ಶಿವಮೊಗ್ಗ, ಆ.31: ರಜೆಗಳಿಲ್ಲದೆ ನಿರಂತರವಾಗಿ ಕಾರ್ಯನಿರ್ವಹಿಸುವ ಅನಿವಾರ್ಯತೆ, ಸಹಜವಾದ ಹಿರಿಯ ಅಧಿಕಾರಿಗಳ ಕೆಲಸದ ಒತ್ತಡದಿಂದ ಪೊಲೀಸರು ಪ್ರಾಮಾಣಿಕವಾಗಿ ತೃಪ್ತಿಕರವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಮೀರಾ ಸಿ. ಸಕ್ಸೇನಾ ಹೇಳಿದರು.
ಡಿಎಆರ್ ಸಭಾಂಗಣದಲ್ಲಿ ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆ ಎಂಬ ವಿಷಯದ ಕುರಿತು ಪೊಲೀಸ್ ಅಧಿಕಾರಿಗಳಿಗಾಗಿ ಏರ್ಪಡಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪೊಲೀಸ್ ಅಧಿಕಾರಿಗಳಿಗೆ ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲಕಳೆಯಲು ಸಾಧ್ಯವಾಗದಿರುವುದು, ಪೊಲೀಸ್‌ರಿಂದ ಉತ್ತಮ ಸೇವೆ ಬಯಸುವ ಸಾರ್ವಜನಿಕರು ಇವೆಲ್ಲವುಗಳಿಂದಾಗಿ ಒತ್ತಡದಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಕೆಲವು ತುರ್ತು ಸಂದರ್ಭಗಳಲ್ಲಿ ಪೊಲೀಸರು ತಾಳ್ಮೆ ಕಳೆದುಕೊಳ್ಳದೇ ಸಾರ್ವಜನಿಕರೊಂದಿಗೆ ನಡೆದುಕೊಳ್ಳುವ ಬಗ್ಗೆ, ಸಮಸ್ಯೆ-ಸವಾಲುಗಳನ್ನು ಎದುರಿಸುವ ಬಗೆ ಹೇಗೆ ಎಂಬ ಬಗ್ಗೆ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದ ಅವರು, ಒತ್ತಡದಿಂದಾಗಿ ಪೊಲೀಸರು ತಮ್ಮ ವರ್ತನೆಯಲ್ಲಾದ ತಪ್ಪುಗಳನ್ನು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಇಲಾಖೆಯ ಬಗೆಗೆ ಜನಮಾನಸದಲ್ಲಿರುವ ತಪ್ಪು ಮಾಹಿತಿಯಿಂದಾಗಿ ಇಂದಿಗೂ ಅನೇಕರು ಪೊಲೀಸ್ ಠಾಣೆಗೆ ಬರಲು ಹಿಂದೇಟು ಹಾಕುತ್ತಾರೆ. ಕಳ್ಳರು, ಡಕಾಯಿತರು ಠಾಣೆಯ ಒಟನಾಡಿಗಳಾಗಿದ್ದಾರೆ. ಆದರೆ, ಅಮಾಯಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಪೊಲೀಸ್‌ಠಾಣೆಗೆ ಯಾವುದೇ ಆತಂಕವಿಲ್ಲದೆ ಬರುವಂತಹ ಜನಸ್ನೇಹಿ ವಾತಾವರಣ ನಿರ್ಮಿಸಬೇಕಾದ ಅಗತ್ಯವಿದೆ ಎಂದರು.
