದಲ್ಲೇ ತೀರ್ಮಾನವಾಗಿದೆ, ಈ ಬಗ್ಗೆ ಯಾವುದೇ ಗೊಂದಲವಿಲ್ಲ ಎಲ್ಲವೂ ಪರಿಹಾರವಾಗಿದೆ ಎಂದು ಸ್ಪಷ್ಟಪಡಿಸಿದರು. ಹೆಚ್ಚು ಟ್ರಾಫಿಕ್ ಸಮಸ್ಯೆ ಆಗಿರುವುದರಿಂದ ಸೇತುವೆ ಅನಿವಾರ್ಯವಿದೆ ಏನೂ ಮಾಡಲು ಸಾಧ್ಯವಿಲ್ಲ, ಸ್ಟೀಲ್ ಬ್ರಿಡ್ಜ್ ನಿರ್ಮಾಣಗೊಳ್ಳಲಿದೆ ಎಂದು ಹೇಳಿದರು.
ಶಿವಮೊಗ್ಗದ 4 ಕೆರೆಗಳಿಗೆ ತುಂಗಭದ್ರಾ ನದಿ ನೀರು ತುಂಬಿಸುವ ಏತನೀರಾವರಿ 6 ಕಾಮಗಾರಿಗಳು ಮುಗಿದಿವೆ. ದೊಡ್ಡಹಳ್ಳಿ, ಕಾಕನಹೊಸುಡಿ, ಗುಡ್ಡದ ತಿಮ್ಮನಹಳ್ಳಿ, ಹೊಳಕೂರು, ನಾರಾಯಣ ಕೆರೆ ಸೀಗೆಹಳ್ಳಿ ಗಳಲ್ಲಿ 2007 ರಲ್ಲಿ ಕಾಮಗಾರಿ ಆರಂಭವಾಗಿತ್ತು, 2013 ರಲ್ಲಿ ಕಾಮಗಾರಿ ಮುಗಿದಿದೆ. ಇದರಲ್ಲಿ ಒಟ್ಟು ಅಂದಾಜು 16 ಕೋಟಿ ಮೊತ್ತದ ಕಾಮಗಾರಿ ಮುಗಿದಿದ್ದರೂ ಇನ್ನೂ ಕೆರೆಗಳಿಗೆ ನೀರು ಹರಿದಿಲ್ಲ ಈ ಯೋಜನೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ, ಗುತ್ತಿಗೆದಾರರ 1.5 ಕೋಟಿ ರೂ ಮೊತ್ತದ ಇ.ಎಮ್.ಡಿ ಮುಟ್ಟಗೋಕು ಹಾಕಲಾಗುತ್ತದೆ ಎಂದು ತಿಳಿಸಿದರು.