ಇತ್ತೀಚೆಗೆ ರಾಜ್ಯದ ಮಹದಾಯಿ ವಿಷಯದ ಕುರಿತು ನಡೆದ ಗಲಭೆಯಲ್ಲಿ ಪೊಲೀಸರು ನಡೆಸಿದ ಲಾಟಿಪ್ರಹಾರದ ಕುರಿತು ಸಾಮಾಜಿಕ ವಲಯದಲ್ಲಿ ಬಹು ದೊಡ್ಡ ಚರ್ಚೆಗಳು ನಡೆದಿವೆ. ಪೊಲೀಸ್ ಇಲಾಖೆ ವಿರುದ್ದ ಅನೇಕ ದೂರುಗಳು ದಾಖಲಾಗಿವೆ. ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸರ ಕರ್ತವ್ಯದಲ್ಲಿ ಕೊಂಚ ವ್ಯತ್ಯಯ ಉಂಟಾದರೂ ಪೊಲೀಸರ ವೈಫಲ್ಯ ಎಂಬ ಹಣೆಪಟ್ಟಿ ಖಚಿತವಾಗಿದೆ ಎಂದ ಅವರು ಎಲ್ಲರೂ ಮನುಷ್ಯರೇ. ಆದರೆ, ಪೊಲೀಸರು ಇಂತಹ ಸಂದರ್ಭದಲ್ಲಿ ಮಾನವೀಯ ನೆಲೆಯಲ್ಲಿ ವ್ಯವಹರಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಗ್ಲೋಬಲ್ ಕನ್ಸರ್ನ್ ಇಂಡಿಯಾ, ಸುರೇಶ್, ಮನೋಹರ್ ಉಪಸ್ಥಿತರಿದ್ದರು.
ದೇಶದಲ್ಲಿ ವಾಸಿಸುವ ಎಲ್ಲರಿಗೂ ಸಮಾನವಾದ ಹಕ್ಕು ಮತ್ತು ಕರ್ತವ್ಯಗಳಿರುವಂತೆಯೇ ಮನುಷ್ಯ ಹುಟ್ಟುತ್ತಿದ್ದಂತೆಯೇ ಮಾನವ ಹಕ್ಕುಗಳನ್ನು ಹೊಂದಿದ್ದಾನೆ. ಅವುಗಳನ್ನು ಯಾರೂ ಕೊಡಬೇಕಾದ ಅಗತ್ಯವಿಲ್ಲ. ಯಾವುದೇ ವ್ಯಕ್ತಿ ಸಮಾಜದಲ್ಲಿ ಗೌರವದಿಂದ ಬದುಕಲು ಬೇಕಾದ ಎಲ್ಲವೂ ಮಾನವ ಹಕ್ಕುಗಳ ಪರಿಧಿಯೊಳಗಿನ ವಿಷಯಗಳಾಗಿವೆ. ಎಲ್ಲ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಕಾರ್ಯಕ್ಷೇತ್ರದಲ್ಲಿ ಮಾನವೀಯ ನೆಲೆಯಲ್ಲಿ ಸೇವೆ ಸಲ್ಲಿಸಲು ಸಾಧ್ಯವಾಗುವುದಾದರೆ ಸಹಜವಾಗಿ ದೇಶದ ಪ್ರಗತಿ ಸಾಧ್ಯವಾಗಲಿದೆ. ಮಹಿಳೆಯರು ಶಿಕ್ಷಣ ಹೊಂದುವುದು ಇಂದಿನ ಅಗತ್ಯ. ಅವರಿಗೆ ಕೌಶಲ್ಯಗಳ ತರಬೇತಿ ಅಗತ್ಯವಿದೆ.
-ಮೀರಾ ಸಕ್ಸೇನಾ
ಮೀರಾ ಸಕ್ಸೇನಾ ಹೇಳಿದ್ದು…
*ಪೊಲೀಸರೇ ನಿಮಗೆ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಅನಿವಾರ್ಯತೆಯಿದೆ
*ತುರ್ತು ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳಬೇಡಿ
*ಆತಂಕವಿಲ್ಲದೇ ಜನಸಾಮಾನ್ಯರು ಠಾಣೆಗೆ ಬರುವಂತಾಗಬೇಕು
*ಒತ್ತಡವಿದ್ದರೂ ಮಾನವೀಯ ನೆಲೆಯಲ್ಲಿ ಕಾರ್ಯ ನಿರ್ವಹಿಸಿ
*ಮಾನವ ಹಕ್ಕು ಉಲ್ಲಂಘನೆಯಾಗುವ ಯಾವ ಕಾರ್ಯವನ್ನೂ ಮಾಡಬೇಡಿ
Discussion about this post